ಮನೆಯಿಂದ ಹೊರದೂಡಲ್ಪಟ್ಟ ವೃದ್ಧ ತಾಯಿಗೆ ಮಕ್ಕಳಿಂದಲೇ ಜೀವಭಯ
ತಾಯಿ ಪರ ಜಿಲ್ಲಾಧಿಕಾರಿ ಆದೇಶ: ಪೊಲೀಸ್ ರಕ್ಷಣೆಗೆ ಮನವಿ

ಉಡುಪಿ, ಜು.27: ತನ್ನದೇ ಮಕ್ಕಳಿಂದ ದೈಹಿಕ ಹಿಂಸೆಗೆ ಒಳಗಾಗಿ ಮನೆಯಿಂದ ಹೊರದೂಡಲ್ಪಟ್ಟ ಕಡ್ತಲ ಗ್ರಾಮದ ವೃದ್ಧೆ ಸುಲೋಚನ ಪೈ(71) ಪರವಾಗಿ ಜಿಲ್ಲಾಧಿಕಾರಿಗಳು ಪಾಲಕರ ಪೋಷಣೆ, ಸಂರಕ್ಷಣೆ ಹಾಗೂ ಹಿರಿಯ ನಾಗರಿಕರ ರಕ್ಷಣೆ ಕಾಯಿದೆಯಡಿ ರಕ್ಷಣೆಗೆ ಆದೇಶ ನೀಡಿದ್ದರೂ, ಮಕ್ಕಳ ಜೀವ ಬೆದರಿಕೆಯಿಂದ ಸುಲೋಚನಾ ಪೈ ತನ್ನ ಮನೆಯಲ್ಲಿ ವಾಸ ಮಾಡದ ಪರಿಸ್ಥಿತಿ ನಿರ್ಮಾಣವಾಗಿದೆ.
ಇದೀಗ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ರಕ್ಷಣೆಯಲ್ಲಿ ರುವ ಸುಲೋಚನಾ ಪೈ ಸಮ್ಮುಖದಲ್ಲಿ ಇಂದು ಕುಂಜಿಬೆಟ್ಟು ಬಾಳಿಗಾ ಕಾನೂನು ಕಾಲೇಜಿನಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಪ್ರತಿಷ್ಠಾನದ ಅಧ್ಯಕ್ಷ ಡಾ. ರವೀಂದ್ರನಾಥ ಶಾನುಭಾಗ್ ಈ ವಿಚಾರಗಳನ್ನು ಮಾಧ್ಯಮದ ಮುಂದೆ ಹೇಳಿಕೊಂಡಿದ್ದಾರೆ.
ಸರಕಾರ ನೀಡಿದ 5 ಸೆಂಟ್ಸ್ ನಿವೇಶನದಲ್ಲಿ ತಾನು ದುಡಿದು ಗಳಿಸಿದ ಹಣದಿಂದಲೇ ನಿರ್ಮಿಸಿದ ಸಣ್ಣ ಮನೆಯಲ್ಲಿ ಸುಲೋಚನ ಪೈ ತನ್ನ ಇಬ್ಬರು ಮಕ್ಕಳಾದ ರಮಾಕಾಂತ ಪೈ(48) ಹಾಗೂ ಭರತ್ ಪೈ(41) ಅವರೊಂದಿಗೆ ವಾಸವಾಗಿದ್ದರು. 2012ರಲ್ಲಿ ಗಂಡ ಜನಾರ್ಧನ ಪೈ ನಿಧನರಾಗಿದ್ದರು. ಲಾರಿ ಚಾಲಕರಾಗಿದ್ದ ಮಕ್ಕಳಿಬ್ಬರೂ ಮದ್ಯವ್ಯಸನಿಗಳಾಗಿದ್ದರು. ತಾಯಿಯ ಪೋಷಣೆ ಮಾಡಬೇಕಾದ ಮಕ್ಕಳು ಹಣಕ್ಕಾಗಿ ತಾಯಿಯನ್ನೇ ಪೀಡಿಸತೊಡಗಿದರು. ಕುಡಿಯಲು ಹಣ ನೀಡದೆ ಇದ್ದಾಗ ತಾಯಿಯನ್ನೇ ಮನೆಯಿಂದ ಹೊರ ಹಾಕಿದರು ಎಂದು ಅವರು ದೂರಿದ್ದಾರೆ.
2016ರಲ್ಲಿ ಸುಲೋಚನಾ ಪೈ ನೀಡಿದ ದೂರಿನ ಹಿನ್ನೆಲೆಯಲ್ಲಿ ಅಜೆಕಾರು ಪೊಲೀಸರು ಈ ಬಗ್ಗೆ ತನಿಖೆ ನಡೆಸಿ ಮನೆಯನ್ನು ತಾಯಿಗೆ ಬಿಟ್ಟುಕೊಡುವಂತೆ ರಮಾಕಾಂತ ಅವರಲ್ಲಿ ಬರೆಸಿಕೊಂಡರು. ಆದರೆ ಆತ ಮನೆಯನ್ನು ಬಿಟ್ಟು ಕೊಡಲೇ ಇಲ್ಲ. 2016ರ ಮಾರ್ಚ್ ತಿಂಗಳಲ್ಲಿ ಪ್ರತಿಷ್ಠಾನವನ್ನು ಸಂಪರ್ಕಿಸಿದ ಅವರು, ಕುಂದಾಪುರದ ಹಿರಿಯ ನಾಗರಿಕರ ನ್ಯಾಯ ಮಂಡಳಿಗೆ ದೂರು ನೀಡಿದರು.
