ಕಾಂಗ್ರೆಸ್ ತೊರೆದು ಜೆಡಿಎಸ್‌ಗೆ ಸೇರ್ಪಡೆ

ಮಡಿಕೇರಿ ಜು.27 : ಮಡಿಕೆೇರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ.ಗಣೇಶ್, ನಗರಸಭಾ ಸದಸ್ಯರಾದ ಲೀಲಾ ಶೇಷಮ್ಮ ಅವರು ತಮ್ಮ ಬೆಂಬಲಿಗರೊಂದಿಗೆ ಕಾಂಗ್ರೆಸ್ ಪಕ್ಷವನ್ನು ತೊರೆದು ಜಾತ್ಯತೀತ ಜನತಾದಳ ಪಕ್ಷಕ್ಕೆ ಸೇರ್ಪಡೆಗೊಂಡರು.
ಬಿ.ಎ. ಜೀವಿಜಯ, ಮಾಜಿ ಸಂಸದ ಅಡಗೂರು ಹೆಚ್. ವಿಶ್ವಾನಾಥ್ ಸೇರಿದಂತೆ ಹಲವು ಗಣ್ಯರ ಸಮ್ಮುಖದಲ್ಲಿ ತೆನೆಹೊತ್ತ ಮಹಿಳೆೆಯ ಧ್ವಜವನ್ನು ಎತ್ತಿಹಿಡಿಯುವ ಮೂಲಕ ಪಕ್ಷಕ್ಕೆ ಸೇರ್ಪಡೆಗೊಂಡರು.
ಈ ಸಂದರ್ಭ ಮಗೋಡು ಗ್ರಾಮ ಪಂಚಾಯ್ತಿ ಸದಸ್ಯ ಮುಂಡೋಡಿ ನಾಣಯ್ಯ ಮತ್ತು ಬೆಂಬಲಿಗರು, ಜಿಪಂ ಮಾಜಿ ಸದಸ್ಯ ಭಾನುಮತಿ, ನಾಕೂರು ಶಿರಂಗಾಲ ಗ್ರಾಪಂನ ಬಿಜು ಮತ್ತು ಸಂಗಡಿಗರು, ಚೆಟ್ಟಳ್ಳಿಯ ಡೆನ್ನಿ ಬರೋಸ್ ಸಂಗಡಿಗರು, ಸುಂಟಿಕೊಪ್ಪದ ಕರೀಂ, ಕೊಡ್ಲಿಪೇಟೆ ವಿಭಾಗದ ನೂರಾರು ಮಂದಿಯನ್ನು ಜೆಡಿಎಸ್ ಪ್ರಮುಖರು ಪಕ್ಷದ ಶಾಲನ್ನು ಹೊದಿಸುವ ಮೂಲಕ ಪಕ್ಷಕ್ಕೆ ಬರಮಾಡಿಕೊಂಡರು.
ಈ ಸಂದರ್ಭ ಕೆ.ಎಂ. ಗಣೇಶ್ ಮಾತನಾಡಿ, ಕಳೆದ ಮೂರು ದಶಕಗಳಿಂದ ಕಾಂಗ್ರೆಸ್‌ನಲ್ಲಿ ಸೇವೆ ಸಲ್ಲಿಸಿದ್ದೇನೆ. ಪ್ರಸ್ತುತ ಆ ಪಕ್ಷದ ನಾಯಕರಿಗೆ ಕಾರ್ಯಕರ್ತರ ಅಗತ್ಯವಿಲ್ಲ ಮತ್ತು ಅವರ ಸಂಕಷ್ಟಗಳಿಗೆ ಸ್ಪಂದಿಸುವ ಮನಸ್ಥಿತಿಯೂ ಇಲ್ಲವೆಂದು ಬೇಸರ ವ್ಯಕ್ತಪಡಿಸಿ, ಮುಂದಿನ ಚುನಾವಣೆಯಲ್ಲಿ ಈ ಕ್ಷೇತ್ರದಿಂದ ಬಿ.ಎ. ಜೀವಿಜಯ ಅವರನ್ನು ಗೆಲ್ಲಿಸಲು ಶ್ರಮಿಸುವುದಾಗಿ ತಿಳಿಸಿ, ಮುಂದಿನ ಎರಡು ತಿಂಗಳಲ್ಲಿ ನಗರದಲ್ಲಿ ಜೆಡಿಎಸ್ ಸಮಾವೇಶ ನಡೆಸುವ ಮೂಲಕ ಪಕ್ಷಕ್ಕೆ ಮತ್ತಷ್ಟು ಮಂದಿಯನ್ನು ಸೇರ್ಪಡೆಗೊಳಿಸುವುದಾಗಿ ತಿಳಿಸಿದರು.







