ಶಿವಮೊಗ್ಗ ಜಿ.ಪಂ. ಸದಸ್ಯರ ಗಂಭೀರ ಆರೋಪ
ಅಕ್ರಮ ಮರಳು ಗಣಿಗಾರಿಕೆಯಲ್ಲಿ ಪೊಲೀಸ್ ಅಧಿಕಾರಿಗಳು ಶಾಮೀಲು

ಶಿವಮೊಗ್ಗ, ಜು. 27: ಜಿಲ್ಲೆಯಲ್ಲಿ ಅಕ್ರಮ ಮರಳು ಗಣಿಗಾರಿಕೆ ಅವ್ಯಾಹತವಾಗಿ ನಡೆಯುತ್ತಿರುವ ಆರೋಪಗಳು ಕೇಳಿಬರುತ್ತಿರುವ ಬೆನ್ನಲ್ಲೆ ಕೆಲ ಪೊಲೀಸ್ ಅಧಿಕಾರಿಗಳು ಕೂಡ ಕಾನೂನು ಬಾಹಿರ ಮರಳು ಗಣಿಗಾರಿಕೆಯಲ್ಲಿ ಶಾಮೀಲಾಗಿದ್ದಾರೆ ಎಂದು ಶಿವಮೊಗ್ಗ ಜಿಲ್ಲಾ ಪಂಚಾಯತ್ ಸದಸ್ಯರಾದ ಕೆ.ಇ.ಕಾಂತೇಶ್ ಹಾಗೂ ವೀರಭದ್ರಪ್ಪ ಪೂಜಾರ್ ಗಂಭೀರ ಆರೋಪ ಮಾಡಿದ್ದಾರೆ.
ಜಿಲ್ಲೆಯಲ್ಲಿ ತಲೆದೋರಿರುವ ಮರಳಿನ ಅಭಾವಕ್ಕೆ ಸಂಬಂಧಿಸಿದಂತೆ ಗುರುವಾರ ನಗರದ ಜಿ.ಪಂ. ಸಭಾಂಗಣದಲ್ಲಿ ನಡೆಸಲಾದ ವಿಶೇಷ ಸಭೆಯಲ್ಲಿ ಈ ಇಬ್ಬರು ಸದಸ್ಯರು ಈ ಗುರುತರ ಆರೋಪ ಮಾಡಿದ್ದಾರೆ.ಈ ಕುರಿತಂತೆ ಸೂಕ್ತ ತನಿಖೆ ನಡೆಸಿ ತಪ್ಪಿತಸ್ಥ ಪೊಲೀಸ್ ಅಧಿಕಾರಿಗಳ ವಿರುದ್ದ ಶಿಸ್ತುಕ್ರಮ ಜರುಗಿಸಬೇಕೆಂದು ಸಭೆಯಲ್ಲಿ ಉಪಸ್ಥಿತರಿದ್ದ ಜಿಲ್ಲಾಧಿಕಾರಿ ಡಾ. ಎಂ. ಲೋಕೇಶ್‌ರವರಿಗೆ ಆಗ್ರಹಿಸಿದ್ದಾರೆ.
ಶಾಮೀಲು: ಸದಸ್ಯ ಕೆ.ಇ.ಕಾಂತೇಶ್ ಮಾತನಾಡಿ, ’ಕಾನೂನುಬಾಹಿರ ಮರಳು ಗಣಿಗಾರಿಕೆಯಲ್ಲಿ ಇನ್ಸ್‌ಪೆಕ್ಟರ್, ಸಬ್ ಇನ್ಸ್‌ಪೆಕ್ಟರ್‌ಗಳು ಭಾಗಿಯಾಗಿದ್ದಾರೆ. ಇಲ್ಲಿಯವರೆಗೂ ಇವರ ವಿರುದ್ದ ಕ್ರಮಕೈಗೊಂಡಿಲ್ಲ. ಈ ಬಗ್ಗೆ ತಮ್ಮ ಬಳಿ ಸಾಕಷ್ಟು ಮಾಹಿತಿಯಿದೆ. ಮರಳು ನೀತಿಯಿರುವುದು ಬರೀ ಸಾರ್ವಜನಿಕರಿಗೆ ಮಾತ್ರವೇ? ಪೊಲೀಸ್ ಅಧಿಕಾರಿಗಳಿಗಿಲ್ಲವೇ? ಎಂದು ಡಿ.ಸಿ.ಯವರನ್ನು ಪ್ರಶ್ನಿಸಿದರು.
ಜಿಲ್ಲಾಧಿಕಾರಿ ಪ್ರತಿಕ್ರಿಯಿಸಿ, ’ಕಾನೂನುಬಾಹಿರ ಮರಳು ಸಾಗಾಣೆ ಬಗ್ಗೆ ತಮಗೆ ಮಾಹಿತಿ ನೀಡಿದರೆ ಸೂಕ್ತ ಕ್ರಮಕೈಗೊಳ್ಳುವ ಭರವಸೆ’ ನೀಡಿದರು.
