ಮನೆ ನಿರ್ಮಾಣಕ್ಕೆ ಮಾದರಿಯಾದ ಗ್ರಾಪಂ ಸದಸ್ಯ ಅಬ್ದುಲ್ಲ
ಕೊರಗ ಸಮುದಾಯದ ನಾಲ್ಕು ಕುಟುಂಬಗಳಿಗೆ ಸೂರು

ಪಡುಬಿದ್ರೆ, ಜು.26: ಜನಪ್ರತಿನಿಧಿಗಳ ಪ್ರಯತ್ನ ಹಾಗೂ ಅಧಿಕಾರಿಗಳ ಇಚ್ಛಾಶಕ್ತಿ ಇದ್ದಲ್ಲಿ ಮಾತ್ರ ಗ್ರಾಮದ ಕಟ್ಟಕಡೆಯ ವ್ಯಕ್ತಿಗೂ ಸರಕಾರದ ಯೋಜನೆ ತಲುಪುತ್ತದೆ ಎಂಬುದಕ್ಕೆ ಇಲ್ಲೊಂದು ಸ್ಪಷ್ಟ ನಿರ್ದಶನವಿದೆ. ಫಲಿಮಾರು ಗ್ರಾಪಂ ವ್ಯಾಪ್ತಿಯಲ್ಲಿ ತಲತಲಾಂತರದಿಂದ ಒಂದೇ ಗುಡಿಸಲಿನಲ್ಲಿ ವಾಸ್ತವ್ಯ ಹೂಡಿದ್ದ ನಾಲ್ಕು ಕೊರಗ ಸಮುದಾಯದ ಕುಟುಂಬಗಳಿಗೆ ಪ್ರತ್ಯೇಕ ಸೂರು ನಿರ್ಮಿಸಿ ಬುಧವಾರ ವಾಸ್ತವ್ಯ ಹೂಡಿರುವುದು ಇದಕ್ಕೆ ಸಾಕ್ಷಿಯಾಯಿತು.
ಫಲಿಮಾರು ಗ್ರಾಮ ಪಂಚಾಯತ್ ವ್ಯಾಪ್ತಿಯ ಅಡ್ವೆ-ಫಲಿಮಾರು ರಸ್ತೆಯ ಬಳಿಯ ಕೊರಗ ಕಾಲನಿಯಲ್ಲಿ ಒಂದೇ ಮನೆಯಲ್ಲಿ ವಾಸಿಸುತಿದ್ದ ಕೊರಗ ಜನಾಂಗದ 95 ವರ್ಷದ ತಂಪು ಕುಟುಂಬಕ್ಕೆ ಸರಿಯಾದ ಮನೆ ಇರಲಿಲ್ಲ. ಇದನ್ನು ಮನಗಂಡು ಐಟಿಡಿಪಿ ಇಲಾಖೆಯ ಮೂಲ ಗಿರಿಜನ ಅಭಿವೃದ್ಧಿ ಯೋಜನೆಯ ರೂ. 8 ಲಕ್ಷ ಅನುದಾನದಲ್ಲಿ ಮನೆ ನಿರ್ಮಿಸಲಾಗಿದೆ. ಹೆಂಚು ಹಾಸಿದ ನಾಲ್ಕು ಮನೆಗಳಲ್ಲಿ ಒಂದು ಹಾಲ್, ಬೆಡ್ ರೂಂ, ಅಡುಗೆ ಕೋಣೆ, ಸ್ನಾನಗೃಹ ಹಾಗೂ ಶೌಚಾಲಯ ಇದ್ದು, ಎಲ್ಲಾ ಮನೆಗಳಿಗೂ ನೀರು ಹಾಗೂ ವಿದ್ಯುತ್ ಸಂಪರ್ಕ ಕಲ್ಪಿಸಲಾಗಿದೆ. ಮುಂದಿನ ಹಂತದಲ್ಲಿ ಮನೆ ಸುತ್ತ ಆವರಣ ಗೋಡೆ ನಿರ್ಮಾಣದ ಯೋಜನೆಯನ್ನು ಹೊಂದಲಾಗಿದೆ.
