ನಾಪತ್ತೆಯಾಗಿದ್ದ ಆದಿರಾ ಕಣ್ಣೂರಿನಲ್ಲಿ ಪತ್ತೆ

ಕಾಸರಗೋಡು, ಜು.27: ನಿಗೂಢವಾಗಿ ನಾಪತ್ತೆಯಾಗಿದ್ದ ಉದುಮ ಕರಿಯಪ್ಪೋಡಿಯ ಸ್ನಾತಕೋತ್ತರ ವಿದ್ಯಾರ್ಥಿನಿ ಆದಿರಾ (23) 17 ದಿನಗಳ ಬಳಿಕ ಕಣ್ಣೂರಿನಲ್ಲಿ ಪತ್ತೆಯಾಗಿದ್ದಾಳೆ.
ಕಣ್ಣೂರು ಬಸ್ ನಿಲ್ದಾಣದ ಸಮೀಪ ಈಕೆಯನ್ನು ಪತ್ತೆಹಚ್ಚಲಾಗಿದ್ದು, ಬೇಕಲ ಪೊಲೀಸರು ಕಾಸರಗೋಡಿಗೆ ಕರೆ ತಂದು ಮಾಹಿತಿ ಕಲೆ ಹಾಕುತ್ತಿದ್ದಾರೆ. ಜು.28ರಂದು ಈಕೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸುವರು. ತನ್ನ ಇಚ್ಛೆಯಂತೆ ತಾನು ತೆರಳಿದ್ದು, ಯಾರ ಜೊತೆಗೂ ತೆರಳಲಿಲ್ಲ ಎಂದು ವಿಚಾರಣೆ ವೇಳೆ ಹೇಳಿರುವುದಾಗಿ ಪೊಲೀಸ್ ಮೂಲಗಳು ತಿಳಿಸಿವೆ.
ಜುಲೈ 10ರಿಂದ ಈಕೆ ನಿಗೂಢವಾಗಿ ನಾಪತ್ತೆಯಾಗಿದ್ದಳು. ಧಾರ್ಮಿಕ ಪಠಣಕ್ಕೆ ತೆರಳುವುದಾಗಿ ಹೇಳಿ ಹದಿನೈದು ಪುಟದ ಪತ್ರವೊಂದು ಬರೆದಿಟ್ಟು ಆದಿರಾ ತೆರಳಿದ್ದಳು. ಬೆಳಗ್ಗೆ ಆಸ್ಪತ್ರೆಗೆಂದು ಹೇಳಿ ಈಕೆ ಮನೆಯಿಂದ ತೆರಳಿದ್ದು ಬಳಿಕ ನಾಪತ್ತೆಯಾಗಿದ್ದಳು. ಮಗಳು ಮನೆಗೆ ಮರಳದೇ ಇದ್ದುದರಿಂದ ಪೋಷಕರು ಬೇಕಲ ಠಾಣಾ ಪೊಲೀಸರಿಗೆ ದೂರು ನೀಡಿದ್ದರು. ತನಿಖೆ ನಡೆಸಿದಾಗ ಮನೆಯಲ್ಲಿ ಆದಿರಾ ಬರೆದಿಟ್ಟಿದ್ದ ಪತ್ರ ಲಭಿಸಿತ್ತು.
ಆದಿರಾಳ ಪತ್ತೆಗೆ ಪೊಲೀಸರು ಲುಕ್ ಔಟ್ ನೋಟಿಸ್ ಬಿಡುಗಡೆಗೊಳಿಸಿದ್ದರು. ಸೈಬರ್ ಸೆಲ್ ನೆರವಿನಿಂದ ತನಿಖೆ ನಡೆಸಿದ್ದು, ಸುಳಿವು ಲಭಿಸಿರಲಿಲ್ಲ. ಮೊಬೈಲ್ ಸ್ವಿಚ್ ಆಫ್ ಆಗಿತ್ತು. ತನಿಖೆ ನಡೆಸುತ್ತಿರುವ ಮಧ್ಯೆ ಈಕೆಯ ಮೊಬೈಲ್ ಕರೆ ಕೊಚ್ಚಿ ಲೊಕೇಶನ್ ನಲ್ಲಿ ಪತ್ತೆಯಾಗಿತ್ತು . ಪೊಲೀಸರು ಕೊಚ್ಚಿ ಕೇಂದ್ರೀಕರಿಸಿ ತನಿಖೆ ನಡೆಸುತ್ತಿದ್ದರು. ಈ ನಡುವೆ ಗುರುವಾರ ಮಧ್ಯಾಹ್ನ ಕಣ್ಣೂರು ಬಸ್ ನಿಲ್ದಾಣದಲ್ಲಿ ಆದಿರಾ ಪತ್ತೆಯಾಗಿದ್ದು, ಮನೆಯವರು ಮತ್ತು ಪೊಲೀಸರು ನಿಟ್ಟುಸಿರು ಬಿಡುವಂತಾಗಿದೆ.







