ಸರಕಾರಿ ಪ್ರಥಮ ದರ್ಜೆ ಕಾಲೇಜುಗಳ ವೇಳಾಪಟ್ಟಿ ಬದಲಾವಣೆ
ಗ್ರಾಮೀಣ, ಮಲೆನಾಡು, ಕರಾವಳಿ ಭಾಗದ ಕಾಲೇಜುಗಳಿಗೆ ಬೆಳಗ್ಗೆ 9ಕ್ಕೆ, ಉಳಿದ ಕಾಲೇಜುಗಳಿಗೆ 8ಕ್ಕೆ ಪ್ರಾರಂಭ
ಬೆಂಗಳೂರು, ಜು.28: ಸರಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಬೋಧಿಸುತ್ತಿರುವ ತರಗತಿಗಳನ್ನು ಬೆಳಗ್ಗೆ 8ಗಂಟೆಗೆ ಪ್ರಾರಂಭಿಸಬೇಕೆಂದು ಸೂಚಿಸಲಾಗಿದ್ದ ವೇಳಾ ಪಟ್ಟಿಯಲ್ಲಿ ಕೆಲವೊಂದು ಬದಲಾವಣೆ ಮಾಡಿ ಹೊಸ ವೇಳಾಪಟ್ಟಿಯನ್ನು ಹೊರಡಿಸಲಾಗಿದೆ.
ಗ್ರಾಮೀಣ, ಮಲೆನಾಡು ಹಾಗೂ ಕರಾವಳಿ ಭಾಗದ ವಿದ್ಯಾರ್ಥಿಗಳು ಬೆಳಗ್ಗೆ 8ಗಂಟೆಗೆ ಕಾಲೇಜಿಗೆ ಹಾಜರಾಗಲು ಸಾಧ್ಯವಾಗದ ಕಾರಣ ವೇಳಾ ಪಟ್ಟಿಯನ್ನು ಬದಲಾಯಿಸಿ, ಈ ಭಾಗದ ಕಾಲೇಜುಗಳಿಗೆ ಬೆಳಗ್ಗೆ 8ರ ಬದಲಿಗೆ 9ಕ್ಕೆ ಕಾಲೇಜು ಪ್ರಾರಂಭಿಸಲಾಗುತ್ತಿದೆ.
ಇನ್ನು ಉಳಿದಂತೆ ಎರಡು ಪಾಳೆಯದಲ್ಲಿ ತರಗತಿಗಳನ್ನು ನಡೆಸುತ್ತಿರುವ ಕಾಲೇಜುಗಳಲ್ಲಿ ಬೆಳಗಿನ ತರಗತಿಯನ್ನು ಹಿಂದಿನಂತೆಯೇ ಬೆಳಗ್ಗೆ 8ಗಂಟೆಗೆ ಪ್ರಾರಂಭಿಸಲಾಗುತ್ತದೆ. ಹಾಗೆಯೇ ಪ್ರಯೋಗಾಲಯ ತರಗತಿಗಳನ್ನು ಬೆಳಗ್ಗೆ 8ಗಂಟೆಗೆ ವೇಳಾಪಟ್ಟಿಯಂತೆ ನಡೆಸಿಕೊಂಡು ಹೋಗಲು ಆದ್ಯತೆ ನೀಡಲಾಗಿದೆ.
ವೇಳಾ ಪಟ್ಟಿಯ ಬದಲಾವಣೆಯಿಂದಾಗಿ ಪಠ್ಯೇತರ ಚಟುವಟಿಕೆಗಳಾದ ಎಸೆಸೆಲ್ಸಿ, ಎನ್‌ಸಿಸಿ ಕೌಶಲ್ಯಾಭಿವೃದ್ಧಿ ತರಬೇತಿ, ವಿಶೇಷ ತರಗತಿಗಳು ಹಾಗೂ ಕ್ರೀಡಾ ಚಟುವಟಿಕೆಗಳನ್ನು ಯಾವುದೇ ರೀತಿಯಿಂದಲೂ ಕಡಿತಗೊಳಿಸಬಾರದು ಎಂದು ಶಿಕ್ಷಣ ಇಲಾಖೆ ಪತ್ರಿಕಾ ಪ್ರಕಟಣೆಯಲ್ಲಿ ಸ್ಪಷ್ಟಪಡಿಸಿದೆ.









