ಪೋಷಕರ ಅಮಾನವೀಯತೆ: ನಾಯಿಗೆ ಆಹಾರವಾಗಲಿದ್ದ ಮೃತ ನವಜಾತ ಶಿಶು

ಮಂಡ್ಯ, ಜು.26: ನವಜಾತ ಶಿಶು ಪೋಷಕರ ಅಮಾನವೀಯತೆ ಕಾರಣಕ್ಕೆ ನಾಯಿಗೆ ಆಹಾರವಾಗಲಿರುವುದನ್ನು ಸಾರ್ವಜನಿಕರೇ ತಪ್ಪಿಸಿದ ಘಟನೆ ಇಲ್ಲಿನ ವೈದ್ಯಕೀಯ ಕಾಲೇಜು ಆಸ್ಪತ್ರೆಯ ಆವರಣದಲ್ಲಿ ಬುಧವಾರ ಬೆಳಗ್ಗೆ ನಡೆದಿದೆ.
ಹುಟ್ಟುವ ಮುನ್ನವೇ ಮೃತಪಟ್ಟ ಶಿಶುವನ್ನು ಪೋಷಕರು ಅಂತ್ಯಸಂಸ್ಕಾರ ನಡೆಸದೇ ಆಸ್ಪತ್ರೆಯ ಆವರಣದಲ್ಲಿರುವ ಕಸದ ತೊಟ್ಟಿಗೆ ಎಸೆದು ಹೋದದ್ದು ಘಟನೆಗೆ ಮೂಲ ಕಾರಣವಾಗಿದೆ.
ಕಸದ ತೊಟ್ಟಿಯಲ್ಲಿದ್ದ ಶಿಶುವನ್ನು ನಾಯಿಯೊಂದು ಕಚ್ಚಿಕೊಂಡು ಹೋಗುತ್ತಿತ್ತು. ಜೀವಂತ ಶಿಶುವನ್ನೇ ನಾಯಿ ಹೊತ್ತೊಯ್ಯುತ್ತಿದೆ ಎಂದು ಭಾವಿಸಿದ ಸಾರ್ವಜನಿಕರು ಗದ್ದಲವೆಬ್ಬಿಸಿದಾಗ ನಾಯಿ ಮಗುವನ್ನು ಬಿಟ್ಟುಹೋಗಿದೆ. ಪರಿಶೀಲನೆ ನಡೆಸಿದ ನಂತರ ಅದು ಜೀವಂತ ಶಿಶುವಲ್ಲವೆಂಬುದು ಸ್ಪಷ್ಟವಾಗಿದೆ.
ಸಾರ್ವಜನಿಕರ ಗದ್ದಲದಿಂದ ಸ್ಥಳಕ್ಕೆ ಆಸ್ಪತ್ರೆಯ ಸಿಬ್ಬಂದಿಯೂ ಧಾವಿಸಿದರು. ಮಗು ಯಾರದೆಂದು ಹೆರಿಗೆ ವಾರ್ಡಿನಲ್ಲಿ ಹೋಗಿ ನಡೆಸಿದ ಪರಿಶೀಲನೆಯಲ್ಲಿ ಮಗುವಿನ ತಂದೆ-ತಾಯಿ ಯಾರೆಂಬುದು ಪತ್ತೆಯಾಯಿತು.
ಇಷ್ಟೆಲ್ಲ ರಾದ್ಧಾಂತಕ್ಕೆ ಕಾರಣನಾದ ಮಗುವಿನ ತಂದೆ ಮದ್ದೂರಿನ ಸಮೀವುಲ್ಲಾನನ್ನು ಪೊಲೀಸರು ಬಂಧಿಸಿದ್ದು, ಪ್ರಕರಣ ದಾಖಲಿಸಿದ್ದಾರೆ.





