ಕಾವ್ಯಾ ಆತ್ಮಹತ್ಯೆ ಪ್ರಕರಣ: ತನಿಖೆಗೆ ಕಮಿಷನರ್ ಆದೇಶ
ಮಂಗಳೂರು, ಜು. 28: ಮೂಡುಬಿದ್ರೆಯ ಆಳ್ವಾಸ್ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿನಿ ಕಾವ್ಯಾ ಆತ್ಮಹತ್ಯೆ ಪ್ರಕರಣಕ್ಕೆ ಸಂಬಂಧಿಸಿ ನಗರ ಪೊಲೀಸ್ ಆಯುಕ್ತ ಟಿ.ಆರ್.ಸುರೇಶ್ ಅವರು ತನಿಖೆಗೆ ಆದೇಶ ನೀಡಿದ್ದಾರೆ.
ಕಾವ್ಯಾ ಆತ್ಯಹತ್ಯೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿ ಆಕೆಯ ಪೋಷಕರಿಂದ ಬಂದಿರುವ ದೂರಿನ ಹಿನ್ನೆಲೆಯಲ್ಲಿ ಈ ಆದೇಶ ನೀಡಲಾಗಿದೆ. ಎಸಿಪಿ ರಾಜೇಂದ್ರ ಡಿ.ಎಸ್. ಅವರು ವಿಚಾರಣೆಯನ್ನು ನಡೆಸಲಿದ್ದಾರೆ.
ಕಾವ್ಯಾ ಸಾವಿನ ಬಗ್ಗೆ ಪೋಷಕರು ವ್ಯಕ್ತಪಡಿಸಿರುವ ಅನುಮಾನದ ಬಗ್ಗೆಯೂ ವಿಚಾರಣೆ ನಡೆಯಲಿದೆ ಎಂದು ಪೊಲೀಸ್ ಆಯುಕ್ತರು ‘ವಾರ್ತಾಭಾರತಿ’ಗೆ ತಿಳಿಸಿದರು. ಕಟೀಲು ಸಮೀಪದ ಎಕ್ಕಾರು ದೇವಗುಡ್ಡೆ ನಿವಾಸಿ ಲೋಕೇಶ್ ಎಂಬವರ ಪುತ್ರಿ ಹಾಗೂ ರಾಜ್ಯಮಟ್ಟದ ಬ್ಯಾಡ್ಮಿಂಟನ್ ಆಟಗಾರ್ತಿಯಾಗಿದ್ದ ಕಾವ್ಯಾ ಜು. 20ರಂದು ರಾತ್ರಿ ಮೂಡಬಿದ್ರೆಯ ವಿದ್ಯಾಗಿರಿಯಲ್ಲಿರುವ ಆಳ್ವಾಸ್ ಶಿಕ್ಷಣ ಸಂಸ್ಥೆಯ ಹಾಸ್ಟೆಲ್‌ನಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎನ್ನಲಾಗಿದೆ. ಪುತ್ರಿಯ ಸಾವಿನ ಬಗ್ಗೆ ಶಂಕೆ ವ್ಯಕ್ತಪಡಿಸಿ ಲೋಕೇಶ್ ಅವರು ‘ತನ್ನ ಮಗಳು ಕೊಲೆಯಾಗಿದ್ದಾಳೆ’ ಎಂದು ನಗರ ಪೊಲೀಸ್ ಆಯುಕ್ತರಿಗೆ ನೀಡಿರುವ ದೂರಿನಲ್ಲಿ ಆರೋಪಿಸಿದ್ದರು.