ಗ್ರಾಮ ಸದಸ್ಯ ಅಬ್ದುಲ್ಲ ಕನಸು: ಮೂರು ವರ್ಷಗಳ ಹಿಂದೆ ಈ ವಾರ್ಡ್‌ಗೆ ಸದಸ್ಯರಾಗಿ ಆರಿಸಿ ಬಂದ ಅಬ್ದುಲ್ಲಾ ಅವರಿಗೆ ಕೊರಗರ ಕಾಲನಿಯ ಪರಿಸ್ಥಿತಿ ಯನ್ನು ನೋಡಿ ಅವರಿಗೊಂದು ಸುಂದರ ಮನೆ ನಿರ್ಮಿಸಿ ಕೊಡಲು ಮುಂದಾಗಿದ್ದರು. ಅದಕ್ಕಾಗಿ ಸರಿಯಾಗಿ ದಾಖಲೆಗಳಿಲ್ಲದೆ ಅವರು ವಾಸಿಸುತ್ತಿದ್ದ ಜಮೀನಿಗೆ ಹಕ್ಕುಪತ್ರ ಮಾಡಿಕೊಡಬೇಕೆಂದು ಅಲೆದಾಡಿದರು. ಕೊನೆಗೂ ತಂಪು ಅವರ ಹೆಸರಿನಲ್ಲಿ 24 ಸೆಂಟ್ಸ್ ಜಾಗವನ್ನು ಗುರುತು ಮಾಡಿ ಹಕ್ಕು ಪತ್ರ ಮಾಡಿಸಿ, ಐಟಿಡಿಪಿ ಇಲಾಖೆಯ ಅನುದಾನದ ಮೂಲಕ ಮನೆ ನಿರ್ಮಿಸಲು ಮುಂದಾದರು.
ಐಟಿಡಿಪಿಯಿಂದ ಕಂತಿನಲ್ಲಿ ಬಂದ ಹಣದಲ್ಲಿ ಮನೆ ಕೆಲಸ ಆರಂಭಿಸಿ ತಲಾ ರೂ. 2 ಲಕ್ಷದಂತೆ ನಾಲ್ಕು ಮನೆಗಳನ್ನು ನಿರ್ಮಿಸಿದರು. ಕೇವಲ ನಾಲ್ಕೈದು ತಿಂಗಳಿನಲ್ಲಿ ಕಾಮಗಾರಿ ಪೂರ್ಣಗೊಳಿಸಿ ಅವರ ವಾಸ್ತವ್ಯಕ್ಕೆ ಅವಕಾಶ ಕಲ್ಪಿಸಲಾಯಿತು. ತಾವೇ ಸ್ವತಃ ಕಾಮಗಾರಿಯನ್ನು ವಹಿಸಿಕೊಂಡ ಅಬ್ದುಲ್ಲಾ, ಅದಕ್ಕೆ ತಗುಲಿದ ಹೆಚ್ಚುವರಿ ಮೊತ್ತ ಒಂದು ಲಕ್ಷ ರೂ. ಅನ್ನು ವಿವಿಧ ದಾನಿಗಳಿಂದ ಭರಿಸಿ ಸುಂದರವಾಗಿ ಮನೆ ನಿರ್ಮಾಣ ಮಾಡಿಸಿ ಇತರರಿಗೆ ಮಾದರಿಯಾಗಿದ್ದಾರೆ.
ನಿವಾಸಿ ತಂಪು ಮಾತನಾಡಿ, ನಮ್ಮ ಹಿರಿಯರು ವಾಸಿಸುತಿದ್ದ ಜಾಗದಲ್ಲಿ ನಾವು ವಾಸಿಸುತಿದ್ದೆವು. ಸರಿಯಾದ ಮನೆ ಇಲ್ಲದೆ ಗುಡಿಸಲಿನಲ್ಲಿ ಕಷ್ಟದ ಜೀವನ ನಡೆಸುತಿದ್ದೆವು. ಬುಟ್ಟಿ ಹೆಣೆದು ನೂರಾರು ವರ್ಷಗಳಿಂದ ಇಲ್ಲಿ ಜೀವನ ಸಾಗಿಸುತ್ತಿದ್ದೆವು. ಅಬ್ದುಲ್ಲಾ ಅವರ ಸಹಕಾರದಿಂದ ಸರಕಾರದ ಸಹಾಯದಿಂದ ನಮಗೆ ಮನೆ ದೊರಕಿರುವುದು ಸಂತಸ ತಂದಿದೆ ಎಂದರು.
