ವಿಶ್ವ ಜನಸಂಖ್ಯಾ ದಿನದ ಜನ ಜಾಗೃತಿ ಜಾಥ

ಉಡುಪಿ, ಜು.26: ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಉಡುಪಿ, ತಾಲೂಕು ಆರೋಗ್ಯಾಧಿಕಾರಿಗಳ ಕಚೇರಿ ಕಾರ್ಕಳ, ಸಾರ್ವಜನಿಕ ಆಸ್ಪತ್ರೆ ಕಾರ್ಕಳ, ಶ್ರೀನೇಮಿಸಾಗರ ವರ್ಣೀಜಿ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಹಿರಿಯಂಗಡಿ ಕಾರ್ಕಳ ಇವುಗಳ ಸಂಯುಕ್ತ ಆಶ್ರಯದಲ್ಲಿ ವಿಶ್ವ ಜನಸಂಖ್ಯಾ ದಿನಾಚರಣೆ ಅಂಗವಾಗಿ ವಿದ್ಯಾರ್ಥಿಗಳಿಂದ ಜನಜಾಗೃತಿ ಜಾಥ ಮತ್ತು ಮಾಹಿತಿ ಕಾರ್ಯಕ್ರಮ ಶ್ರೀನೇಮಿಸಾಗರ ವಿದ್ಯಾ ಸಂಸ್ಥೆಯಲ್ಲಿ ಇತ್ತೀಚೆಗೆ ನಡೆಯಿತು.
ಜಾಥಾವನ್ನು ಉದ್ಘಾಟಿಸಿ ಮಾತನಾಡಿದ ಉಡುಪಿ ಜಿಪಂ ಆರೋಗ್ಯ ಮತ್ತು ಶಿಕ್ಷಣ ಸ್ಥಾಯಿ ಸಮಿತಿ ಅಧ್ಯಕ್ಷ ಉದಯ ಎಸ್. ಕೋಟ್ಯಾನ್. ಜನರಲ್ಲಿ ಜಾಗೃತಿ ಮೂಡಿಸಲು ಜಾಥಾ ಕಾರ್ಯಕ್ರಮ, ಮಾಹಿತಿ ಕಾರ್ಯಕ್ರಮಗಳು ಹೆಚ್ಚೆಚ್ಚು ನಡೆಯಬೇಕು ಎಂದರು. ಹೆಚ್ಚುತ್ತಿರುವ ಜನಸಂಖ್ಯೆಯು ಹೇಗೆ ಅವಕಾಶಗಳನ್ನು ವಂಚಿಸುತ್ತದೆ, ಯಾವ ರೀತಿ ಸಮಸ್ಯೆಗಳು ಉಲ್ಬಣಗೊಳ್ಳುವುದು ಎಂಬುದರ ಬಗ್ಗೆ ಅವರು ವಿವರಿಸಿದರು.
ಮಾಹಿತಿ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕಾರ್ಕಳ ಪುರಸಬಾ ಅಧ್ಯಕ್ಷರಾದ ಅನಿತಾ ಆರ್. ಅಂಚನ್ ವಹಿಸಿದ್ದರು. ಕಾರ್ಯಕ್ರಮವನ್ನು ಉದ್ಘಾಟಿಸಿದ ತಾಪಂ ಅಧ್ಯಕ್ಷೆ ಮಾಲಿನಿ ಜೆ. ಶೆಟ್ಟಿ, ಜನಸಂಖ್ಯಾ ಹೆಚ್ಚಳ, ಸ್ಥಿರತೆ, ನಿಯಂತ್ರಣ ಮೊದಲಾದ ವಿಷಯಗಳ ಕುರಿತು ಸಮುದಾಯಕ್ಕೆ ಮಾಹಿತಿ ಹೇಗೆ ಸಹಕಾರಿ ಎಂಬುದರ ಕುರಿತು ತಿಳಿಸಿದರು.
ಜನಸಂಖ್ಯಾ ದಿನಾಚರಣೆ ಕುರಿತ ಕರಪತ್ರವನ್ನು ಗಿರಿಧರ್ ಕಾಮತ್ ಬಿಡುಗಡೆಗೊಳಿಸಿದರು. ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿದ ಜಿಲ್ಲಾ ಕುಟುಂಬ ಕಲ್ಯಾಣಾಧಿಕಾರಿ ರಾಮರಾವ್, ಇಂದಿನ ಸಮಾಜದಲ್ಲಿ ಜನಸಂಖ್ಯೆ ಬಗ್ಗೆ ಇರುವ ನಂಬಿಕೆಗಳೇನು ನಿಯಂತ್ರಣದ ಅಗತ್ಯತೆಗಳೇನು, ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಅನುಷ್ಠಾನದ ಅಗತ್ಯತೆ, ಜನಸಂಖ್ಯಾ ಹೆಚ್ಚಳದಲ್ಲಿ ಸ್ಥಿರತೆ ಇಲ್ಲದಿದ್ದರೆ ಏನಾಗುತ್ತದೆ ಎಂಬುದರ ಕುರಿತ ಅಂಕಿಅಂಶಗಳೊಂದಿಗೆ ವಿವರಿಸಿದರು.
ಕಾರ್ಯಕ್ರಮದಲ್ಲಿ ಕುಟುಂಬ ಕಲ್ಯಾಣ ಕಾರ್ಯಕ್ರಮಗಳ ಸಾಧನೆಗೈದ ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ವೈದ್ಯಾಧಿಕಾರಿ ಡಾ.ಮಹಂತ್ ಹೆಗ್ಡೆ, ಬಜಗೋಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ಶೇಖರ್ ಪೂಜಾರಿ, ಬೈಲೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕಿ ವಿತನಾ ಹಾಗೂ ನಿಟ್ಟೆ ಸಮುದಾಯ ಆರೋಗ್ಯ ಕೇಂದ್ರದ ಆಶಾ ಕಾರ್ಯಕರ್ತೆ ಲಕ್ಷ್ಮಿ ಇವರನ್ನು ಸನ್ಮಾನಿಸಲಾಯಿತು. ತಾಲೂಕು ಮಟ್ಟದ ಪ್ರಬಂಧ ಸ್ಪರ್ಧೆಯಲ್ಲಿ ವಿಜೇತರಾದ ಕಾಲೇಜು ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಶಿಧರ್ ಹೆಚ್ ಸ್ವಾಗತಿಸಿದರು. ಹಿರಿಯ ವೈದ್ಯೇತರ ಮೇಲ್ವಿಚಾರಕ ವಿ.ಸುರೇಶ್ ಶೆಟ್ಟಿ ಕಾರ್ಯಕ್ರಮ ನಿರೂಪಿಸಿ, ಹಿರಿಯ ಆರೋಗ್ಯ ಸಹಾಯಕಿ ವಿ.ಜೆ.ಅನ್ನಕುಟ್ಟಿ ವಂದಿಸಿದರು.







