ಮದ್ಯದ ಮತ್ತಿನಲ್ಲಿ ಪೊಲೀಸ್ಗೇ ಮುತ್ತು ಕೊಟ್ಟಳು!
ಕೊಲ್ಕತ್ತಾ, ಜು.28: ಸಂಚಾರಿ ಪೊಲೀಸ್ ಕನಸಿನಲ್ಲೂ ನಿರೀಕ್ಷಿಸದ ಕ್ಷಣ ಅದು. ಪಾನಮತ್ತಳಾಗಿ ಎರ್ರಾಬಿರ್ರಿ ವಾಹನ ಚಾಲನೆ ಮಾಡುತ್ತಿದ್ದ ಮಹಿಳೆಯೊಬ್ಬರನ್ನು ಸಂಚಾರಿ ಪೊಲೀಸ್ ತಡೆದ. ತಕ್ಷಣ ಮಹಿಳೆ ಪೊಲೀಸ್ನನ್ನೇ ಬಿಗಿದಪ್ಪಿಕೊಂಡು ಚುಂಬಿಸಿದ ಪ್ರಕರಣ ನಡೆದಿದೆ.
35ರ ಆಸುಪಾಸಿನ ಮಹಿಳೆ ಮಧ್ಯರಾತ್ರಿ ವೇಳೆಗೆ ಮೋಜು ಪಾರ್ಟಿ ಮುಗಿಸಿಕೊಂಡು ಕಾರಿನಲ್ಲಿ ವಾಪಸ್ಸಾಗುತ್ತಿದ್ದಳು. ಕಾರು ಚಲಾಯಿಸುತ್ತಿದ್ದ ಮಹಿಳೆ ಸಮತೋಲನ ಕಳೆದುಕೊಂಡು, ಎರ್ರಾಬಿರ್ರಿ ಚಾಲನೆ ಮಾಡುತ್ತಿದ್ದಳು. ಸಾಲ್ಟ್ಲೇಕ್ ಬಳಿಯ ಮೆಟ್ರೋಪಾಲಿಟನ್ ಬೈಪಾಸ್ನಲ್ಲಿ ರಸ್ತೆ ವಿಭಜಕಕ್ಕೆ ಕಾರು ಢಿಕ್ಕಿ ಹೊಡೆಯಿತು. ಮತ್ತೊಬ್ಬ ಕಾರು ಚಾಲಕ ಆಕೆಯ ನೆರವಿಗೆ ಮುಂದಾದಾಗ ಆತನ ಮೇಲೆ ಹಲ್ಲೆ ನಡೆಸಿದಳು.
ಆಗ ಪೊಲೀಸ್ ಪೇದೆ ಕಾರಿನಿಂದ ಆ ಮಹಿಳೆ ಹಾಗೂ ಇಬ್ಬರು ಸ್ನೇಹಿತರನ್ನು ಹೊರಕ್ಕೆ ಕರೆತರಲು ಮುಂದಾದ. ಕಾರಿನಲ್ಲಿದ್ದ ಮೂವರೂ ಮದ್ಯ ಸೇವಿಸಿದ್ದರು. ವಾಹನ ಚಲಾಯಿಸುತ್ತಿದ್ದ ಮಹಿಳೆಯನ್ನು ಕಾರಿನಿಂದ ಹೊರಕ್ಕೆ ಎಳೆಯುತ್ತಿದ್ದಂತೆ, ಪೊಲೀಸ್ ಪೇದೆಯನ್ನು ಬರಸೆಳೆದುಕೊಂಡ ಆಕೆ, ಬಿಗಿಯಾಗಿ ಆಲಿಂಗನ ಮಾಡಿಕೊಂಡು, ಮುತ್ತಿನ ಮಳೆಗೆರೆದಳು ಎಂದು ಪ್ರತ್ಯಕ್ಷದರ್ಶಿ ಸಹೋದ್ಯೋಗಿ ಪೊಲೀಸ್ ಹೇಳಿಕೆ ನೀಡಿದ್ದಾರೆ.
ಸ್ಥಳದಲ್ಲಿದ್ದ ಮತ್ತೊಬ್ಬ ಮಹಿಳೆಯ ನೆರವಿನಿಂದ ಮತ್ತೊಬ್ಬ ಪೊಲೀಸ್, ತನ್ನ ಸಹೋದ್ಯೋಗಿಯನ್ನು ಅಪ್ಪುಗೆಯ ಬಂಧನದಿಂದ ಬಿಡಿಸಿಕೊಳ್ಳಲು ಸಾಧ್ಯವಾಯಿತು. ಬಳಿಕ ಕಾರಿನಲ್ಲಿದ್ದ ಮೂವರನ್ನೂ ಬಿಧಾನ್ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲಾಯಿತು. ಮೂವರ ವಿರುದ್ಧವೂ ಮದ್ಯಪಾನ ಮಾಡಿ ವಾಹನ ಚಾಲನೆ ಮತ್ತು ದುರ್ನಡತೆ ಪ್ರಕರಣ ದಾಖಲಿಸಲಾಗಿದೆ.