ಕಳವು ಪ್ರಕರಣ: ಆರೋಪಿಗಳ ಸೆರೆ
ಬೆಂಗಳೂರು, ಜು.26: ಒಂಟಿಯಾಗಿ ಓಡಾಡುವವರನ್ನು ಬೆದರಿಸಿ ಸುಲಿಗೆ ಮಾಡುತ್ತಿದ್ದ ಆರೋಪದ ಮೇಲೆ ತಲಘಟ್ಟಪುರದ ಮಧು(19), ರಾಮು(20) ಎಂಬುವರನ್ನು ಇಲ್ಲಿನ ಸುಬ್ರಮಣ್ಯಪುರ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳ ಬಂಧನದಿಂದ ತಲಘಟ್ಟಪುರದ 2 ಸುಲಿಗೆ, 2 ಮನೆಗಳವು ಸೇರಿದಂತೆ ನಾಲ್ಕು ಪ್ರಕರಣಗಳು ಪತ್ತೆಯಾಗಿವೆ ಎಂದು ನಗರದ ಹೆಚ್ಚುವರಿ ಪೊಲೀಸ್ ಆಯುಕ್ತ ಮಾಲಿನಿ ಕೃಷ್ಣಮೂರ್ತಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.
ಟಿಟಿ ವಾಹನ: ಟೆಂಪೋ ಟ್ರಾವಲರ್ ಹಾಗೂ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಬನಶಂಕರಿಯ ವೀರ(24) ಎಂಬಾತನನ್ನು ಸುಬ್ರಮಣ್ಯಪುರ ಠಾಣಾ ಪೊಲೀಸರು ಬಂಧಿಸಿದ್ದು, 12.80 ಲಕ್ಷ ಮೌಲ್ಯದ ಟಿಟಿ ವಾಹನ, ನಾಲ್ಕು ಬೈಕ್ ವಶಪಡಿಸಿಕೊಳ್ಳಲಾಗಿದೆ. ಆರೋಪಿಯ ಬಂಧನದಿಂದ ಏಳು ಕಳವು ಪ್ರಕರಣಗಳು ಪತ್ತೆಯಾಗಿವೆ ಎಂದು ಪೊಲೀಸರು ಹೇಳಿದ್ದಾರೆ.
ನಾಲ್ವರ ಬಂಧನ: ಬೀಗ ಹಾಕಿದ ಅಂಗಡಿಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಆರೋಪದ ಮೇಲೆ ಕತ್ರಿಗುಪ್ಪೆಯ ದೇವಾರಾಂ(39), ಕೆಜಿ ಹಳ್ಳಿಯ ರಫೀಕ್(42), ಹುಬ್ಬಳ್ಳಿಯ ಅಝೀಜ್(30), ಸಾದಿಕ್(30) ಎಂಬುವರನ್ನು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಬಂಧಿಸಿ 10 ಲಕ್ಷ ಮೌಲ್ಯದ 25 ಕೆಜಿ 670 ಗ್ರಾಂ ಬೆಳ್ಳಿಯ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಆರೋಪಿಗಳು ಹಳೇಬೀಡು, ರಾಣೆಬೆನ್ನೂರು, ಹಾನಗಲ್ ಇನ್ನಿತರ ಕಡೆಗಳಲ್ಲಿ ಸುತ್ತಾಡುತ್ತ ಬೀಗ ಹಾಕಿದ ಅಂಗಡಿಗಳನ್ನು ಗುರುತಿಸಿ ರಾತ್ರಿ ವೇಳೆ ಬೀಗ ಮುರಿದು ಕಳ್ಳತನ ಮಾಡುತ್ತಿದ್ದರು. ಕುಮಾರಸ್ವಾಮಿ ಲೇಔಟ್‌ನ ವಿಠ್ಠಲನಗರದಲ್ಲಿ ನಡೆದಿದ್ದ ಮನೆಯೊಂದರ ಕಳವು ಪ್ರಕರಣದ ಬೆನ್ನತ್ತಿದ್ದ ಪೊಲೀಸರು ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಮಹಿಳೆ ಸೆರೆ: ಬಸ್‌ನಲ್ಲಿ ಪ್ರಯಾಣಿಸುವ ವೃದ್ಧೆಯರು ಮತ್ತು ಮಕ್ಕಳಿಂದ ಚಿನ್ನದ ಒಡವೆಗಳನ್ನು ಪ್ರಯಾಣಿಕರ ಸೋಗಿನಲ್ಲಿ ಕಳವು ಮಾಡುತ್ತಿದ್ದ ಆರೋಪದ ಮೇಲೆ ಶಾಂತಮ್ಮ(35) ಎಂಬಾಕೆಯನ್ನು ಕುಮಾರಸ್ವಾಮಿ ಲೇಔಟ್ ಠಾಣಾ ಪೊಲೀಸರು ಸೆರೆ ಹಿಡಿದಿದ್ದಾರೆ.
