ಜು.28ರಿಂದ ಜುಲೈ 30ರವರೆಗೆ ‘ಬ್ರೆಕಿಯಲ್‌ಕಾನ್ 2017’ ಸಮಾವೇಶ
ಮಂಗಳೂರು, ಜು. 27: ಎ.ಜೆ. ವೈದ್ಯಕೀಯ ವಿಜ್ಞಾನ ಸಂಸ್ಥೆಯ ಪ್ಲಾಸ್ಟಿಕ್ ಶಸ್ತ್ರ ಚಿಕಿತ್ಸಾ ವಿಭಾಗದ ವತಿಯಿಂದ ಜು.28ರಿಂದ ಜುಲೈ 30ರವರೆಗೆ ‘ಬ್ರೆಕಿಯಲ್‌ಕಾನ್ 2017’ ಸಮಾವೇಶವು ಸಂಸ್ಥೆಯ ಸಭಾಂಗಣದಲ್ಲಿ ನಡೆಯಲಿದೆ.
ಸಮಾವೇಶವು ಭಾರತದಲ್ಲಿ ಎರಡು ವರ್ಷಕೊಮ್ಮೆ ನಡೆಯುವ ಬ್ರೆಕಿಯಲ್ ಪ್ಲೆಕ್ಸಸ್ ಸರ್ಜರಿ ಗುಂಪಿನ 9ನೆ ಸಮ್ಮೇಳನವಾಗಿದೆ. ಈ ಮೂರು ದಿನದ ಸಮ್ಮೇಳನದಲ್ಲಿ ಸುಮಾರು ಭಾರತದ 150 ಪ್ರತಿನಿಧಿಗಳು ಹಾಗೂ 8 ಇತರ ದೇಶದ ಪ್ರತಿನಿಧಿಗಳು ಭಾಗವಹಿಸಲಿದ್ದಾರೆ. ಎರಡು ವರ್ಷಗಳ ಮೊದಲು ಜೈಪುರದಲ್ಲಿ ಈ ಸಮ್ಮೇಳನವನ್ನು ಆಯೋಜಿಸಲಾಗಿತ್ತು. ಮುಂದಿನ ಸಮ್ಮೇಳನವು ಚೆನೈಯಲ್ಲಿ ನಡೆಯಲಿದೆ ಎಂದು ಸಂಸ್ಥೆಯ ಪ್ರಕಟನೆ ತಿಳಿಸಿದೆ.
ಅಂತಾರಾಷ್ಟ್ರೀಯ ಖ್ಯಾತಿಯ ಅಮೆರಿಕದ, ಚೀನಾ, ಸ್ಪೇನ್, ಈಜಿಪ್ಟ್, ಶ್ರೀ ಲಂಕಾದ ಪ್ಲಾಸ್ಟಿಕ್ ಮತ್ತು ಮೈಕ್ರೋವ್ಯಾಸ್ಕುಲರ್ ಶಸ್ತ್ರಚಿಕಿತ್ಸಕರು ಈ ಸಮ್ಮೇಳನದಲ್ಲಿ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಲಿದ್ದಾರೆ. ಪ್ರೊಫೆಸರ್ ಮತ್ತು ಪ್ಲಾಸ್ಟಿಕ್ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ದಿನೇಶ್ ಕದಂ ಸಮ್ಮೇಳನದ ಸಂಘಟನಾ ಅಧ್ಯಕ್ಷರಾಗಿರುವರು.
ಡಾ. ಶಂತರಾಮ್ ಶೆಟ್ಟಿ ಮತ್ತು ಬ್ರೆಕಿಯಲ್‌ಪ್ಲೆಕ್ಸಸ್ ಸರ್ಜರಿ ಗುಂಪಿನ ಅಧ್ಯಕ್ಷ ಬ್ರಿಗೆಡಿಯರ್ ಪಿ.ಎಸ್. ಭಂಡಾರಿ ಅವರು ಜು.28ರಂದು ಬೆಳಗ್ಗೆ 11 ಗಂಟೆಗೆ ಸಮ್ಮೇಳವನ್ನು ಉದ್ಘಾಟಿಸಲಿದ್ದಾರೆ. ಲಕ್ಷ್ಮೀ ಮೆಮೋರಿಯಲ್ ಎಜುಕೇಶನ್ ಟ್ರಸ್ಟ್‌ನ ಅಧ್ಯಕ್ಷ ಡಾ. ಎ.ಜೆ. ಶೆಟ್ಟಿ ಉಪಸ್ಥಿತರಿರುವರು ಎಂದು ಪ್ರಕಟನೆ ತಿಳಿಸಿದೆ.
