ಮರಿಯಾಲ ಮಠಾಧ್ಯಕ್ಷರಾದ ಶ್ರೀ ಮಹಾಂತಸ್ವಾಮಿ ನಿಧನ

ಚಾಮರಾಜನಗರ, ಜು. 28: ತಾಲೂಕಿನ ಮರಿಯಾಲ ಶ್ರೀ ಮುರುಘರಾಜೇಂದ್ರ ಸ್ವಾಮಿಗಳ ಮಹಾಸಂಸ್ಥಾನದ ಪೀಠಾಧ್ಯಕ್ಷರಾದ ವಿದ್ವಾನ್ ಶ್ರೀ ಮಹಾಂತಸ್ವಾಮಿಗಳು (80) ಇಂದು ಮಧ್ಯಾಹ್ನ 3 ಗಂಟೆಗೆ ಅನಾರೋಗ್ಯದಿಂದ ನಿಧನರಾದರು.
ಶ್ರೀಗಳು ಮರಿಯಾಲದ ಶ್ರೀ ಮುರುಘರಾಜೇಂದ್ರ ಸ್ವಾಮಿ ಮಠದ ಪರಂಪರೆಯಂತೆ 1979 ರ ನ. 16 ರಂದು ಶ್ರೀಮಠದ ಪೀಠಾಧ್ಯಕ್ಷರಾಗಿ ಅಧಿಕಾರ ವಹಿಸಿಕೊಂಡು ಸಂಸ್ಥಾನದ ಅಭಿವೃದ್ದಿಗೆ ತಮ್ಮನ್ನು ಅರ್ಪಿಸಿಕೊಂಡಿದ್ದರು. ಬಸವಾದಿ ಶರಣರ ತತ್ವಗಳನ್ನು ಮೈಗೂಡಿಸಿಕೊಂಡು ಧರ್ಮ ಪ್ರಚಾರದಲ್ಲಿ ತೊಡಗಿಸಿಕೊಂಡು. ದಾಸೋಹ ಪರಂಪರೆಯನ್ನು ಮುಂದುವರಿಸಿಕೊಂಡು ಹೋಗುವ ಜೊತೆಗೆ ಬಡ ಮಕ್ಕಳಿಗೆ ಉಚಿತ ಶಿಕ್ಷಣ ಹಾಗೂ ದಾಸೋಹವನ್ನು ಕಲ್ಪಿಸುವ ನಿಟ್ಟಿನಲ್ಲಿ 1993ರಲ್ಲಿ ಶ್ರೀ ಮುರಘರಾಜೇಂದ್ರ ಸ್ವಾಮಿ ವಿದ್ಯಾ ಸಂಸ್ಥೆಯನ್ನು ಸ್ಥಾಪನೆ ಮಾಡಿ ಸಾವಿರಾರು ಬಡ ಮಕ್ಕಳಿಗೆ ಶಿಕ್ಷಣ ದಾಸೋಹ ನೀಡಿದರು.
ರಾಜ್ಯಸಭಾ ಮಾಜಿ ಸದಸ್ಯರು, ಹಿರಿಯ ರಾಜಕೀಯ ಮತ್ಸದ್ದಿ ದಿ. ರಾಜಶೇಖರಮೂರ್ತಿ ಅವರ ಸಹಕಾರವನ್ನು ಪಡೆದು ಮಕ್ಕಳಿಗೆ ಗುಣಮಟ್ಟದ ಶಿಕ್ಷಣದ ಜೊತೆಗೆ ಬದುಕಿಗೆ ಅತ್ಯವಶ್ಯಕವಾದ ಆಧ್ಯಾತ್ಮಿಕ, ಭೌತಿಕ ಪರಿಪೂರ್ಣ ಶಿಕ್ಷಣವನ್ನು ನೀಡಲು ಬಸವ ವಿದ್ಯಾ ಪೀಠವನ್ನು ಸ್ಥಾಪನೆ ಮಾಡುವ ಮೂಲಕ ಮರಿಯಾಲದಲ್ಲಿ ಶಿಕ್ಷಣ ಕ್ರಾಂತಿಯನ್ನು ಮಾಡಿದ್ದರು.