ಕೋತಾ ಬಂಧನ: ಬೀಗ ಹಾಕಿದ ಮನೆಗಳನ್ನು ಗುರುತಿಸಿ ಕಳವು ಮಾಡುತ್ತಿದ್ದ ಪ್ರಕರಣ ಸಂಬಂಧ ಜೆಪಿ ನಗರದ ಅಪ್ಸರ್ ಯಾನೆ ಕೋತಾ(26) ಎಂಬಾತನನ್ನು ಬಂಧಿಸಿ 3 ಲಕ್ಷ ಮೌಲ್ಯದ ಚಿನ್ನಾಭರಣಗಳನ್ನು ವಶಪಡಿಸಿಕೊಂಡಿದ್ದಾರೆ.
ಬಸ್‌ನಲ್ಲಿ ಕಳವು: ಬಿಎಂಟಿಸಿ ಬಸ್‌ನಲ್ಲಿ ಪ್ರಯಾಣಿಕರ ಗಮನ ಬೇರೆಡೆ ಸೆಳೆದು ಕಳವು ಮಾಡುತ್ತಿದ್ದ ಆರೋಪಿ ಅತ್ತಿಬೆಲೆಯ ಗಿರೀಶ್(25)ನನ್ನು ಬಂಧಿಸಿ 7 ಲಕ್ಷ ಮೌಲ್ಯದ 335 ಗ್ರಾಂ ತೂಕದ ಚಿನ್ನಾಭರಣಗಳನ್ನು ಗಿರಿನಗರ ಪೊಲೀಸರು ವಶಪಡಿಸಿಕೊಂಡಿದ್ದಾರೆ. ಆರೋಪಿಯ ಜೊತೆ ಕಳವು ಕೃತ್ಯದಲ್ಲಿ ಭಾಗಿಯಾಗುತ್ತಿದ್ದ ನಾಗರಾಜ್, ಪದ್ಮ ಹಾಗೂ ಮಂಜುಳಾ ಎಂಬುವರು ತಲೆಮರೆಸಿಕೊಂಡಿದ್ದು ಅವರಿಗಾಗಿ ಶೋಧ ನಡೆಸಲಾಗಿದೆ ಎಂದು ಪೊಲೀಸರು ಹೇಳಿದ್ದಾರೆ.
16 ಬೈಕ್ ವಶಕ್ಕೆ: ಮೋಜಿನ ಜೀವನಕ್ಕಾಗಿ ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಆರೋಪದ ಮೇಲೆ ಇಬ್ಬರನ್ನು ಕೆಂಪೇಗೌಡ ನಗರ ಪೊಲೀಸರು ಬಂಧಿಸಿದ್ದಾರೆ.
ಕುಮಾರಸ್ವಾಮಿ ಲೇಔಟ್‌ನ ಸರಬಂಡೆ ಪಾಳ್ಯದ ವಾಸಿಮ್ ಅಕ್ರಮ್(24) ಬಂಧಿತ ಆರೋಪಿಯಾಗಿದ್ದಾನೆ. ಈತನಿಂದ ಕಳವು ಮಾಡಿದ ಬೈಕ್‌ಗಳನ್ನು ಖರೀದಿಸುತ್ತಿದ್ದ ಅಗ್ರಹಾರ ದಾಸರಹಳ್ಳಿಯ ಯೋಗರಾಜ್‌ನನ್ನು ಬಂಧಿಸಿ 10.35 ಲಕ್ಷ ಮೌಲ್ಯದ 16 ಬೈಕ್‌ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ದಕ್ಷಿಣಾ ವಿಭಾಗದ ಡಿಸಿಪಿ ಡಾ.ಶರಣಪ್ಪತಿಳಿಸಿದ್ದಾರೆ.
ಮತ್ತೊಬ್ಬ ಸೆರೆ: ಬೈಕ್‌ಗಳನ್ನು ಕಳವು ಮಾಡುತ್ತಿದ್ದ ಪ್ರಕರಣ ಸಂಬಂಧ ಬೇಗೂರಿನ ಶ್ರೀವತ್ಸನ್(23) ಎಂಬಾತನನ್ನು ಬಂಧಿಸಿ 4.2 ಲಕ್ಷ ಮೌಲ್ಯದ 137 ಗ್ರಾಂ ಚಿನ್ನಾಭರಣ ವಶಕ್ಕೆ ಪಡೆಯುವಲ್ಲಿ ಬಸವನಗುಡಿ ಠಾಣಾ ಪೊಲೀಸರು ಯಶಸ್ವಿಯಾಗಿದ್ದಾರೆ.







