ರಾಜತಾಂತ್ರಿಕರ ಸಂಖ್ಯೆ ಕಡಿತಕ್ಕೆ ಅಮೆರಿಕಕ್ಕೆ ರಶ್ಯ ಸೂಚನೆ
ಅಮೆರಿಕದ ದಿಗ್ಬಂಧನೆಗೆ ರಶ್ಯದ ಪ್ರತೀಕಾರ

ಮಾಸ್ಕೊ, ಜು. 28: ತನ್ನ ವಿರುದ್ಧ ಅಮೆರಿಕ ಆರ್ಥಿಕ ದಿಗ್ಬಂಧನಗಳನ್ನು ವಿಧಿಸಿರುವ ಹಿನ್ನೆಲೆಯಲ್ಲಿ ಆಕ್ರೋಶಗೊಂಡಿರುವ ರಶ್ಯ, ಇದರ ವಿರುದ್ಧ ಪ್ರತೀಕಾರದ ಕ್ರಮಗಳಿಗೆ ಮುಂದಾಗಿದೆ. ಮಾಸ್ಕೊದಲ್ಲಿರುವ ರಾಜತಾಂತ್ರಿಕ ಸಿಬ್ಬಂದಿಯ ಸಂಖ್ಯೆಯನ್ನು ಸೆಪ್ಟಂಬರ್ ಒಂದರ ವೇಳೆಗೆ ಕಡಿಮೆ ಮಾಡುವಂತೆ ಅದು ಅಮೆರಿಕಕ್ಕೆ ಸೂಚಿಸಿದೆ ಹಾಗೂ ಅಮೆರಿಕ ರಾಜತಾಂತ್ರಿಕರು ಬಳಸುತ್ತಿರುವ ಡಚ ಆವರಣ ಮತ್ತು ಉಗ್ರಾಣವನ್ನು ವಶಪಡಿಸಿಕೊಳ್ಳುವುದಾಗಿ ಹೇಳಿದೆ.
ರಶ್ಯದ ವಿರುದ್ಧ ಹೊಸ ಆರ್ಥಿಕ ದಿಗ್ಬಂಧನಗಳನ್ನು ವಿಧಿಸುವ ನಿರ್ಣಯಕ್ಕೆ ಅಮೆರಿಕದ ಸೆನೆಟ್ ಅಂಗೀಕಾರ ನೀಡಿದ ಒಂದು ದಿನದ ಬಳಿಕ ರಶ್ಯದ ಪ್ರತೀಕಾರವನ್ನು ಘೋಷಿಸುವ ವಿದೇಶ ಸಚಿವಾಲಯದ ಹೇಳಿಕೆ ಹೊರಬಿದ್ದಿದೆ.
ಅದೇ ವೇಳೆ, ತನ್ನ ಕ್ರಮಕ್ಕೆ ಪ್ರತಿಯಾಗಿ ರಶ್ಯದ ಯಾವುದೇ ರಾಜತಾಂತ್ರಿಕರನ್ನು ಅಮೆರಿಕ ಉಚ್ಚಾಟಿಸಿದರೆ, ಅದೇ ರೀತಿಯಲ್ಲಿ ತಾನು ಪತ್ರಿಕ್ರಿಯಿಸುವುದಾಗಿ ರಶ್ಯದ ವಿದೇಶ ಸಚಿವಾಲಯ ಎಚ್ಚರಿಸಿದೆ.
ರಶ್ಯದ ಬಗ್ಗೆ ಮೃದು ಧೋರಣೆಯನ್ನು ಹೊಂದಿರುವ ಅಮೆರಿಕದ ಅಧ್ಯಕ್ಷ ಟ್ರಂಪ್‌ಗೆ ಸೆನೆಟ್‌ನ ನಿರ್ಣಯ ಬಿಸಿ ತುಪ್ಪದಂತಾಗಿದೆ. ನಿರ್ಣಯವನ್ನು ಒಪ್ಪಿಕೊಂಡರೆ ರಶ್ಯದ ವಿರುದ್ಧ ಅವರು ಕಠಿಣ ನಿಲುವನ್ನು ತಳೆಯಬೇಕು. ಒಂದು ವೇಳೆ, ನಿರ್ಣಯಕ್ಕೆ ವೀಟೊ (ತಡೆ) ಚಲಾಯಿಸಿದರೆ ತನ್ನದೇ ರಿಪಬ್ಲಿಕನ್ ಪಕ್ಷದ ಸಂಸದರ ಆಕ್ರೋಶವನ್ನು ಅವರು ಎದುರಿಸಬೇಕಾಗುತ್ತದೆ.







