ಜು.27ರಂದು ನಿತೀಶ್ ಮತ್ತೆ ಮುಖ್ಯಮಂತ್ರಿಯಾಗಿ ಪದಗ್ರಹಣ ಸಾಧ್ಯತೆ
ನಿತೀಶ್ ಗೆ ಬಿಜೆಪಿ ಬೆಂಬಲ

ಬಿಹಾರ, ಜು. 26: ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ಬೆನ್ನಲ್ಲೇ ಬಿಹಾರದ ರಾಜಕೀಯ ನಾಟಕೀಯ ಬೆಳವಣಿಗೆಗಳಿಗೆ ಸಾಕ್ಷಿಯಾಗಿದ್ದು, ಅವರಿಗೆ ಪ್ರತಿಪಕ್ಷವಾದ ಬಿಜೆಪಿ ನಿಶ್ಶರ್ತ ಬೆಂಬಲವನ್ನು ಪ್ರಕಟಿಸಿದೆ.
ಇದರೊಂದಿಗೆ ಬಿಹಾರದಲ್ಲಿ ನೂತನ ಜೆಡಿಯು-ಬಿಜೆಪಿ ಸರಕಾರ ಅಧಿಕಾರಕ್ಕೇರುವುದು ಖಚಿತವಾಗಿದೆ. ಅಧಿಕೃತ ಮೂಲಗಳ ಪ್ರಕಾರ ನಿತೀಶ್ ಕುಮಾರ್‌ಗೆ ಬೆಂಬಲ ವ್ಯಕ್ತಪಡಿಸುವ ಪತ್ರವೊಂದನ್ನು ಹಸ್ತಾಂತರಿಸಿದೆ. ಬಿಜೆಪಿ ನಾಯಕರಾದ ಸುಶೀಲ್ ಕುಮಾರ್ ಹಾಗೂ ನಿತ್ಯಾನಂದ ರಾಯ್ ಇಂದು ಸಂಜೆ ರಾಜಭವನಕ್ಕೆ ತೆರಳಿ ನಿತೀಶ್‌ಗೆ ಬೆಂಬಲವನ್ನು ಘೋಷಿಸುವ ಪತ್ರವನ್ನು ರಾಜ್ಯಪಾಲ ಕೇಸರಿನಾಥ್ ತ್ರಿಪಾಠಿ ಅವರಿಗೆ ಹಸ್ತಾಂತರಿಸಿದರು.
ನಿತೀಶ್ ಕುಮಾರ್ ಗುರುವಾರ ಸಂಜೆ 5 ಗಂಟೆಗೆ ನೂತನ ಜೆಡಿಯು-ಬಿಜೆಪಿ ಮೈತ್ರಿ ಸರಕಾರದ ಮುಖ್ಯಮಂತ್ರಿಯಾಗಿ ಪ್ರಮಾಣವಚನ ಸ್ವೀಕರಿಸಲಿದ್ದಾರೆ. ನಿತೀಶ್ ಇಂದು ರಾಜೀನಾಮೆ ನೀಡಿದ ಕೆಲವೇ ತಾಸುಗಳ ಬಳಿಕ ಅವರ ನಿವಾಸಕ್ಕೆ ಬಿಹಾರದ ಬಿಜೆಪಿ ನಾಯಕರಾದ ಸುಶೀಲ್ ಮೋದಿ ಹಾಗೂ ನಿತ್ಯಾನಂದ ರಾ ಹಾಗೂ ಕೆಲವು ಬಿಜೆಪಿ ಶಾಸಕರು ಆಗಮಿಸಿ, ಮಾತುಕತೆ ನಡೆಸಿದರು. ಮಾತುಕತೆಯ ಬಳಿಕ ಉಭಯ ಪಕ್ಷಗಳೂ ಬಿಹಾರದಲ್ಲಿ ನೂತನ ಸರಕಾರವನ್ನು ರಚಿಸಲು ನಿರ್ಧರಿಸಿದವು. ಹೊಸ ಸಂಪುಟದಲ್ಲಿ ಬಿಜೆಪಿ ನಾಯಕ ಸುಶೀಲ್ ಕುಮಾರ್ ಮೋದಿ ಅವರಿಗೆ ಉಪಮುಖ್ಯಮಂತ್ರಿ ಸ್ಥಾನ ಲಭಿಸುವ ನಿರೀಕ್ಷೆಯಿದೆ.
ಈ ಮಧ್ಯೆ ಸುಶೀಲ್ ಕುಮಾರ್ ಹೇಳಿಕೆಯೊಂದನ್ನು ನೀಡಿ, ಬಿಜೆಪಿಯು ನೂತನ ಸರಕಾರದ ಭಾಗವಾಗಲಿದೆಯೆಂದರು. 243 ಸದಸ್ಯ ಬಲದ ಬಿಹಾರ ವಿಧಾನಸಭೆಯಲ್ಲಿ ಜೆಡಿಯು 71 ಹಾಗೂ ಬಿಜೆಪಿ 53 ಶಾಸಕರನ್ನು ಹೊಂದಿದೆ. ಈ ಎರಡು ಪಕ್ಷಗಳು ಒಟ್ಟಾಗಿ 124 ಶಾಸಕರನ್ನು ಹೊಂದಿದ್ದು, ಸರಳಬಹುಮತವನ್ನು ಪಡೆಯಲಿದೆ. ಇದರ ಜೊತೆಗೆ ವಿಧಾನಸಭೆಯಲ್ಲಿ ಎನ್‌ಡಿಎ ಮೈತ್ರಿಕೂಟದ ಅಂಗಪಕ್ಷಗಳಾದ ಎಲ್‌ಜೆಪಿ ಹಾಗೂ ಆರ್‌ಎಲ್‌ಎಸ್‌ಪಿ ತಲಾ ಎರಡು ಶಾಸಕರನ್ನು ಹೊಂದಿದೆ. ಬಿಹಾರ ವಿಧಾನಸಭೆಯಲ್ಲಿ ಸರಳ ಬಹುಮತಕ್ಕೆ 122 ಶಾಸಕರ ಅಗತ್ಯವಿದೆ.







