ಅಲ್-ಅಕ್ಸ ಮಸೀದಿಯಲ್ಲಿ 50 ವರ್ಷ ಕೆಳಗಿನ ಪುರುಷರಿಗೆ ಶುಕ್ರವಾರದ ಪ್ರಾರ್ಥನೆಗೆ ಅವಕಾಶವಿಲ್ಲ: ಇಸ್ರೇಲ್

ಜೆರುಸಲೇಂ, ಜು. 28: ಜೆರುಸಲೇಂನ ಅಲ್-ಅಕ್ಸ ಮಸೀದಿಯಲ್ಲಿ 50 ವರ್ಷಕ್ಕಿಂತ ಕೆಳಗಿನ ಪುರುಷರಿಗೆ ಶುಕ್ರವಾರದ ಪ್ರಾರ್ಥನೆ ಸಲ್ಲಿಸಲು ಅವಕಾಶ ನೀಡಲಾಗುವುದಿಲ್ಲ ಎಂದು ಇಸ್ರೇಲ್ ಪೊಲೀಸರು ಶುಕ್ರವಾರ ಹೇಳಿದ್ದಾರೆ.
‘‘ಹರಮ್ ಅಲ್-ಶರೀಫ್ ಆವರಣದ ಭದ್ರತಾ ಪರಿಶೀಲನೆಯನ್ನು ಮಾಡಲಾಗಿದೆ ಹಾಗೂ ಇಂದು ಗಲಾಟೆ ಮತ್ತು ಪ್ರತಿಭಟನೆಗಳು ನಡೆಯುವ ಸೂಚನೆಗಳಿವೆ’’ ಎಂದು ಹೇಳಿಕೆಯೊಂದರಲ್ಲಿ ಪೊಲೀಸರು ತಿಳಿಸಿದರು.
ಈ ಸ್ಥಳವನ್ನು ಯಹೂದಿಗಳು ಟೆಂಪಲ್ ವೌಂಟ್ ಎಂಬುದಾಗಿ ಕರೆಯುತ್ತಾರೆ.
‘‘50 ವರ್ಷಕ್ಕಿಂತ ಹೆಚ್ಚಿನ ಪುರುಷರಿಗೆ ಮಾತ್ರ ಮಸೀದಿ ಆವರಣ ಪ್ರವೇಶಿಸಲು ಅನುಮತಿ ನೀಡಲಾಗುವುದು. ಆದರೆ, ಎಲ್ಲಾ ವಯಸ್ಸಿನ ಮಹಿಳೆಯರು ಮಸೀದಿ ಪ್ರವೇಶಿಸಬಹುದು. ಹಳೆ ನಗರದ ಹಲವು ರಸ್ತೆಗಳ ಮೂಲಕ ಮಾತ್ರ ಮಸೀದಿಗೆ ಬರಲು ಅವಕಾಶ ನೀಡಲಾಗುವುದು. ಯಾವುದೇ ಸಂಭಾವ್ಯ ಹಿಂಸಾಚಾರವನ್ನು ತಡೆಯಲು ಎಲ್ಲ ಅಗತ್ಯ ಕ್ರಮಗಳನ್ನು ತೆಗೆದುಕೊಳ್ಳಲಾಗುವುದು’’ ಎಂದು ಪೊಲೀಸರು ಹೇಳಿದರು.
ಈ ವಿವಾದಾಸ್ಪದ ಧಾರ್ಮಿಕ ಆವರಣದಲ್ಲಿ ಅಲ್-ಅಕ್ಸ ಮಸೀದಿ ಮತ್ತು ಡೋಮ್ ಆಫ್ ದ ರಾಕ್ ಪ್ರಾರ್ಥನಾ ಮಂದಿರಗಳಿವೆ.
ಪ್ರಾರ್ಥನಾ ಮಂದಿರಗಳ ಆವರಣದಲ್ಲಿ ಇಸ್ರೇಲ್ ಅಳವಡಿಸಿದ್ದ ಲೋಹಶೋಧಕಗಳನ್ನು ತೆರವುಗೊಳಿಸಬೇಕೆಂದು ಆಗ್ರಹಿಸಿ ಫೆಲೆಸ್ತೀನೀಯರು ಎರಡು ವಾರಗಳಿಂದ ಮಸೀದಿ ಆವರಣದಿಂದ ಹೊರಗುಳಿದಿದ್ದರು. ಗುರುವಾರ ತಮ್ಮ ಬಹಿಷ್ಕಾರವನ್ನು ಹಿಂದಕ್ಕೆ ಪಡೆದು ಮಸೀದಿಯನ್ನು ಪ್ರವೇಶಿಸಿದ್ದರು.





