ಜಿಎಸ್ಟಿ ಕುರಿತ ಗೊಂದಲ-ಸಮಸ್ಯೆಗಳು ಬಗೆಹರಿಯಲಿವೆ
.jpg)
ಬೆಂಗಳೂರು, ಜು. 26: ಏಕರೂಪ ತೆರಿಗೆ ಜಿಎಸ್ಟಿಯಿಂದ ಮಾರುಕಟ್ಟೆ ವಲಯದಲ್ಲಿ ಮತ್ತು ಗ್ರಾಹಕರಿಗೆ ಎದುರಾಗಿರುವ ಗೊಂದಲ ಮತ್ತು ಸಮಸ್ಯೆಗಳನ್ನು ಹಂತ ಹಂತವಾಗಿ ಬಗೆಹರಿಸಲಾಗುವುದು ಎಂದು ನಗರ ವಲಯದ ಸೇವಾ ತೆರಿಗೆ ಇಲಾಖೆಯ ಮುಖ್ಯ ಆಯುಕ್ತ ಆರ್.ಬಿ.ತಿವಾರಿ ತಿಳಿಸಿದ್ದಾರೆ.
ನಗರದಲ್ಲಿ ಎಫ್‌ಕೆಸಿಸಿಐ ಜಿಎಸ್ಟಿ ಕುರಿತು ಹಮ್ಮಿಕೊಂಡಿದ್ದ ಸಂವಾದ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಜಿಎಸ್ಟಿಯಿಂದ ಆರ್ಥಿಕ ವಲಯ ಮತ್ತು ಸಾರ್ವಜನಿಕರಿಗೆ ಹಲವು ಸಮಸ್ಯೆ ಗೊಂದಲಗಳು ಎದುರಾಗಿವೆ. ಇವುಗಳನ್ನು ತಾಂತ್ರಿಕವಾಗಿ ಪರಿಹರಿಸಲು ತೆರಿಗೆ ಇಲಾಖೆ ಸಿದ್ಧತೆ ಮಾಡಿಕೊಂಡಿದೆ ಎಂದು ತಿಳಿಸಿದರು.ಜಿಎಸ್ಟಿ ಸಂಪೂರ್ಣ ತಂತ್ರಜ್ಞಾನ ಆಧಾರಿತ ವ್ಯವಸ್ಥೆ. ಈ ವ್ಯವಸ್ಥೆ ಜಾರಿಯಿಂದ ದೇಶದಲ್ಲಿ ಆರ್ಥಿಕ ವ್ಯವಸ್ಥೆಯಲ್ಲಿ ದೊಡ್ಡಮಟ್ಟದಲ್ಲಿ ಬದಲಾವಣೆ ಆಗಿದೆ. ಏಕರೂಪ ತೆರಿಗೆಯಿಂದಾಗಿ ಸರಕಾರ ಇಲಾಖೆ, ಕೈಗಾರಿಕೋದ್ಯಮಿಗಳು ಮತ್ತು ಗ್ರಾಹಕರೊಂದಿಗೆ ನಡುವೆ ಹೊಂದಾಣಿಕೆ ಅತ್ಯಗತ್ಯ ಎಂದರು.
ನಗರ ಕಮಿಷನರೇಟ್‌ನ ಆಯುಕ್ತ ಅಂಜನಿ ಕುಮಾರ್ ಮಾತನಾಡಿ, ಜಿಎಸ್ಟಿ ವ್ಯವಸ್ಥೆಯಿಂದಾಗಿ ದೇಶ ಆರ್ಥಿಕವಾಗಿ ಸದೃಢಗೊಳ್ಳಲು ಸಹಕಾರಿಯಾಗಲಿದೆ. ಜಿಎಸ್ಟಿಯಿಂದ ಮುಂದಿನ ಐದು ವರ್ಷಗಳಲ್ಲಿ ಭಾರತ ಮುಂದುವರೆದ ದೇಶಗಳ ಸಾಲಿನಲ್ಲಿ ಗುರುತಿಸಿಕೊಳ್ಳಲು ಸಾಧ್ಯವಾಗಲಿದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಎಫ್‌ಕೆಸಿಸಿಐ ಅಧ್ಯಕ್ಷ ಕೆ.ರವಿ, ಉಪಾಧ್ಯಕ್ಷ ಸುಧಾಕರ್ ಎಸ್.ಶೆಟ್ಟಿ ಸೇರಿದಂತೆ ಇತರರು ಇದ್ದರು.





