ಬಿಜೆಪಿ ವಿರೋಧ ಅರ್ಥಹೀನ: ಇಂಧನ ಸಚಿವ ಶಿವಕುಮಾರ್
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ
.jpg)
ಬೆಂಗಳೂರು, ಜು. 26: ವೀರಶೈವ ಲಿಂಗಾಯತರಿಗೆ ಪ್ರತ್ಯೇಕ ಧರ್ಮದ ಸ್ಥಾನಮಾನ ನೀಡುವ ಕುರಿತ ಬೇಡಿಕೆ ಬಹಳ ಹಿಂದಿನಿಂದಲೇ ಇದೆ. ಈ ವಿಚಾರದಲ್ಲಿ ಬಿಜೆಪಿ ವಿರೋಧಕ್ಕೆ ಯಾವುದೇ ಅರ್ಥವಿಲ್ಲ ಎಂದು ಇಂಧನ ಸಚಿವ ಡಿ.ಕೆ. ಶಿವಕುಮಾರ್ ಪ್ರತಿಕ್ರಿಯೆ ನೀಡಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರ ಇತ್ತೀಚಿನ ಬೇಡಿಕೆಯಲ್ಲ, ಬಹುದಿನಗಳಿಂದ ಆ ಸಮುದಾಯದ ಸ್ವಾಮೀಜಿಗಳು, ಮಠಾಧೀಶರು ಹಾಗೂ ಮುಖಂಡರು ಆಗ್ರಹಿಸುತ್ತಿದ್ದಾರೆ ಎಂದರು.
ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಷಯಕ್ಕೆ ಸಂಬಂಧಿಸಿದಂತೆ ಸಿಎಂ ಸಿದ್ದರಾಮಯ್ಯ ಚಾಲನೆ ನೀಡಿದ್ದು, ಇದರಲ್ಲಿ ಕಾಂಗ್ರೆಸ್ ಪಕ್ಷದ ವೈಯಕ್ತಿಕ ಹಿತಾಸಕ್ತಿ ಇಲ್ಲ. ಕಾಂಗ್ರೆಸ್ ಪಕ್ಷಕ್ಕೂ ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮ ವಿಚಾರಕ್ಕೂ ಯಾವುದೇ ಸಂಬಂಧವಿಲ್ಲ ಎಂದು ಶಿವಕುಮಾರ್ ಸ್ಪಷ್ಟಣೆ ನೀಡಿದರು.
ಈ ಹಿಂದೆ ಯಡಿಯೂರಪ್ಪ ಒಂದು ಗುಂಪನ್ನು ಪ್ರವರ್ಗ 2-‘ಎ’ಗೆ ಸೇರಿಸಿ ಅಂತ ವೀರಶೈವ ಲಿಂಗಾಯತ ವಿಭಾಗಿಸಿದ್ದು ಏಕೆ ಎಂದು ಪ್ರಶ್ನಿಸಿದ ಶಿವಕುಮಾರ್, ವೀರಶೈವ ಲಿಂಗಾಯತ ಪ್ರತ್ಯೇಕ ಧರ್ಮದ ವಿಚಾರದಲ್ಲಿ ಬಿಜೆಪಿ ಅನಗತ್ಯ ಗೊಂದಲ ಸೃಷ್ಟಿಸುತ್ತಿದೆ. ಆದರೆ, ಸಿದ್ದರಾಮಯ್ಯನವರಿಗೆ ಯಾವ ನಿರ್ಧಾರ ಕೈಗೊಳ್ಳಬೇಕೆಂದು ಗೊತ್ತಿದೆ ಎಂದು ಹೇಳಿದರು.