ಬ್ರೆಕಿಯಲ್ ಪ್ಲೆಕ್ಸಸ್ ಬಗ್ಗೆ :
ಬ್ರೆಕಿಯಲ್ ಪ್ಲೆಕ್ಸಸ್ ಎಂಬುದು ಕುತ್ತಿಗೆಯ ಬೆನ್ನುಹುರಿುಂದ ಕೈ ಮತ್ತು ತೋಳುಗಳಿಗೆ ಸಾಗುವ ನರಗಳ ಗುಂಪಾಗಿದೆ. ಸಾಮಾನ್ಯವಾಗಿಅಪಘಾತದ ಸಮಯದಲ್ಲಿ ಹಠಾತಾಗಿ ಉಂಟಾಗುವ ಗಾಯಗಳಿಂದಾಗಿ ಈ ನರಗಳು ಛಿದ್ರಗೊಂಡು ಕೈಯ ಸಂಪೂರ್ಣ ಪಾರ್ಶ್ವವಾಯುಗೆ ಕಾರಣವಾಗುತ್ತದೆ. ಸಾಮಾನ್ಯವಾಗಿ ದ್ವಿಚಕ್ರ ವಾಹನ ಅಪಘಾತಗಳಲ್ಲಿ ಯುವಕರ ಶಾಶ್ವತ ಅಂಗವೈಕಲ್ಯತೆಗೆ ಕಾರಣವಾಗಬಹುದು. ಶಸ್ತ್ರಚಿಕಿತ್ಸೆಯಿಂದ ಕಾರ್ಯವನ್ನು ಪುನಃ ಸ್ಥಾಪಿಸಲು ಸಹಾಯವಾಗಬಹುದು. ಕೆಲವು ತೀವ್ರತರದ ಪ್ರಕರಣಗಳಲ್ಲಿ ಅಂಗವೈಕಲ್ಯತೆಯು ಶಾಶ್ವತವಾಗಬಹುದು. ಈ ಶಸ್ತ್ರಚಿಕಿತ್ಸೆಯು ಅತ್ಯಂತ ಕ್ಲಿಷ್ಟಕರ ಮತ್ತು ಇತ್ತೀಚಿನ ದಿನಗಳಲ್ಲಿ ಅದೃಷ್ಟವಶಾತಾಗಿ ಮುಂದುವರೆಯುತ್ತಿರುವ ಮೈಕ್ರೋ ಸರ್ಜಿಕಲ್ ತಂತ್ರಜ್ಞಾನಗಳಿಂದಾಗಿ ಗಮನಾರ್ಹ ಸುಧಾರಣೆಗಳು ಮತ್ತು ಚೇತರಿಕೆ ಕಂಡುಬರುತ್ತದೆ. ಆರಂಭಿಕ ಶಸ್ತ್ರಚಿಕಿತ್ಸೆಯು ಬಹಳ ಮುಖ್ಯವಾಗಿದೆ. ಚೇತರಿಕೆಯು ಸಾಮಾನ್ಯವಾಗಿ ಕೆಲವು ತಿಂಗಳುಗಳಿಂದ ವರ್ಷಗಳವರೆಗೆ ಇರುತ್ತದೆ.
ಇಂತಹ ನರಗಳ ತೊಂದರೆಯನ್ನು ನವಜಾತ ಶಿಶುಗಳಲ್ಲಿಯೂ ಕಾಣಬಹುದು. ಇದನ್ನು ಬರ್ತ್ ಪಾಲ್ಸಿ ಎಂದು ಕರೆಯುತ್ತಾರೆ. ಜನನದ ಸಮಯದಲ್ಲಿ ಮಕ್ಕಳು ಈ ಗಾಯಗಳಿಗೆ ಒಳಗಾಗುವ ಸಾಧ್ಯತೆಗಳಿವೆ. ವಿಶ್ವದಾದ್ಯಂತ 1000ರ ನವಜಾತ ಶಿಶುಗಳ ಪೈಕಿ 1-2 ಶಿಶುಗಳಲ್ಲಿ ಈ ಸಮಸ್ಯೆಯನ್ನು ಕಾಣಬಹುದು. ಕೆಲವು ಹಂತದ ಚೇತರಿಕೆಯು ಸಂಭಸಿದರೂ, ಹೆಚ್ಚಾಗಿ ಶಸ್ತ್ರಚಿಕಿತ್ಸೆಯ ಅಗತ್ಯವಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ ಮಕ್ಕಳನ್ನು ಪರಿಶೀಲಿಸಿ ತಜ್ಞರಿಂದ ಚಿಕಿತ್ಸೆಯ ಬಗ್ಗೆ ಸಮಾಲೋಚಿಸುವುದು ಅತ್ಯಂತ ಮುಖ್ಯವಾಗಿದೆ.
ಎ.ಜೆ. ಆಸ್ಪತ್ರೆಯಲ್ಲಿ ಬಹು ಸಂಖ್ಯೆಯ ಆ್ಯಕ್ಸಿಡೆಂಟ್‌ಪಾಲಿಟ್ರಾಮಾ ರೋಗಿಗಳು ದಾಖಲಾಗುತ್ತಿದ್ದು, ಅನೇಕ ಬ್ರೆಕಿಯಲ್ ಪ್ಲೆಕ್ಸಸ್ ಗಾಯಗಳಿಗೆ ಚಿಕಿತ್ಸೆ ನೀಡಲಾಗುತ್ತಿದೆ. ಎ.ಜೆ. ಆಸ್ಪತ್ರೆಯಲ್ಲಿ ಪ್ಲಾಸ್ಟಿಕ್ ಮತ್ತು ಮೈಕ್ರೋಸರ್ಜರಿ ವಿಭಾಗವು ಈ ರೀತಿಯ 150ಕ್ಕಿಂತಲೂ ಹೆಚ್ಚಿನ ರೋಗಿಗಳಿಗೆ ಈಗಾಗಲೇ ಚಿಕಿತ್ಸೆ ನೀಡಿದೆ ಎಂದು ಎ.ಜೆ.ಆಸ್ಪತ್ರೆ ಮತ್ತು ಸಂಶೋಧನಾ ಕೇಂದ್ರದ ವೈದ್ಯಕೀಯ ನಿರ್ದೇಶಕ ಡಾ. ದಿನೇಶ್‌ಕದಂ ಪ್ರಕಟನೆಯಲ್ಲಿ ತಿಳಿಸಿದ್ದಾರೆ.







