ಮಂಗಳೂರು : ದ್ವಿಚಕ್ರ ವಾಹನಕ್ಕೆ ಕಂಟೈನರ್ ಢಿಕ್ಕಿ ; ವಿದ್ಯಾರ್ಥಿನಿ ಮೃತ್ಯು

ಮಂಗಳೂರು, ಜು. 27: ನಂತೂರು ಜಂಕ್ಷನ್‌ನಲ್ಲಿ ಗುರುವಾರ ಸಂಜೆ ದ್ವಿಚಕ್ರ ವಾಹನಕ್ಕೆ ಕಂಟೈನರ್ ಲಾರಿ ಢಿಕ್ಕಿ ಹೊಡೆದು ಸಂಭವಿಸಿದ ಅಪಘಾತದಲ್ಲಿ ನಗರದ ಪ.ಪೂ.ಕಾಲೇಜುವೊಂದರ ದ್ವಿತೀಯ ವರ್ಷದ ವಿದ್ಯಾರ್ಥಿನಿ ಬಿಂದು (18) ಅವರು ಸಾವನ್ನಪ್ಪಿದ್ದಾರೆ. ಘಟನೆಯಲ್ಲಿ ಆಕೆಯ ತಂದೆ ಕೊಂಚಾಡಿ ನಿವಾಸಿ ಮಹೇಶ್ವರಪ್ಪ ಸಣ್ಣ ಪುಟ್ಟ ಗಾಯಗಳೊಂದಿಗೆ ಅಪಾಯದಿಂದ ಪಾರಾಗಿದ್ದಾರೆ. ಬಿಂದು ಅಸೌಖ್ಯದಿಂದ ಬಳಲುತ್ತಿದ್ದ ಹಿನ್ನೆಲೆಯಲ್ಲಿ ವೈದ್ಯರನ್ನು ಕಾಣಬೇಕೆಂದು ಕಾಲೇಜಿನಿಂದ ಅನುಮತಿ ಪಡೆದು ಸಂಜೆ 5 ಗಂಟೆ ವೇಳೆಗೆ ತಂದೆಯ ಜತೆ ದ್ವಿಚಕ್ರ ವಾಹನದಲ್ಲಿ ನಗರದ ಫಾದರ್ ಮುಲ್ಲರ್ ಆಸ್ಪತ್ರೆಗೆ ಹೊರಟಿದ್ದರು. ಮಹೇಶ್ವರಪ್ಪ ಅವರು ದ್ವಿಚಕ್ರ ವಾಹನ ಚಲಾಯಿಸುತ್ತಿದ್ದು, ಕದ್ರಿ ಬಳಿ ಬರುತ್ತಿದ್ದಾಗ ಕಂಟೈನರ್ ಲಾರಿ ಢಿಕ್ಕಿ ಹೊಡೆದಿದೆ. ಪರಿಣಾಮವಾಗಿ ದ್ವಿಚಕ್ರ ವಾಹನ ಮಗುಚಿ ಬಿದ್ದು, ತಂದೆ ಒಂದು ಬದಿಗೆ ಹಾಗೂ ಪುತ್ರಿ ಇನ್ನೊಂದು ಕಡೆ ಎಸೆಯಲ್ಪಟ್ಟಿದ್ದರು. ರಸ್ತೆಗೆ ಬಿದ್ದ ಬಿಂದು ಅವರ ಸೊಂಟದ ಮೇಲೆ ಕಂಟೈನರ್ ಲಾರಿಯ ಚಕ್ರ ಚಲಿಸಿದಾಗ ಅವರು ತೀವ್ರ ಗಾಯಗೊಂಡರು. ಕೂಡಲೇ ಆಸ್ಪತ್ರೆಗೆ ದಾಖಲಿಸಲಾಗಿದ್ದರೂ ಚಿಕಿತ್ಸೆ ಫಲಕಾರಿಯಾಗದೆ ಬಿಂದು ಅವರು ಸಂಜೆ 7 ಗಂಟೆ ವೇಳೆಗೆ ಸಾವನ್ನಪ್ಪಿದರು.
ಮಹೇಶ್ವರಪ್ಪ ಅವರು ಮೂಲತಃ ಚಿತ್ರದುರ್ಗ ಜಿಲ್ಲೆಯವರಾಗಿದ್ದು, ಮಂಗಳೂರಿನಲ್ಲಿ ಸಹಕಾರ ಇಲಾಖೆಯಲ್ಲಿ ಆಡಿಟರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಬಿಂದು ಅವರು ಮಹೇಶ್ವರಪ್ಪ ಅವರ ಏಕೈಕ ಪುತ್ರಿ ಆಗಿದ್ದರು.
ಈ ಬಗ್ಗೆ ಟ್ರಾಫಿಕ್ ಪೂರ್ವ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.





