ಮುಂಬೈನಲ್ಲೀಗ ಗುಜರಾತಿ ನಾಮಫಲಕಗಳ ಮೇಲೆ ಎಂಎನ್‌ಎಸ್ ಕೆಂಗಣ್ಣು

ಮುಂಬೈ,ಜು.28: ರಾಜ್ ಠಾಕ್ರೆಯವರ ಮಹಾರಾಷ್ಟ್ರ ನವನಿರ್ಮಾಣ ಸೇನಾ (ಎಂಎನ್‌ಎಸ್) ಮತ್ತೊಮ್ಮೆ ಆಕ್ರಮಣಕಾರಿ ಧೋರಣೆಯನ್ನು ತಳೆದಿದ್ದು, ಗುಜರಾತಿ ನಾಮಫಲಕಗಳನ್ನು ಹೊಂದಿರುವ ಅಂಗಡಿಗಳನ್ನು ತನ್ನ ಹೊಸ ಗುರಿಯನ್ನಾಗಿಸಿಕೊಂಡಿದೆ.
ಶುಕ್ರವಾರ ಗುಜರಾತಿ ನಾಮಫಲಕಗಳನ್ನು ಹೊಂದಿರುವ ಪ್ರಭಾದೇವಿಯಲ್ಲಿನ ಎರಡು ಅಂಗಡಿಗಳ ಮುಂದೆ ಎಂಎನ್‌ಎಸ್ ಕಾರ್ಯಕರ್ತರು ಪ್ರತಿಭಟನೆಯನ್ನು ನಡೆಸಿದರು. ಒಂದು ಅಂಗಡಿಯ ಮಾಲಿಕ ತಾನಾಗಿಯೇ ನಾಮಫಲಕವನ್ನು ತೆಗೆದರೆ, ಇನ್ನೊಂದು ಅಂಗಡಿಯ ನಾಮಫಲಕವನ್ನು ಕಾರ್ಯಕರ್ತರೇ ಕಿತ್ತೆಸೆದರು.
ಪ್ರತಿಭಟನೆಯು ಮರಾಠಿಯನ್ನು ಕಡೆಗಣಿಸಿ ಗುಜರಾತಿ ನಾಮಫಲಕಗಳನ್ನು ಹಾಕುವ ಹೊಸ ಪ್ರವೃತ್ತಿಯ ವಿರುದ್ಧವಾಗಿದೆ ಎಂದು ಎಂಎನ್‌ಎಸ್ ನಾಯಕ ಸಂತೋಷ ಧುರಿ ಹೇಳಿದರೆ, ಇದೊಂದು ತೊಂದರೆಗಳನ್ನು ಸೃಷ್ಟಿಸುವ ತಂತ್ರ ಎಂದು ರಾಜಕೀಯ ವಿಶ್ಲೇಷಕರು ಅಭಿಪ್ರಾಯ ವ್ತಕ್ತಪಡಿಸಿದ್ದಾರೆ.
ಠಾಕ್ರೆ ಇಂತಹ ಕೆಲಸಗಳಿಗೆ ಕುಖ್ಯಾತರಾಗಿದ್ದಾರೆ. ಹಿಂದಿನದನ್ನು ತಾನು ಮರುಕಳಿಸ ಬಲ್ಲೆ ಎಂಬ ಭ್ರಮೆಯಲ್ಲಿ ಅವರಿದ್ದಾರೆ. ಆದರೆ ಕಾಲವು ಬದಲಾಗಿದೆ ಮತ್ತು ಜನರು ರಚನಾತ್ಮಕ ನೀತಿಗಳಲ್ಲಿ ಆಸಕ್ತಿ ಹೊಂದಿದ್ದಾರೆ ಎನ್ನುವುದನ್ನು ಅವರು ತಿಳಿದುಕೊಳ್ಳಬೇಕು ಎಂದು ರಾಜಕೀಯ ಟೀಕಾಕಾರ ಸುರೇಂದ್ರ ಜೊಂಧಾಳೆ ಹೇಳಿದರು. ಅವರ ಪಕ್ಷವೀಗ ಉತ್ತರ ಭಾರತೀಯರನ್ನು ಬಿಟ್ಟು ಗುಜರಾತಿಗಳ ಹಿಂದೆ ಬಿದ್ದಿದೆ ಎಂದರು.







