ಯುದ್ಧಗಳು ರಾಜಕೀಯ ಪ್ರೇರಿತ: ಕೆ.ಎಸ್.ಪುಟ್ಟಣ್ಣಯ್ಯ ಆಕ್ರೋಶ

ಪಾಂಡವಪುರ,ಜುಲೈ.26: ಜಗತ್ತಿನಲ್ಲಿ ಶಾಂತಿ ಸ್ಥಾಪನೆಗೆ ನೂರಾರು ನಾಯಕರು ತಮ್ಮ ಪ್ರಾಣವನ್ನೆ ಬಲಿದಾನ ಮಾಡಿದ್ದು, ಇದುವರೆಗೂ ನಡೆದಿರುವ ಎಲ್ಲಾ ಯುದ್ಧಗಳು ರಾಜಕೀಯ ಪ್ರೇರಿತವಾಗಿವೆ. ಯುದ್ಧಗಳಲ್ಲಿ ಸೋಲು ಗೆಲುವಿಗಿಂತ ಅಮಾಯಕ ಸೈನಿಕರ ಪ್ರಾಣಹಾನಿ ತಡೆಯುವುದರ ಬಗ್ಗೆ ಚಿಂತನೆ ನಡೆಸಬೇಕಾದುದು ಅಗತ್ಯ ಎಂದು ಶಾಸಕ ಕೆ.ಎಸ್.ಪುಟ್ಟಣ್ಣಯ್ಯ ಹೇಳಿದರು.
ಸಮೃದ್ಧಿ ಟ್ರಸ್ಟ್, ನೇತಾಜಿ ಕ್ರೀಡಾ ಬಳಗ, ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು, ಗ್ರಾಮ ರಂಗ ಸಾಂಸ್ಕೃತಿಕ ವೇದಿಕೆ, ಭಾರತ ವಿಕಾಸ ಪರಿಷತ್ತು ಅವರ ಸಂಯುಕ್ತಾಶ್ರಯದಲ್ಲಿ ಪಟ್ಟಣದ ಪದವಿ ಕಾಲೇಜಿನಲ್ಲಿ ಬುಧವಾರ ನಡೆದ ಕಾರ್ಗಿಲ್ ವಿಜಯೋತ್ಸವ ಕಾರ್ಯಕ್ರಮದ ಅಧ್ಯಕ್ಷತೆವಹಿಸಿ ಅವರು ಮಾತನಾಡಿದರು.
ಎರಡು ವಿರೋಧಿ ದೇಶಗಳ ನಡುವಿನ ಯುದ್ಧಗಳ ಬಗ್ಗೆ ಕೆಲವರು ಆಕ್ರೋಷದಿಂದ ಮಾತನಾಡುತ್ತಾರೆ. ಆದರೆ, ನಮ್ಮ ದೇಶದಲ್ಲೆ ದಾಯಾದಿಗಳ ನಡುವೆ ನಡೆದ ಮಹಾಭಾರತದ ಯುದ್ಧದಲ್ಲಿ 18 ಅಕ್ಷೋಹಿಣಿ ಸೈನಿಕರು ತಮ್ಮ ಪ್ರಾಣ ಕಳೆದುಕೊಂಡರು. ಈ ಅಮಾಯಕರ ಪ್ರಾಣದ ಬಗ್ಗೆ ಯಾರೂ ಮಾತನಾಡುವುದಿಲ್ಲ. ಇದು ವಿಪರ್ಯಾಸ ಎಂದು ಅವರು ವಿಷಾದಿಸಿದರು.
ವಿಶ್ವಸಂಸ್ಥೆ ಕೂಡಲೇ ಭಾರತ ಮತ್ತು ಪಾಕಿಸ್ತಾನದ ವಿದ್ಯಾರ್ಥಿಗಳೊಡನೆ ಸಂವಾದ ನಡೆಸಿ ಯುದ್ಧದ ಬಗ್ಗೆ ಅವರ ಅಭಿಪ್ರಾಯಗಳನ್ನು ಕೇಳಬೇಕು. ಪ್ರಜೆಗಳಿಗೆ ಬೇಡವಾದ ಯುದ್ಧ ಪ್ರಜಾಪ್ರತಿನಿಧಿಗಳಿಗೆ ಏಕೆ ಬೇಕು? ಇವೆಲ್ಲಾ ರಾಜಕೀಯ ಸ್ಥಾನ ಉಳಿಸಿಕೊಳ್ಳಲು ನಡೆಯುತ್ತಿರುವ ಆಟಗಳು ಎಂದು ಅವರು ಖೇದ ವ್ಯಕ್ತಪಡಿಸಿದರು. ದನಗಳ ಹತ್ಯೆ ಬಗ್ಗೆ ಮಾತನಾಡುವವರು ದೇಶದಲ್ಲಿ ಆತ್ಮಹತ್ಯೆ ಮಾಡಿಕೊಂಡಿರುವ 7 ಲಕ್ಷ ರೈತರ ಆತ್ಮಹತ್ಯೆ ಬಗ್ಗೆ ಮಾತನಾಡುವುದಿಲ್ಲ ಎಂದು ಕಿಡಿಕಾರಿದ ಅವರು, ಕಳ್ಳರು, ಭ್ರಷ್ಟರು ಎಂದೂ ಆತ್ಮಹತ್ಯೆ ಮಾಡಿಕೊಳ್ಳುವುದಿಲ್ಲ. ಅನ್ನ ನೀಡುವ ಬಡ ರೈತ ಆತ್ಮಹತ್ಯೆ ಮಾಡಿಕೊಳ್ಳುತ್ತಾನೆ. ಈ ಬಗ್ಗೆ ಗಂಭೀರ ಅಧ್ಯಯನ ಅಗತ್ಯ ಎಂದರು.
ನೇತಾಜಿ ಕ್ರೀಡಾ ಬಳಗದ ಅಧ್ಯಕ್ಷ ಎಸ್.ಮಲ್ಲಿಕಾರ್ಜುನಗೌಡ ಕಾರ್ಯಕ್ರಮ ಉದ್ಘಾಟಿಸಿದರು. ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದ ಸೈನಿಕ ಎಸ್.ಕೆ.ಚಂದ್ರಪ್ಪ ಮತ್ತು ನಿವೃತ್ತ ಸೈನಿಕ ಆರ್.ವಿನೋದ್ ಅವರನ್ನು ಸನ್ಮಾನಿಸಲಾಯಿತು.
ತಾಲ್ಲೂಕು ಕಸಾಪ ಅಧ್ಯಕ್ಷ ರಮೇಶ್, ಪ್ರಾಂಶುಪಾಲ ಬಿ.ಟಿ.ರಜನಿಕಾಂತ್, ಸಮೃದ್ಧಿ ಟ್ರಸ್ಟ್‌ನ ಬಿ.ಎಚ್.ಸುಮನ್, ಗ್ರಾಮರಂಗ ಸಾಂಸ್ಕೃತಿಕ ವೇದಿಕೆಯ ಪ.ಮ.ನಂಜುಂಡಸ್ವಾಮಿ, ಕಸಾಪ ಮಾಜಿ ಅಧ್ಯಕ್ಷ ಎಚ್.ಆರ್.ಧನ್ಯಕುಮಾರ್, ಉಪನ್ಯಾಸಕಿ ಸರಸ್ವತಿ, ಕರವೇ ಭಾರತಿ, ಇತರ ಗಣ್ಯರು ಉಪಸ್ಥಿತರಿದ್ದರು.







