ಲಾಲು ಪ್ರಸಾದ್,ಕುಟುಂಬದ ವಿರುದ್ಧ ಹಣಚಲುವೆ ಪ್ರಕರಣ ದಾಖಲು
ಅಧಿಕಾರ ಕೈತಪ್ಪಿದ ಬೆನ್ನಲ್ಲೇ ಹೊಸ ಸಂಕಷ್ಟ

ಹೊಸದಿಲ್ಲಿ,ಜು.27: ಯುಪಿಎ ಅಧಿಕಾರಾವಧಿಯಲ್ಲಿನ ರೈಲ್ವೆ ಹೋಟೆಲ್‌ಗಳ ಮಂಜೂರಾತಿಯಲ್ಲಿ ಭ್ರಷ್ಟಾಚಾರದ ಆರೋಪಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾ ಲಯ(ಇಡಿ) ಆರ್‌ಜೆಡಿ ಅಧ್ಯಕ್ಷ ಲಾಲು ಪ್ರಸಾದ್ ಯಾದವ ಮತ್ತು ಅವರ ಕುಟುಂಬ ಸದಸ್ಯರ ವಿರುದ್ಧ ಹಣ ಚಲುವೆ ಪ್ರಕರಣವನ್ನು ದಾಖಲಿಸಿಕೊಂಡಿದೆ. ತನ್ಮೂಲಕ ಬಿಹಾರದಲ್ಲಿ ಅಧಿಕಾರ ಕೈಜಾರಿದ ಬೆನ್ನಲ್ಲೇ ಲಾಲು ಕುಟುಂಬಕ್ಕೆ ಹೊಸ ಸಂಕಷ್ಟ ಎದುರಾಗಿದೆ.
ಹಣ ಚಲುವೆ ತಡೆ ಕಾಯ್ದೆ(ಪಿಎಂಎಲ್‌ಎ)ಯಡಿ ಪ್ರಕರಣವನ್ನು ದಾಖಲಿಸಿಕೊಳ್ಳ ಲಾಗಿದೆ. ಈ ಸಂಬಂಧ ಸಿಬಿಐ ಎಫ್‌ಐಆರ್‌ನ ಸಂಜ್ಞೇಯತೆಯನ್ನು ಪರಿಗಣಿಸಿ ಇಡಿ ಈ ಕ್ರಮವನ್ನು ಕೈಗೊಂಡಿದೆ ಎಂದು ಅಧಿಕಾರಿಗಳು ಗುರುವಾರ ಇಲ್ಲಿ ತಿಳಿಸಿದರು.
ಈ ತಿಂಗಳ ಪೂರ್ವಾರ್ಧದಲ್ಲಿ ಲಾಲು ಮತ್ತು ಇತರರ ವಿರುದ್ಧ ಕ್ರಿಮಿನಲ್ ಎಫ್‌ಐಆರ್ ದಾಖಲಿಸಿಕೊಂಡಿದ್ದ ಸಿಬಿಐ ಅವರಿಗೆ ಸೇರಿದ್ದ ಹಲವಾರು ಸ್ಥಳಗಳಲ್ಲಿ ದಾಳಿಗಳನ್ನು ನಡೆಸಿತ್ತು.
ಆರೋಪಿಗಳು ಮುಖವಾಡ ಕಂಪನಿಗಳ ಮೂಲಕ ಪಡೆದುಕೊಂಡಿರುವ ಭ್ರಷ್ಟ ಲಾಭಗಳ ಬಗ್ಗೆ ಇಡಿ ತನಿಖೆ ನಡೆಸಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಲಾಲು ಪತ್ನಿ ಹಾಗೂ ಬಿಹಾರದ ಮಾಜಿ ಮುಖ್ಯಮಂತ್ರಿ ರಾಬ್ರಿದೇವಿ, ಪುತ್ರ ತೇಜಸ್ವಿ ಯಾದವ ಮತ್ತು ಇತರರ ವಿರುದ್ಧ ಪೊಲೀಸ್ ಎಫ್‌ಐಆರ್‌ಗೆ ಸಮನಾದ ಜಾರಿ ಪ್ರಕರಣ ವರ್ತಮಾನ ವರದಿ(ಇಸಿಐಆರ್)ಯಲ್ಲಿನ ಆರೋಪಗಳಡಿ ಇಡಿ ತನಿಖೆ ನಡೆಸಲಿದೆ.
ಪಿಎಂಎಲ್‌ಎ ಅಡಿ ಭ್ರಷ್ಟ ವಿಧಾನಗಳ ಮೂಲಕ ಸಂಪಾದಿಸಿದ ಆಸ್ತಿಗಳನ್ನು ವಶಪಡಿಸಿಕೊಳ್ಳುವ ಮತ್ತು ಮುಟ್ಟುಗೋಲು ಹಾಕಿಕೊಳ್ಳುವ ಅಧಿಕಾರವನ್ನು ಇಡಿ ಹೊಂದಿದೆ ಮತ್ತು ಅದು ಪ್ರಕರಣದಲ್ಲಿ ಪ್ರಗತಿ ಸಾಧಿಸಿದ ಬಳಿಕ ಈ ಕ್ರಮವನ್ನು ಕೈಗೊಳ್ಳುವ ನಿರೀಕ್ಷೆಯಿದೆ.