8 ತಿಂಗಳ ಕಾಲ ವಿಚಾರಣೆ ನಡೆಸಿ ತೀರ್ಪು ನೀಡಿದ ಮಂಡಳಿಯು ಪ್ರತಿ ತಿಂಗಳು ಮಗ ರಮಾಕಾಂತ ತಾಯಿಗೆ 6000 ರೂ. ಪೋಷಣೆ ಭತ್ತೆ ನೀಡಬೇಕು ಎಂದು ಆದೇಶಿಸಿತು. ಆದರೆ ಮಗ ತಾಯಿಗೆ ಹಣವೂ ನೀಡಲಿಲ್ಲ. ಇದರ ವಿರುದ್ಧ ಸುಲೋಚನ ಪೈ ಜಿಲ್ಲಾಧಿಕಾರಿಗೆ ಮೇಲ್ಮನವಿ ಸಲ್ಲಿಸಿದರು. 2017ರ ಎ.10ರಂದು ಜಿಲ್ಲಾಧಿಕಾರಿಗಳು ತೀರ್ಪು ನೀಡಿ, ಮನೆಯ ಸ್ವಾಧೀನತೆಯನ್ನು ಸುಲೋಚನಾ ಪೈಗೆ ನೀಡುವಂತೆ ಕಾರ್ಕಳ ತಹಶೀಲ್ದಾರ್‌ಗೆ ಆದೇಶಿಸಿದರು. ಕಳೆದ 4 ತಿಂಗಳಿಂದ ಅತೀವ ಅನಾರೋಗ್ಯಕ್ಕೊಳಗಾಗಿ ಹಾಸಿಗೆ ಹಿಡಿದಿದ್ದ ಸುಲೋಚನಕ್ಕ ಇದೀಗ ಪ್ರತಿಷ್ಠಾನದ ಆಶ್ರಯದಲ್ಲಿ ಚೇತರಿಸಿಕೊಂಡಿದ್ದಾರೆ ಎಂದರು.
ಇದೀಗ ಸುಲೋಚನಾ ಪೈ ತನ್ನ ಮನೆಗೆ ಹೋಗಲು ತವಕಿಸುತ್ತಿದ್ದಾರೆ. ಆದರೆ ಮನೆ ಬಿಟ್ಟುಕೊಡಲು ತಯಾರಿಲ್ಲದ ರಮಾಕಾಂತ್, ತಾಯಿಗೆ ಬೆದರಿಕೆ ಹಾಕುತ್ತಿದ್ದಾನೆ. ಆದುದರಿಂದ ಕಾರ್ಕಳ ತಹಶೀಲ್ದಾರರು ಆಕೆಗೆ ಮನೆಯ ಸ್ವಾಧೀನತೆ ಯೊಂದಿಗೆ ಜೀವ ರಕ್ಷಣೆಯನ್ನೂ ನೀಡಬೇಕಾಗಿದೆ. ಇಲ್ಲದಿದ್ದರೆ ಆ ಮನೆಯನ್ನು ಮಾರಾಟ ಮಾಡಿ ಅವರು ವೃದ್ಧಾಶ್ರಮದಲ್ಲಿ ವಾಸ ಮಾಲಿದ್ದಾರೆ ಎಂದು ಅವರು ತಿಳಿಸಿದರು.
ಸುದ್ದಿಗೋಷ್ಠಿಯಲ್ಲಿ ನ್ಯಾಯವಾದಿಗಳಾದ ವಿಜಯಲಕ್ಷ್ಮಿ ಹಾಗೂ ನಿವೇದಿತಾ ಬಾಳಿಗಾ ಉಪಸ್ಥಿತರಿದ್ದರು.
ನೇಮಕ
ಹಿರಿಯ ನಾಗರಿಕರ ರಕ್ಷಣೆ ಕಾಯಿದೆಯಡಿ ಉಡುಪಿಯ ಮಾನವ ಹಕ್ಕುಗಳ ರಕ್ಷಣಾ ಪ್ರತಿಷ್ಠಾನದ ಅಧ್ಯಕ್ಷ ಡಾ.ರವೀಂದ್ರನಾಥ ಶಾನುಭಾಗ್ ಅವರನ್ನು ಉಡುಪಿ ಹಾಗೂ ಚಿಕ್ಕಮಗಳೂರು ಜಿಲ್ಲೆಯ ಸಮಲೋಚನಾ ಅಧಿಕಾರಿಯಾಗಿ ನೇಮಕ ಮಾಡಿ ಉಡುಪಿ ಜಿಲ್ಲಾಧಿಕಾರಿಗಳು ಆದೇಶಿಸಿದ್ದಾರೆ.







