ಮಾನವ ಬಂಧುತ್ವ ವೇದಿಕೆಯಿಂದ ಆಸ್ಪತ್ರೆಯಲ್ಲಿ ಹಾಲು ವಿತರಣೆ

ಚಿಕ್ಕಮಗಳೂರು, ಜು.27: ರಾಜ್ಯದ ಎಲ್ಲಾ 30 ಜಿಲ್ಲೆಗಳಲ್ಲಿ ಮಾನವ ಬಂಧುತ್ವ ವೇದಿಕೆ ಕಾರ್ಯಕರ್ತರು ಬಸವ ಪಂಚಮಿ ಆಚರಣೆಯ ಮೂಲಕ ವೈಚಾರಿಕ ಸಂದೇಶವನ್ನು ನೀಡುತ್ತಿರುವುದಾಗಿ ಮಾನವ ಬಂಧುತ್ವ ವೇದಿಕೆಯ ಪ್ರಧಾನ ಕಾರ್ಯದರ್ಶಿ ಮೋಹನ್ ಆರದವಳ್ಳಿ ತಿಳಿಸಿದರು.
ಅವರು ಗುರುವಾರ ಬಸವ ಪಂಚಮಿ ಅಂಗವಾಗಿ ಜಿಲ್ಲಾ ಮಕ್ಕಳ ಆಸ್ಪತ್ರೆಯಲ್ಲಿ ವಿವಿಧ ರೋಗಿಗಳಿಗೆ ಬಿಸಿ ಹಾಲು, ಹಣ್ಣು-ಹಂಪಲು ವಿತರಿಸಿ ಮಾತನಾಡಿದರು.
ರಾಜ್ಯದಾದ್ಯಂತ ಸುಮಾರು 1000 ಕ್ಕಿಂತಲೂ ಅಧಿಕ ಕೇಂದ್ರಗಳಲ್ಲಿ ಈ ಕಾರ್ಯಕ್ರಮ ನಡೆಯುತ್ತಿದೆ. ಹಲವು ಅಧ್ಯಯನಗಳ ಪ್ರಕಾರ ರಾಜ್ಯದ ಸಂಭವಿಸುವ ಶಿಶು ಮರಣಗಳಲ್ಲಿ ಅಪೌಷ್ಟಿಕತೆ ಪ್ರಮುಖ ಕಾರಣವಾಗಿದೆ. ರಾಜ್ಯದಲ್ಲಿ ಒಂದು ವರ್ಷದೊಳಗಿನ ಮಕ್ಕಳ ಮರಣ ಶೆ.43ರಷ್ಟಿದೆ ಎಂದು ವಿವರ ನೀಡಿದರು.
ಇಂದು ಎಲ್ಲೆಡೆಯೂ ಧಾರ್ಮಿಕ ಆಚರಣೆಯ ಹೆಸರಲ್ಲಿ, ಜನರ ಭಾವನೆಗಳ ಹೆಸರಲ್ಲಿ ಹುತ್ತಕ್ಕೆ ಹಾಲು ಹಾಕುವ ಕಾರ್ಯ ಎಗ್ಗಿಲ್ಲದೆ ನಡೆಯುತ್ತಿದೆ. ಅಂತದ್ದನ್ನು ಕೆಲವರು ಪ್ರೋತ್ಸಾಹಿಸುವುದು ನಡೆಯುತ್ತಿದೆ. ಹುತ್ತಕ್ಕೆ ಎರೆಯುವ ಹಾಲನ್ನು ಅಪೌಷ್ಟಿಕಾಂಶದಿಂದ ಬಳಲುತ್ತಿರುವ ಮಕ್ಕಳಿಗೆ ನೀಡಿದರೆ ಆರೋಗ್ಯ ಸರಿ ಮಾಡಬಹುದು. ಆದ್ದರಿಂದ ಹಾಲನ್ನು ವಿನಾ ಕಾರಣ ನಾಶಪಡಿಸುವಂತಹ ಜೀವ ವಿರೊಧಿ ಆಚರಣೆಗಳಿಗೆ ಕಡಿವಾಣ ಹಾಕುವುದು ಅಗತ್ಯ ಎಂದು ಹೇಳಿದರು.
ಜನದನಿ ಸಂಘಟನೆಯ ಸಂಚಾಲಕ ಬಿ.ಅಮ್ಜದ್ ಮಾತನಾಡಿ, ಈ ನಾಡಿನ ಪ್ರಜ್ನಾವಂತರು ಕಾರ್ಯಕ್ರಮದ ಉದ್ದೇಶವನ್ನು ಅರ್ಥ ಮಾಡಿಕೊಳ್ಳಬೇಕು. ದೇಶದ ಜನಸಂಖ್ಯೆಯಲ್ಲಿ ಶೇ.50ರಷ್ಟು ಜನರು ಇಂದು ಕೂಡ ಅಪೌಷ್ಟಿಕತೆಯಿಂದ ಬಳಲುತ್ತಿದ್ದಾರೆ. ಇದರಿಂದ ಅನೇಕರು ಆರೋಗ್ಯದ ಸಮಸ್ಯೆಗಳಿಗೆ ಬಲಿಯಾಗುತ್ತಿದ್ದಾರೆ. ಇಂತಹ ಪರಿಸ್ಥಿತಿ ಇರುವಾಗ ಉತ್ಕೃಷ್ಟ ಪೋಷಕಾಂಶಭರಿತ ಹಾಲು ಪೋಲು ಮಾಡುವುದು ಸರಿಯಲ್ಲ ಎಂದು ಸಾಮಾನ್ಯ ಜನರಿಗೆ ಮನವರಿಕೆ ಮಾಡಬೇಕಾಗಿದೆ ಎಂದು ನುಡಿದರು.
ಈ ಸಮಯದಲ್ಲಿ ಜಿಲ್ಲಾ ಸರ್ಜನ್ ಡಾ.ಡೊಡ್ಡಮಲ್ಲಪ್ಪ, ಡಾ.ನಾಗೇಂದ್ರ, ಕಬ್ಬಿಗೆರೆ ಮೋಹನ್, ನಲ್ಲೂರು ಪುಟ್ಟಸ್ವಾಮಿ ಮತ್ತಿತರರಿದ್ದರು.