ಚಾ.ನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ತೇರಂಬಳ್ಳಿ ಗ್ರಾಮದ ಶಿವಶರಣೆ ಮರಿಯಮ್ಮ ಮತ್ತು ಶಿವಶರಣ ಪುಟ್ಟದೇವರು ದಂಪತಿಗಳ ಮಗನಾಗಿ 1937 ರ ಸೆ.2ರಂದು ಜನಿಸಿದರು. ಪ್ರಾಥಮಿಕ ಶಿಕ್ಷಣವನ್ನು ತೇರಂಬಳ್ಳಿ ಗ್ರಾಮದಲ್ಲಿ, ಪ್ರೌಢಶಿಕ್ಷಣನ್ನು ಕೊಳ್ಳೇಗಾಲದ ಎಂಜಿಎಸ್‌ವಿ ಪ್ರೌಢಶಾಲೆಯಲ್ಲಿ ಪೂರ್ಣ ಮಾಡಿ, ಮೈಸೂರಿನ ಮಹಾರಾಜ ಸಂಸ್ಕೃತ ಪಾಠಶಾಲೆಯಲ್ಲಿ ವ್ಯಾಸಂಗ ಮಾಡಿ, ಶಕ್ತಿ ವಿಶಿಷ್ಠಾದ್ವೈತ ವಿಷಯದಲ್ಲಿ ಎಂ.ಎ. ವಿದ್ವಾತ್ ಪಡೆದು, ತರ್ಕಶಾಸ್ತ್ರ ಹಾಗು ನ್ಯಾಯ ಶಾಸ್ತ್ರದಲ್ಲಿ ಪಾಂಡಿತ್ಯ ಪಡೆದಿದ್ದರು. ಲಕ್ಷಾಂತರ ಮಂದಿ ಭಕ್ತವೃಂದಕ್ಕೆ ದಾರಿ ದೀಪವಾಗಿದ್ದರು. ಕಿರಿಯ ಶ್ರೀಗಳಾದ ಇಮ್ಮುಡಿ ಮರುಘರಾಜೇಂದ್ರಸ್ವಾಮಿಗಳಿಗೆ ಶ್ರೀಮಠದ ಅಧಿಕಾರವನ್ನು ವಹಿಸಿ, ತಮ್ಮ ಮಾರ್ಗದರ್ಶನದಲ್ಲಿ ಕಿರಿಯ ಶ್ರೀಗಳ ಏಳ್ಗೆಯನ್ನು ಕಂಡ ಮಹಾಂತಸ್ವಾಮಿಗಳು ಶ್ರೀ ಮುರುಘರಾಜೇಂದ್ರಸ್ವಾಮಿಗಳು ಸಂಸ್ಮರಣಾ ಶತಮಾನೋತ್ಸವನ್ನು ಮೂರುದಿನಗಳ ಕಾಲ ಅದ್ದೂರಿಯಾಗಿ ಆಚರನೆ ಮಾಡಿದ್ದರು.
ಚಾಮರಾಜನಗರ ಜಿಲ್ಲೆ ಅಲ್ಲದೇ ಉತ್ತರ ಕರ್ನಾಟಕ ಭಾಗದಲ್ಲಿಯೂ ಅಪಾರವಾದ ಭಕ್ತ ವೃಂದವನ್ನು ಶ್ರೀಗಳು ಹೊಂದಿದ್ದರು. ಶ್ರೀಗಳ ಅಂತ್ಯ ಸಂಸ್ಕಾರ ನಾಳೆ ಮಧ್ಯಾಹ್ನ ಶ್ರೀಮರಿಯಾಲದ ಅವರಣದಲ್ಲಿ ನಡೆಯಲಿದ್ದು, ಮರಿಯಾಲದ ಹಿರಿಯ ಶ್ರೀಗಳ ನಿಧನರಾದ ಸುದ್ದಿ ತಿಳಿಯುತ್ತಿದ್ದಂತೆ ಮಠದ ಕಡೆಗೆ ಸಂಜೆಯಿಂದಲೇ ಭಕ್ತವೃಂದ ದರ್ಶನಕ್ಕೆ ಬರುತ್ತಿದ್ದಾರೆ. ಇನ್ನು ಚಿತ್ರದುರ್ಗ, ಹಾವೇರಿ, ಬಿಜಾಪುರದಿಂದಲೂ ಹೆಚ್ಚಿನ ಭಕ್ತರು ಆಗಮಿಸಲಿದ್ದಾರೆ.
ಸಂತಾಪ : ಶ್ರೀ ಮಹಾಂತಸ್ವಾಮಿಗಳ ನಿಧನಕ್ಕೆ ಬಿಜೆಪಿ ಜಿಲ್ಲಾಧ್ಯಕ್ಷ ಪ್ರೊ. ಕೆ.ಆರ್. ಮಲ್ಲಿಕಾರ್ಜುನಪ್ಪ, ಶಾಸಕ ಸಿ. ಪುಟ್ಟರಂಗಶೆಟ್ಟಿ, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಪಿ. ಮರಿಸ್ವಾಮಿ, ಎಪಿಎಂಸಿ ಅಧ್ಯಕ್ಷ ಬಿ.ಕೆ. ರವಿಕುಮಾರ್, ಅಖಿಲ ಭಾರತ ವೀರಶೈವ ಮಹಾಸಭಾ ಜಿಲ್ಲಾಧ್ಯಕ್ಷ ಕೋಡಸೋಗೆ ಶಿವಬಸಪ್ಪ, ಪ್ರಧಾನ ಕಾರ್ಯದರ್ಶಿ ಹೊಸೂರು ನಟೇಶ್, ಯುವ ಘಟಕದ ಪ್ರಧಾನ ಕಾರ್ಯದರ್ಶಿ ದೊಡ್ಡರಾಯಪೇಟೆ ಗೀರೀಶ್ ಅನೇಕರು ಸಂತಾಪ ಸೂಚಿಸಿದ್ದಾರೆ.







