ಪವನ್‌ರಾಜ್ ಶೆಟ್ಟಿ ಕೊಲೆ ಪ್ರಕರಣ: ಮೂವರು ವಶಕ್ಕೆ
ಮಂಗಳೂರು, ಜು.26: ರೌಡಿಶೀಟ್‌ನಲ್ಲಿದ್ದ ವಾಮಂಜೂರು ರೋಹಿಯ ಪುತ್ರ ರೌಡಿ ಶೀಟರ್ ವಾಮಂಜೂರು ಕುಟ್ಟಿಪಲ್ಕೆ ನಿವಾಸಿ ಪವನ್‌ರಾಜ್ ಶೆಟ್ಟಿ (21) ಕೊಲೆ ಪ್ರಕರಣಕ್ಕೆ ಸಂಬಂಧಿಸಿ ಮೂವರು ಆರೋಪಿಗಳನ್ನು ಗ್ರಾಮಾಂತರ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ ಎಂದು ತಿಳಿದು ಬಂದಿದೆ.
ವಾಮಂಜೂರು ಪರಿಸರದ ನಿವಾಸಿಗಳಾದ ಬಿಪಿನ್, ಶರಣ್ ಮತ್ತು ಹರೀಶ್ ವಶದಲ್ಲಿರುವ ಆರೋಪಿಗಳು. ವೈಯಕ್ತಿಕ ಹಳೆ ದ್ವೇಷದಿಂದ ಆರೋಪಿಗಳು ಪವನ್ ರಾಜ್ ಶೆಟ್ಟಿಯನ್ನು ಹತ್ಯೆ ಮಾಡಿರುವುದು ಪೊಲೀಸರಿಗೆ ಪ್ರಾಥಮಿಕ ವಿಚಾರಣೆಯ ವೇಳೆ ತಿಳಿದು ಬಂದಿದೆ. ಪವನ್ ರಾಜ್‌ನನ್ನು ಸೋಮವಾರ ಸಂಜೆ ತಲವಾರ್‌ನಿಂದ ಕಡಿದು ಕೊಲೆ ಮಾಡಿ ಆರೋಪಿಗಳು ಪರಾರಿಯಾಗಿದ್ದರು. ಈತನ ಶವ ಮಂಗಳವಾರ ಬೆಳಗ್ಗೆ ಮನೆಯ ಬಳಿ ಇರುವ ಪಾಳು ಬಿದ್ದ ಮನೆಯಲ್ಲಿ ಪತ್ತೆಯಾಗಿತ್ತು. ಶವದ ಬಳಿ ಎರಡು ತಲವಾರು ಮೊಬೈಲ್, ಚಪ್ಪಲಿ ದೊರಕಿತ್ತು.
ಪವನ್‌ರಾಜ್ ಶೆಟ್ಟಿ ಮೇಲೆ ವಾಮಂಜೂರು ಚೆಕ್‌ಪೋಸ್ಟ್ ಬಳಿ ಸಂತೋಷ್ ಕೊಟ್ಟಾರಿ ಎಂಬಾತನ ಕೊಲೆ ಯತ್ನ ಪ್ರಕರಣ, ತಂದೆ ರೋಹಿದಾಸ್ ಶೆಟ್ಟಿಯ ಕೊಲೆ ಪ್ರಕರಣದಲ್ಲಿ ಹಣಕಾಸಿನ ನೆರವು ನೀಡಿದ್ದರೆಂದು 2015ರಲ್ಲಿ ವಾಮಂಜೂರಿನ ಉದ್ಯಮಿ ಕೊಲೆಗೆ ಸಂಚು ರೂಪಿಸಿದ ಆರೋಪ, 2016ರಲ್ಲಿ ಮಂಗಳಾದೇವಿ ಸಮೀಪ ದರೋಡೆ ಪ್ರಕರಣ, 2017ರಲ್ಲಿ ಪರಾರಿಯಲ್ಲಿ ಶ್ರೀಮಂತ ವ್ಯಕ್ತಿಗಳ ದರೋಡೆಗೆ ಹೊಂಚು ಹಾಕಲೆತ್ನಿಸಿದ ಪ್ರಕರಣಗಳ ಆರೋಪವಿತ್ತು.ಈ ಹಿನ್ನೆಲೆಯಲ್ಲಿ ಈತನ ವಿರುದ್ಧ ರೌಡಿಶೀಟ್ ತೆರೆಯಲಾಗಿತ್ತು.