ಗ್ರಾಪಂ ಸದಸ್ಯ ಅಬ್ದುಲ್ಲಾ ಮಾತನಾಡಿ, ಸ್ವಂತ ಜಾಗ ಹಾಗೂ ಸೂರಿಲ್ಲದೆ ಬರೀ ಬುಟ್ಟಿ ಹೆಣೆಯುವ ಕಾಯಕದಿಂದಲೇ ಜೀವನ ಸಾಗಿಸುತ್ತಿದ್ದ ಈ ಕುಟುಂಬಕ್ಕೆ ಸರಕಾರದ ಅನುದಾನ ಸೇರಿ ನಾಲ್ಕು ಮನೆಗಳಿಗೆ ಒಟ್ಟು ರೂ.9 ಲಕ್ಷ ವೆಚ್ಚವಾಗಿದೆ. ಹೊಸದಾಗಿ ನಿರ್ಮಾಣವಾಗಿರುವ ಮನೆ ಪರಿಸರದ ಸ್ವಚ್ಚತೆಗೆ ಹೆಚ್ಚಿನ ಆದ್ಯತೆ ನೀಡಬೇಕು. ಮನೆಸುತ್ತ ಆವರಣ ಗೋಡೆ ನಿರ್ಮಾಣ ಐಟಿಡಿಪಿ ಇಲಾಖೆ ಸಹಕರಿಸಬೇಕು ಎಂದರು.
ಕೊರಗರ ಅಭಿವೃದ್ಧಿಗೆ 10 ಕೋಟಿ ಪ್ಯಾಕೇಜ್: ಸೊರಕೆ
ಕೊರಗ ಕಾಲನಿಯಲ್ಲಿ ನೂತನವಾಗಿ ನಿರ್ಮಾಣಗೊಂಡ ನಾಲ್ಕು ಕೊರಗ ಕುಟುಂಬಗಳ ಮನೆಗಳನ್ನು ಉದ್ಘಾಟಿಸಿ ಮಾತನಾಡಿದ ಶಾಸಕ ವಿನಯ ಕುಮಾರ್ ಸೊರಕೆ, ಕೊರಗ ಸಮುದಾಯದ ಅಭಿವೃದ್ಧಿಗೆ ಸಮಾಜ ಕಲ್ಯಾಣ ಇಲಾಖೆಯ ಮೂಲಕ ಉಡುಪಿ ಜಿಲ್ಲೆಗೆ ರೂ. 10 ಕೋಟಿ ಪ್ಯಾಕೇಜ್ ಮಂಜೂರು ಮಾಡಲಾಗಿದೆ. ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯಲ್ಲಿರುವ ಮೂಲ ನಿವಾಸಿ ಕೊರಗ ಕುಟುಂಬಗಳಿಗೆ ಸ್ವಂತ ಸೂರು ಕಲ್ಪಿಸಲು ಕ್ರಮ ವಹಿಸಲಾಗಿದೆ. ಈ ಕಾಲನಿಗೆ ಆವರಣಗೋಡೆ ನಿರ್ಮಾಣಕ್ಕೂ ಇಲಾಖೆಗೆ ಸೂಚಿಸಲಾಗುವುದು ಎಂದರು.
ಈ ಸಂದರ್ಭದಲ್ಲಿ ಮನೆ ನಿರ್ಮಾಣಕ್ಕೆ ಸಹಕರಿಸಿದ ಗ್ರಾಪಂ ಸದಸ್ಯ ಅಬ್ದುಲ್ಲಾ ಅವರನ್ನು ಕೊರಗ ಕಾಲನಿಯ ನಿವಾಸಿಗಳು ಶಾಲು ಹೊದಿಸಿ ಸನ್ಮಾನಿಸಿದರು.
ಪಲಿಮಾರು ಗ್ರಾಮ ಪಂಚಾಯತ್ ಅಧ್ಯಕ್ಷ ಜಿತೇಂದ್ರ ಪುಟಾರ್ಡೋ, ತಾಲ್ಲೂಕು ಪಂಚಾಯತ್ ಸದಸ್ಯ ದಿನೇಶ್ ಕೋಟ್ಯಾನ್, ಎಪಿಎಂಸಿ ಸದಸ್ಯ ನವೀನ್ ಚಂದ್ರ ಸುವರ್ಣ, ಗ್ರಾಮ ಪಂಚಾಯತ್ ಸದಸ್ಯ ಅಬ್ದುಲ್ಲಾ, ಕಾಪು ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ನವೀನ್ ಚಂದ್ರ ಜೆ.ಶೆಟ್ಟಿ, ಕರುಣಾಕರ ಶೆಟ್ಟಿ, ಗೋಪಾಲ ಪೂಜಾರಿ, ಗಣೇಶ್ ಕುಮಾರ್, ದೀಪಕ್ ಎರ್ಮಾಳ್, ಗಣೇಶ್ ಕೋಟ್ಯಾನ್, ಕೇಶವ ಸಾಲ್ಯಾನ್, ರೋಹನ್ ಕುಮಾರ್, ಮುಹಮ್ಮದ್ ನಿಯಾಝ್, ರಾಜ್ ಮಾಸ್ಟರ್ ಮತ್ತಿತರರು ಉಪಸ್ಥಿತರಿದ್ದರು.







