ಸರಕಾರ-ಕಾಂಗ್ರೆಸ್ ಪಕ್ಷದ ಹಸ್ತಕ್ಷೇಪವಿಲ್ಲ: ಡಾ.ಶರಣ ಪ್ರಕಾಶ್ ಪಾಟೀಲ್
ಪ್ರತ್ಯೇಕ ಲಿಂಗಾಯತ ಧರ್ಮದ ಬೇಡಿಕೆ

ಬೆಂಗಳೂರು, ಜು.26: ಪ್ರತ್ಯೇಕ ಲಿಂಗಾಯತ ಧರ್ಮದ ವಿಚಾರದಲ್ಲಿ ರಾಜ್ಯ ಸರಕಾರ ಅಥವಾ ಕಾಂಗ್ರೆಸ್ ಪಕ್ಷದ ಹಸ್ತಕ್ಷೇಪವಿಲ್ಲ. ಇದು ಸಮುದಾಯದ ವೈಯಕ್ತಿಕವಾದ ಬೇಡಿಕೆ. ಇದರಲ್ಲಿ ಯಾವುದೇ ರಾಜಕಾರಣವಿಲ್ಲ. ಧರ್ಮದ ವಿಚಾರದಲ್ಲಿ ಎಲ್ಲರ ಅಭಿಪ್ರಾಯ ಒಂದೇ ಇರಬೇಕು ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಶರಣಪ್ರಕಾಶ್‌ಪಾಟೀಲ್ ತಿಳಿಸಿದ್ದಾರೆ.
ಬುಧವಾರ ವಿಧಾನಸೌಧದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರಕಾರಿ ಕಚೇರಿಗಳಲ್ಲಿ ಬಸವಣ್ಣ ಭಾವಚಿತ್ರ ಅಳವಡಿಸಬೇಕೆಂದು ರಾಜ್ಯ ಸರಕಾರ ಆದೇಶ ಹೊರಡಿಸಿದಕ್ಕಾಗಿ, ಅಖಿಲ ಭಾರತ ವೀರಶೈವ ಮಹಾಸಭಾದವರು ಮುಖ್ಯಮಂತ್ರಿಯನ್ನು ಸನ್ಮಾನಿಸಿದ ಸಂದರ್ಭದಲ್ಲಿ, ಪ್ರತ್ಯೇಕ ಲಿಂಗಾಯತ ಧರ್ಮದ ಸ್ಥಾನಮಾನ ಕಲ್ಪಿಸುವಂತೆ ಮನವಿ ಸಲ್ಲಿಕೆಯಾಗಿತ್ತು ಎಂದರು. ಅದರಂತೆ, ಎಲ್ಲರೂ ಒಗ್ಗಟ್ಟಿನಿಂದ ತೀರ್ಮಾನ ಕೈಗೊಂಡಲ್ಲಿ ಕೇಂದ್ರಕ್ಕೆ ಶಿಫಾರಸ್ಸು ಸಲ್ಲಿಸುವುದಾಗಿ ಮುಖ್ಯಮಂತ್ರಿ ಹೇಳಿದ್ದರು. ಪ್ರತ್ಯೇಕ ಲಿಂಗಾಯತ ಧರ್ಮ ಸ್ಥಾಪನೆ ವಿಚಾರ ಇತ್ತೀಚೆಗೆ ಚರ್ಚೆಯಾಗುತ್ತಿಲ್ಲ. 40 ವರ್ಷಗಳ ಹಿಂದೆಯೆ ಅಖಿಲ ಭಾರತ ವೀರಶೈವ ಮಹಾಸಭಾದ ಸಭೆಯಲ್ಲಿ ಸರ್ವಾನುಮತದಿಂದ ಈ ನಿರ್ಣಯ ಅಂಗೀಕಾರವಾಗಿತ್ತು. ಈಗ ಒಳ್ಳೆಯ ಸಂದರ್ಭ ಬಂದಿದೆಯಷ್ಟೇ ಎಂದು ಅವರು ಹೇಳಿದರು.
