ತಿರುನೆಲ್ವೆಲಿ ಜಿಲ್ಲಾಧಿಕಾರಿಯ ‘ಕರುಣೆಯ ಗೋಡೆ’ಗೆ ಸಾರ್ವಜನಿಕರಿಂದ ದೇಣಿಗೆಗಳ ಮಹಾಪೂರ

ತಿರುನೆಲ್ವೆಲಿ(ತ.ನಾ),ಜು.26: ತಮಿಳುನಾಡು ವಿನೂತನ ಉಪಕ್ರಮವೊಂದಕ್ಕೆ ಸಾಕ್ಷಿಯಾಗಿದೆ. ತಿರುನೆಲ್ವೆಲಿಯ ಜಿಲ್ಲಾಧಿಕಾರಿ ಸಂದೀಪ್ ನಂದೂರಿ ಅವರ ಕಲ್ಪನೆಯ ಕೂಸು ಇದು.
‘‘ನಿಮಗೆ ಅಗತ್ಯವಿಲ್ಲದಿದ್ದರೆ ಅದನ್ನು ದೇಣಿಗೆಯಾಗಿ ನೀಡಿ! ನಿಮಗೆ ಅಗತ್ಯವಿದ್ದರೆ ಅದನ್ನು ತೆಗೆದುಕೊಳ್ಳಿ!’’:ಇವು ಈ ವರ್ಣರಂಜಿತ ‘ಕರುಣೆಯ ಗೋಡೆ’ಯ ಮೇಲೆ ಎದ್ದು ಕಾಣುವ ಶಬ್ದಗಳು.
ಇಲ್ಲದವರ ಅಗತ್ಯಕ್ಕಾಗಿ ಈ ಗೋಡೆಯನ್ನು ಸ್ಥಾಪಿಸಲಾಗಿದೆ. ಪುಸ್ತಕಗಳು,ಆಟಿಕೆಗಳಿಂದ ಹಿಡಿದು ಬಟ್ಟೆಗಳು ಮತ್ತು ಶೂಗಳವರೆಗೆ ಬಳಸಲರ್ಹವಾದ ಯಾವುದೇ ವಸ್ತುವನ್ನು ಸಾರ್ವಜನಿಕರು ಜಿಲ್ಲಾಧಿಕಾರಿಗಳ ಕಚೇರಿಯ ಆವರಣದ ಗೋಡೆಯಲ್ಲಿ ಅಳವಡಿಸಲಾ ಗಿರುವ ಶೆಲ್ಫ್‌ಗಳಲ್ಲಿ ಇಡಬಹುದಾಗಿದೆ. ಅಗತ್ಯವುಳ್ಳವರು ಅವುಗಳನ್ನು ತೆಗೆದುಕೊಳ್ಳ ಬಹುದಾಗಿದೆ. ಶರ್ಟ್‌ಗಳು ಮತ್ತು ಪ್ಯಾಂಟ್‌ಗಳು ಈ ಗೋಡೆಗೆ ತೂಗುಬಿದ್ದಿದ್ದು, ಕುತೂಹಲಿ ಜನರು ಇಲ್ಲಿರುವ ವಸ್ತುಗಳನ್ನು ಪರಿಶೀಲಿಸುತ್ತಿರುವ ದೃಶ್ಯ ಸಾಮಾನ್ಯವಾಗಿದೆ.
ನಾವು ನಮ್ಮ ಮನೆಗಳಲ್ಲಿ ಬಳಸದೆ ಬಿಟ್ಟಿರುವ ವಸ್ತುಗಳಿಂದ ಬಡಜನರಿಗೆ ಪ್ರಯೋಜನವಾಗಲಿ ಎನ್ನುವುದು ಈ ಪರಿಕಲ್ಪನೆಯ ಹಿಂದಿನ ಉದ್ದೇಶವಾಗಿದೆ. ಇದು ವಸ್ತುಗಳ ವಿನಿಮಯಕ್ಕೊಂದು ಸ್ಥಳವಾಗಿದೆ,ಅಷ್ಟೇ. ಇದೇನೂ ಹೊಸ ಪರಿಕಲ್ಪನೆಯಲ್ಲ. ಇರಾನ್‌ನ ಎಲ್ಲೋ ಒಂದು ಕಡೆ ಇದು ಆರಂಭಗೊಂಡಿತ್ತು. ಉತ್ತರ ಭಾರತದ ರಾಜ್ಯಗಳಲ್ಲಿ, ನಮ್ಮ ನೆರೆಯ ಕೆಲವು ರಾಜ್ಯಗಳಲ್ಲಿಯೂ ಇದೆ. ಆದರೆ ತಮಿಳುನಾಡಿನಲ್ಲಿ ಇದೇ ಮೊದಲ ಬಾರಿಗೆ ಈ ವ್ಯವಸ್ಥೆ ಮಾಡಲಾಗಿದೆ ಎಂದು ನಂದೂರಿ ಸುದ್ದಿಗಾರರಿಗೆ ತಿಳಿಸಿದರು.
ಜಿಲ್ಲಾಧಿಕಾರಿಗಳ ಕಚೇರಿ ಎಂದ ಮೇಲೆ ಬಹಳಷ್ಟು ಜನರು ಬಂದು ಹೋಗುತ್ತಿರುತ್ತಾರೆ. ಹೀಗಾಗಿ ಈ ‘ಕರುಣೆಯ ಗೋಡೆ ’ಯನ್ನು ಇಲ್ಲಿಯೇ ಸ್ಥಾಪಿಸಲು ನಾವು ನಿರ್ಧರಿಸಿದೆವು ಎಂದೂ ಅವರು ತಿಳಿಸಿದರು.
ಕರುಣೆಯ ಗೋಡೆ ಅಸ್ತಿತ್ವಕ್ಕೆ ಬಂದು ಕೇವಲ ಮೂರು ದಿನಗಳಾಗಿವೆ. ಸಾರ್ವಜನಿಕರು ತಮ್ಮಲ್ಲಿರುವ, ತಾವು ಬಳಸದ ವಸ್ತುಗಳನ್ನು ರಾಶಿರಾಶಿಯಾಗಿ ತಂದು ಇಲ್ಲಿಡುತ್ತಿದ್ದಾರೆ. ಅಗತ್ಯವುಳ್ಳವುರು ತಮಗೆ ಬೇಕಾದ್ದನ್ನು ಇಲ್ಲಿಂದ ಆರಿಸಿಕೊಂಡು ಒಯ್ಯುತ್ತಾರೆ.
ಇಂತಹ ಯೋಜನೆಯೊಂದನ್ನು ಆರಂಭಿಸಿದ್ದಕ್ಕಾಗಿ ಜಿಲ್ಲಾಧಿಕಾರಿಗಳಿಗೆ ನಾವು ಋಣಿಯಾಗಿದ್ದೇವೆ. ನಾವು ಇಲ್ಲಿಂದ ಸೀರೆ, ಪ್ಯಾಂಟ್ ಮತ್ತು ಶರ್ಟ್‌ಗಳನ್ನು ತೆಗೆದುಕೊಂಡಿದ್ದೇವೆ ಎಂದು ದಿನಗೂಲಿ ಮಾಡಿ ಹೊಟ್ಟೆ ಹೊರೆದುಕೊಳ್ಳುತ್ತಿರುವ ಮರಿಯಮ್ಮಾಳ್ ಹೇಳಿದರು.







