ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿಗೊಳಿಸಿದ ಹೈಕೋರ್ಟ್
ಆಟೋ ಚಾಲಕರಿಗೆ ಮನೆ ನಿರ್ಮಾಣಕ್ಕಾಗಿ ಪಿಐಎಲ್ ಸಲ್ಲಿಕೆ

ಬೆಂಗಳೂರು, ಜು.28: ಬೆಂಗಳೂರು ಆಟೋ ಚಾಲಕರ ಸೌಹಾರ್ದ ಕೋ-ಆಪರೇಟಿವ್ ಲಿಮಿಟೆಡ್ ಸದಸ್ಯ ಆಟೋ ಚಾಲಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಗೃಹ ಮಂಡಳಿಯ ಮೂಲಕ ನಿವೇಶನ ಹಾಗೂ ಮನೆ ಹಂಚಿಕೆ ಮಾಡುವ ಮತ್ತು ವಿವಿಧ ವಸತಿ ಯೋಜನೆಗಳಡಿ ಮನೆ ನಿರ್ಮಾಣಕ್ಕೆ ಅನುದಾನ ಕಲ್ಪಿಸುವ ವಿಚಾರ ಸಂಬಂಧ ರಾಜ್ಯ ಸರಕಾರಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಈ ಸಂಬಂಧ ಸೋಮಶೇಖರ್ ಮತ್ತು ಆಟೋ ಚಾಲಕರ ಸೌಹಾರ್ದ ಕೋ-ಆಪರೇಟಿವ್ ಸಂಘ ಸಲ್ಲಿಸಿದ್ದ ಪಿಐಎಲ್ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ಎಸ್.ಕೆ. ಮುಖರ್ಜಿ ಮತ್ತು ನ್ಯಾ.ಪಿ.ಎಸ್. ದಿನೇಶ್ ಕುಮಾರ್ ಅವರಿದ್ದ ಪೀಠ, ರಾಜ್ಯ ಸರಕಾರಕ್ಕೆ ನೋಟಿಸ್ ಜಾರಿ ಮಾಡಿತು.
ನಗರದಲ್ಲಿ ಆಟೋ ಚಾಲಕರ ಜೀವನ ಪರಿಸ್ಥಿತಿ ತುಂಬಾ ದುಸ್ಥಿತಿಯಿಂದ ಕೂಡಿದ್ದು, ಸುಧಾರಣೆ ಮಾಡಬೇಕಿದೆ. ಹೀಗಾಗಿ, ಬೆಂಗಳೂರು ಆಟೋ ಚಾಲಕರ ಸೌಹಾರ್ದ ಕೋ-ಆಪರೇಟಿವ್ ಸಂಘದ ಸದಸ್ಯ ಆಟೋ ಚಾಲಕರಿಗೆ ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ ಹಾಗೂ ಕರ್ನಾಟಕ ಗೃಹ ಮಂಡಳಿಯ ಮೂಲಕ ನಿವೇಶನ ಹಾಗೂ ಮನೆ ಹಂಚಿಕೆ ಮಾಡಲು ಯೋಜನೆ ರೂಪಿಸಿ ಜಾರಿ ಮಾಡಬೇಕು. ಯೋಜನೆಗೆ ಸಂಬಂಧಿಸಿದಂತೆ ಅರ್ಜಿ ಸಲ್ಲಿಸುವಾಗ ನಿಗದಿಪಡಿಸಿದ ಆರಂಭಿಕ ಠೇವಣಿ ಮೊತ್ತ ಕಡಿಮೆ ಮಾಡಲು ಸರಕಾರಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ಅಂಬೇಡ್ಕರ್ ವಸತಿ ಯೋಜನೆ ಹಾಗೂ ಇತರೆ ಯೋಜನೆಗಳನ್ನು ಉಪಯೋಗಿಸಿಕೊಂಡು ಮನೆ ನಿರ್ಮಿಸಲು ಅವಕಾಶ ಕಲ್ಪಿಸಬೇಕು. ಇದರಿಂದ ಕರ್ನಾಟಕ ಗೃಹ ಮಂಡಳಿಯ ವಸತಿ ಯೋಜನೆಯಲ್ಲಿ ನಿಗದಿಪಡಿಸಿರುವ ಪ್ರಾರಂಭಿಕ ಠೇವಣಿ ಕಡಿಮೆ ಮಾಡಲು ಹಾಗೂ ಎಸ್ಸಿ, ಎಸ್ಟಿ ವರ್ಗದ ಆಟೋ ಚಾಲಕ ಫಲಾನುಭವಿಗಳಿಗೆ ಎಸ್‌ಸಿಪಿ ಮತ್ತು ಟಿಎಸ್‌ಪಿ/ಪೂಲ್ ಫಂಡ್‌ನಿಂದ ಅನುದಾನ ದೊರಕಿಸಿಕೊಡಲು ಸರಕಾರಕ್ಕೆ ನಿರ್ದೇಶಿಸುವಂತೆ ಅರ್ಜಿಯಲ್ಲಿ ಕೋರಲಾಗಿದೆ.