ಲಿಂಗಾಯತ ಪ್ರತ್ಯೇಕ ಧರ್ಮ. ಅದು ಹಿಂದೂ ಧರ್ಮದ ಭಾಗವಲ್ಲ, ವೀರಶೈವ ಲಿಂಗಾಯತ ಎರಡೂ ಒಂದೇ, ಸ್ವತಂತ್ರ ಧರ್ಮಕ್ಕೆ ನನ್ನ ಬೆಂಬಲವಿದೆ. ಜನಾಭಿಪ್ರಾಯ ಸಂಗ್ರಹಿಸಿ ಮುಂದೆ ಬರಲಾಗುವುದು. ಪ್ರತ್ಯೇಕ ಲಿಂಗಾಯತ ಧರ್ಮ ಬೇಕೆ, ಬೇಡವೇ ಎಂಬುದರ ಕುರಿತು ಎರಡು ಗುಂಪುಗಳನ್ನು ಒಂದುಗೂಡಿಸುವ ಪ್ರಯತ್ನ ನಡೆಯಲಿದೆ ಎಂದು ಅವರು ತಿಳಿಸಿದರು.
ಸಮಾಜದಲ್ಲಿ ಒಡಕು ಮೂಡಿಸುವ ಪ್ರಶ್ನೆಯೇ ಉದ್ಭವಿಸುವುದಿಲ್ಲ. 40 ವರ್ಷಗಳ ಹಿಂದೆ ಕೈಗೊಂಡಿರುವ ನಿರ್ಣಯ ಇದು. ವೀರಶೈವ ಮಹಾಸಭಾದ ಮನವಿಯನ್ನು ಮುಖ್ಯಮಂತ್ರಿ ಪುರಸ್ಕರಿಸಿದ್ದಾರೆ ಅಷ್ಟೇ. ಆದುದರಿಂದಲೆ, ಈವರೆಗಿನ ಎಲ್ಲ ಜನಗಣತಿಗಳಲ್ಲಿ ‘ವೀರಶೈವ ಲಿಂಗಾಯತ’ ಎಂದೇ ಬರೆಸಲಾಗಿದೆ ಎಂದು ಶರಣಪ್ರಕಾಶ್‌ಪಾಟೀಲ್ ಹೇಳಿದರು.
ನರ್ಸಿಂಗ್ ಕಾಲೇಜುಗಳಲ್ಲಿನ ಹೊರ ರಾಜ್ಯದ ವಿದ್ಯಾರ್ಥಿಗಳ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಸಾಗಿದೆ. ಹೈಕೋರ್ಟ್ ನಿರ್ದೇಶನದ ಪ್ರಕಾರವೇ ಕ್ರಮ ಕೈಗೊಳ್ಳಲಾಗುತ್ತದೆ. ವಿದೇಶಗಳಿಗೆ ಹೋಗುವ ನರ್ಸಿಂಗ್ ವಿದ್ಯಾರ್ಥಿಗಳಿಗೆ ಭಾರತೀಯ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ಬೇಕು ಎನ್ನಲಾಗುತ್ತಿದೆ ಎಂದು ಅವರು ತಿಳಿಸಿದರು. ರಾಜ್ಯ ನರ್ಸಿಂಗ್ ಕೌನ್ಸಿಲ್ ಮಾನ್ಯತೆ ಪಡೆದಿರುವ ನರ್ಸಿಂಗ್ ವಿದ್ಯಾರ್ಥಿಗಳು ಆತಂಕ ಪಡುವ ಅಗತ್ಯವಿಲ್ಲ. ಭಾರತೀಯ ನರ್ಸಿಂಗ್ ಕಾಯ್ದೆಯ ಅನುಸಾರವೇ ಮಾನ್ಯತೆ ನೀಡಬೇಕು ಎಂಬ ಬಗ್ಗೆ ಭಾರತೀಯ ನರ್ಸಿಂಗ್ ಕೌನ್ಸಿಲ್ ಜೊತೆ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಶರಣಪ್ರಕಾಶ್‌ಪಾಟೀಲ್ ಹೇಳಿದರು.







