ಯುವಕನಿಗೆ ಚೂರಿ ಇರಿತ ಪ್ರಕರಣ: ಹಿಂಜಾವೇ ಮುಖಂಡ ರತ್ನಾಕರ್ ಶೆಟ್ಟಿ ಬಂಧನ

ಬಂಟ್ವಾಳ, ಜು. 27: ಕಲ್ಲಡ್ಕದಲ್ಲಿ ಇಬ್ರಾಹೀಂ ಖಲೀಲ್ ಎಂಬ ಯುವಕನಿಗೆ ಚೂರಿ ಇರಿದ ಪ್ರಕರಣದ ಆರೋಪಿ, ಹಿಂದೂ ಜಾಗರಣ ವೇದಿಕೆಯ ಮುಖಂಡ ರತ್ನಾಕರ್ ಶೆಟ್ಟಿಯನ್ನು ಬಂಟ್ವಾಳ ಪೊಲೀಸರು ಬಂಧಿಸಿದ್ದಾರೆ.
ಜೂನ್ 13ರಂದು ಇಬ್ರಾಹೀಂ ಖಲೀಲ್‍ಗೆ ರತ್ನಾಕರ್ ಶೆಟ್ಟಿ ಹಾಗೂ ನಾಲ್ವರ ತಂಡ ಚೂರಿಯಿಂದ ಇರಿದು ಪರಾರಿಯಾಗಿತ್ತು. ಇಬ್ರಾಹೀಂ ಖಲೀಲ್ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಠಾಣೆಯಲ್ಲಿ ರತ್ನಾಕರ್ ಶೆಟ್ಟಿ ಹಾಗೂ ನಾಲ್ವರ ವಿರುದ್ಧ ಕೊಲೆಯತ್ನ ಪ್ರಕರಣ ದಾಖಲಾಗಿತ್ತು.
ಘಟನೆಯ ಬಳಿಕ ಇಬ್ರಾಹೀಂ ಖಲೀಲ್ ತನಗೆ ಚೂರಿಯಿಂದ ಇರಿದಿದ್ದಾನೆ ಎಂದು ಆರೋಪಿಸಿ ರತ್ನಾಕರ್ ಶೆಟ್ಟಿ ಪುತ್ತೂರು ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ. ಸುಮಾರು ಒಂದೂವರೆ ತಿಂಗಳ ಬಳಿಕ ಗುರುವಾರ ಆಸ್ಪತ್ರೆಯಿಂದ ಪೊಲೀಸರು ಬಂಧಿಸಿದ್ದು, ನ್ಯಾಯಾಲಯಕ್ಕೆ ಹಾಜರು ಪಡಿಸಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.
ಪರಾರಿ: ಘಟನೆ ನಡೆದ ಎರಡು ದಿನಗಳ ನಂತರ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ರತ್ನಾಕರ್ ಶೆಟ್ಟಿ ಪೊಲೀಸ್ ಕಾವಲಿನ ನಡುವೆಯೂ ಆಸ್ಪತ್ರೆಯಿಂದ ರಾತ್ರೋ ರಾತ್ರಿ ಪರಾರಿಯಾಗಿದ್ದ. ಕರ್ತವ್ಯ ಲೋಪದ ಹಿನ್ನೆಲೆಯಲ್ಲಿ ಪುತ್ತೂರು ಪೊಲೀಸ್ ಠಾಣೆಯ ಎಸ್ಸೈ ಮತ್ತು ಇಬ್ಬರು ಪೊಲೀಸರ ತಲೆದಂಡವಾಗುತ್ತಿದ್ದಂತೆ ಮತ್ತೆ ಆಸ್ಪತ್ರೆಯಲ್ಲಿ ಪ್ರತ್ಯಕ್ಷವಾಗಿದ್ದ.





