ಆಳ್ವಾಸ್ ಕಾಲೇಜಿನ ಎನ್‍ಎಸ್‍ಎಸ್ ಚಟುವಟಿಕೆಗಳ ಉದ್ಘಾಟನೆ

ಮೂಡಬಿದಿರೆ,ಜು.27: ಧರ್ಮ ಮತ್ತು ಜಾತಿ ಭಾವನೆಗಳಿಗೆ ಸಿಲುಕಿ ಸಮಾಜ ಇಂದು ಸೊರಗುತ್ತಿದೆ. ಅನಗತ್ಯ ರಾಜಕೀಯವು ಬೇರುಮಟ್ಟಕ್ಕೆ ಇಳಿದು ಹೋಗಿದೆ. ಶಿಕ್ಷಣ ಮತ್ತು ವೈಜ್ಞಾನಿಕ ಅಭಿವೃದ್ಧಿಯು ನಮ್ಮನ್ನು ಮುಂದಕ್ಕೆ ಕೊಂಡೊಯ್ಯುವ ಬದಲು ಈ ಸಂಕುಚಿತ ಭಾವನೆಗಳು ನಮ್ಮನ್ನು ಮತ್ತಷ್ಟು ಹಿಂದಕ್ಕೆ ಒಯ್ಯುವಂತೆ ಕಾಣಿಸುತ್ತದೆ ಎಂದು ಕವಿ, ಸಾಹಿತಿ ಡಾ. ವಸಂತಕುಮಾರ ಪೆರ್ಲ ಅವರು ಹೇಳಿದರು.
ಆಳ್ವಾಸ್ ಕಾಲೇಜಿನ ರಾಷ್ಟ್ರೀಯ ಸೇವಾ ಯೋಜನೆಯ ಪ್ರಸಕ್ತ ಸಾಲಿನ ಚಟುವಟಿಕೆಗಳನ್ನು ಉದ್ಘಾಟಿಸಿ ಮಾತನಾಡಿದರು. ಮಾಧ್ಯಮಗಳು ಜನರಿಗೆ ಅರಿವು ಮತ್ತು ಶಿಕ್ಷಣವನ್ನು ನೀಡಿ, ರಾಷ್ಟ್ರೀಯ ಭಾವನೆಗಳನ್ನು ಮೂಡಿಸುವ ಬದಲು ರಾಜಕೀಯದ ಇಂತಹ ಆಟಗಳಲ್ಲಿ ಸಿಲುಕಿ ಅಂಥವನ್ನೇ ವೈಭವೀಕರಿಸುತ್ತ ಸಮಾಜವನ್ನು ಮತ್ತಷ್ಟು ಹದಗೆಡಿಸುವ ಕೆಲಸಗಳಲ್ಲಿ ನಿರತವಾಗಿವೆ. ದೇಶದ ಅರ್ಧದಷ್ಟಿರುವ ಯುವಜನರು ಇಂತಹ ನಕಾರಾತ್ಮಕ ವಿಚಾರಗಳಲ್ಲಿ ಮುಳುಗದೆ ಸಕಾರಾತ್ಮಕ ಚಿಂತನೆಯಿಂದ ರಾಷ್ಟ್ರ ಕಟ್ಟುವ ವಿಚಾರದತ್ತ ಗಮನ ಹರಿಸಬೇಕಾಗಿದೆ ಎಂದು ಡಾ. ಪೆರ್ಲ ಹೇಳಿದರು.
ಆಳ್ವಾಸ್ ಕಾಲೇಜಿನ ಪ್ರಾಂಶುಪಾಲ ಡಾ. ಕುರಿಯನ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದರು. ಯುವಜನರು ದುಶ್ಚಟಗಳಿಗೆ ಬಲಿಯಾಗದೆ ಉತ್ತಮ ನಡತೆಯನ್ನು ಮೈಗೂಡಿಸಿಕೊಳ್ಳಬೇಕು ಎಂದು ಸಲಹೆ ನೀಡಿದರು. ಪಾಠಪ್ರವಚನಗಳ ಜೊತೆಗೆ ವ್ಯಕ್ತಿತ್ವ ವಿಕಸನಕ್ಕಾಗಿ ರಾಷ್ಟ್ರೀಯ ಸೇವಾ ಯೋಜನೆಯಂತಹ ಸಂಘಟನೆಗಳು ವಿದ್ಯಾರ್ಥಿಗಳಿಗೆ ಅತ್ಯವಶ್ಯಕ ಎಂದರು.
ರಾಷ್ಟ್ರೀಯ ಸೇವಾ ಯೋಜನಾಧಿಕಾರಿ, ಕನ್ನಡ ಉಪನ್ಯಾಸಕ ಚಂದ್ರಶೇಖರ ಗೌಡ ಕೆ. ಸ್ವಾಗತಿಸಿದರು. ವಿದ್ಯಾರ್ಥಿನಿ ಸಿಂಧು ಹೆಗಡೆ ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು. ಕನ್ನಡ ಉಪನ್ಯಾಸಕ ಡಾ. ಪ್ರವೀಣ್ ಚಂದ್ರ ಉಪಸ್ಥಿತರಿದ್ದರು. ಸುಪ್ರೀತಾ ವಂದಿಸಿದರು.
ಶಿಬಿರದ ಮೂಲಕ ಮೂಡಬಿದಿರೆ ಪರಿಸರದಲ್ಲಿ ವಿದ್ಯಾರ್ಥಿಗಳು ಈಗಾಗಲೇ ನೂರು ಇಂಗುಗುಂಡಿಗಳನ್ನು ನಿರ್ಮಿಸಿದ್ದು, ರಕ್ತದಾನ ಶಿಬಿರಗಳ ಮೂಲಕ ನೂರು ಯುನಿಟ್ ರಕ್ತ ಸಂಗ್ರಹಿಸಿ ಮಂಗಳೂರಿನ ವೆನ್‍ಲಾಕ್ ಆಸ್ಪತ್ರೆಗೆ ನೀಡುವ ಗುರಿ ಹೊಂದಿದ್ದಾರೆ. ಕಾರ್ಗಿಲ್ ಯುದ್ಧದ ಸ್ಮರಣೆಯನ್ನು ಕಾರ್ಯಕ್ರಮದಲ್ಲಿ ಮಾಡಲಾಯಿತಲ್ಲದೆ, ಮಡಿದ ಯುದ್ಧವೀರರಿಗೆ ಮೌನ ಪ್ರಾರ್ಥನೆ ಸಲ್ಲಿಸಲಾಯಿತು.