ಕೆ.ಇ.ಕಾಂತೇಶ್ ಮಾತನಾಡಿ, ’ತಾನು ಎಸ್.ಪಿ.ಯವರಿಗೆ ಈ ಬಗ್ಗೆ ಮಾಹಿತಿ ನೀಡಿದ್ದೆನೆ. ಆದರೆ ಇಲ್ಲಿಯವರೆಗೂ ಯಾವುದೇ ಕ್ರಮವಾಗಿಲ್ಲ’ ಎಂದು ಪ್ರತಿಕ್ರಿಯೆ ನೀಡಿದರು.
ಪಿಎಸ್‌ಐ ಶಾಮೀಲು: ಆನವೇರಿ ಕ್ಷೇತ್ರದ ಸದಸ್ಯ ವೀರಭದ್ರಪ್ಪ ಪೂಜಾರ್ ಮಾತನಾಡಿ, ’ತಮ್ಮ ಕ್ಷೇತ್ರ ವ್ಯಾಪ್ತಿಯಲ್ಲಿ ಅಕ್ರಮ ಮರಳು ಗಣಿಗಾರಿಕೆಯಲ್ಲಿ ಸಬ್ ಇನ್ಸ್‌ಪೆಕ್ಟರ್‌ವೊಬ್ಬರು ನೇರವಾಗಿ ಶಾಮೀಲಾಗಿದ್ದಾರೆ. ಕಾನೂನುಬಾಹಿರ ಮರಳು ದಂಧೆಯಲ್ಲಿ ತೊಡಗಿದ್ದಾರೆ. ಇಲ್ಲಿಯವರೆಗೂ ಇವರ ವಿರುದ್ದ ಕ್ರಮಕೈಗೊಂಡಿಲ್ಲ. ಅಕ್ರಮ ಮರಳು ಸಾಗಾಣಿಕೆದಾರರೊಂದಿಗೆ ಮಾಮೂಲಿ ಫಿಕ್ಸ್ ಮಾಡಿಕೊಂಡಿದ್ದಾರೆ’ ಎಂದು ನೇರ ಆರೋಪ ಮಾಡಿದರು.
ಮಾಮೂಲಿ ಫಿಕ್ಸ್: ಸಾಗರ ತಾಲೂಕು ಪಂಚಾಯತ್ ಅಧ್ಯಕ್ಷ ಹಕ್ರೆ ಮಲ್ಲಿಕಾರ್ಜುನ್‌ರವರು ಮಾತನಾಡಿ, ’ಸಾಗರ ತಾಲೂಕಿನಲ್ಲಿ ಅವ್ಯಾಹತವಾಗಿ ಅಕ್ರಮ ಮರಳು ಗಣಿಗಾರಿಕೆ, ಸಾಗಾಣೆ ದಂಧೆ ನಡೆಯುತ್ತಿದೆ. ಆದರೆ ಪೊಲೀಸರು ಯಾವುದೇ ಕ್ರಮಕೈಗೊಳ್ಳುತ್ತಿಲ್ಲ. ಕೆಲ ಪೊಲೀಸ್ ಅಧಿಕಾರಿಗಳು ದಂಧೆ ನಡೆಸುವವರೊಂದಿಗೆ ಮಾಮೂಲಿ ಫಿಕ್ಸ್ ಮಾಡಿಕೊಂಡಿದ್ದಾರೆ. ಮಾಮೂಲಿ ಕೊಡದೆ ಮರಳು ಸಾಗಾಣೆ ಮಾಡುವ ಲಾರಿಗಳನ್ನು ಮಾತ್ರ ತಡೆದು ನಿಲ್ಲಿಸಿ ಕೇಸ್ ಹಾಕುತ್ತಾರೆ. ಅವರಿಂದ 40 ರಿಂದ 50 ಸಾವಿರ ರೂ. ಪಡೆಯುತ್ತಾರೆ. ಇದರಿಂದ ಅಕ್ರಮ ಮರಳು ಸಾಗಾಣೆ ದಂಧೆ ಸಾಗರ ತಾಲೂಕಿನಲ್ಲಿ ಅವ್ಯಾಹತವಾಗಿ ನಡೆದುಕೊಂಡು ಬರುವಂತಾಗಿದೆ ಎಂದು ಆಪಾದಿಸಿದರು.
ಸಾಗಾಣೆ: ವಿಧಾನಪರಿಷತ್ ಸದಸ್ಯ ಎಂ.ಬಿ.ಭಾನುಪ್ರಕಾಶ್ ಮಾತನಾಡಿ, ಜಿಲ್ಲೆಯಿಂದ ಬೇರೇಡೆಗೆ ಅಕ್ರಮವಾಗಿ ಮರಳು ಸಾಗಾಣೆಯಾಗುತ್ತಿದೆ. ಮನೆ ನಿರ್ಮಾಣಕ್ಕಾಗಿ ಎತ್ತಿನ ಗಾಡಿ, ಸಣ್ಣಪುಟ್ಟ ವಾಹನಗಳಲ್ಲಿ ಮರಳು ಕೊಂಡೊಯ್ಯುವ ಗ್ರಾಮಸ್ಥರ ಮೇಲೆ ಪೊಲೀಸರು ದೌರ್ಜನ್ಯ ನಡೆಸುತ್ತಿದ್ದಾರೆ. ಇದಕ್ಕೆ ಕಡಿವಾಣ ಹಾಕಬೇಕಾಗಿದೆ ಎಂದು ಆಗ್ರಹಿಸಿದರು.







