ವಿಶ್ವಕರ್ಮ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿ ವೇತನ ವಿತರಣೆ

ಉಡುಪಿ, ಜು.28: ಉಡುಪಿ ಜಿಲ್ಲಾ ಶ್ರೀವಿಶ್ವಕರ್ಮ ಎಜ್ಯುಕೇಶನಲ್ ಟ್ರಸ್ಟ್ ವತಿಯಿಂದ ಸಮಾಜದ 137 ವಿದ್ಯಾರ್ಥಿಗಳಿಗೆ ಐದು ಲಕ್ಷ ರೂ. ವಿದ್ಯಾರ್ಥಿ ವೇತನ ವನ್ನು ಇತ್ತೀಚೆಗೆ ಉಡುಪಿ ಕುಂಜಿಬೆಟ್ಟಿನ ಗಾಯತ್ರಿ ಕಲ್ಯಾಣ ಮಂಟಪದಲ್ಲಿ ವಿತರಿಸಲಾಯಿತು.
ಕಾರ್ಯಕ್ರಮವನ್ನು ಮೂಡುಬಿದ್ರೆಯ ಗುರುಮಠ ಶ್ರೀಕಾಳಿಕಾಂಬಾ ದೇವ ಸ್ಥಾನದ ಆಡಳಿತ ಮೊಕ್ತೇಸರ ಸುಂದರ ಆಚಾರ್ಯ ಉದ್ಘಾಟಿಸಿದರು. ಅಧ್ಯಕ್ಷತೆ ಯನ್ನು ಡಾ.ದಾಸಾಚಾರ್ಯ ಹೇರೂರು ವಹಿಸಿದ್ದರು. ಕರ್ನಾಟಕ ವಿಶ್ವಕರ್ಮ ಸಮುದಾಯಗಳ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಬಿ.ಪಿ.ಸತ್ಯವತಿ, ಕರ್ನಾಟಕ ರಾಜ್ಯ ವಿಶ್ವಕರ್ಮ ಸಮಾಜದ ಅಧ್ಯಕ್ಷ ಬಾಬು ಪತ್ತಾರ್ ಮುಖ್ಯ ಅತಿಥಿಗಳಾಗಿದ್ದರು.
ಮಲೆಕುಡಿಯ ಜನಾಂಗದ ವಿನೋದ ಬೆಳ್ತಂಗಡಿ ಹಾಗೂ ಅಂಧ ವಿದ್ಯಾರ್ಥಿ ನಿರಂಜನ ಕಡ್ಲಾರುಗೆ ಪ್ರತಿಭಾ ಪುರಸ್ಕಾರ ನೀಡಿ ಗೌರವಿಸಲಾಯಿತು.
ಇದೇ ಸಂದರ್ಭದಲ್ಲಿ ಇತ್ತೀಚೆಗೆ ಡಾಕ್ಟರೇಟ್ ಪಡೆದ ಡಾ.ಸರೋಜಿನಿ ಹರಿಶ್ಚಂದ್ರ ಆಚಾರ್ಯ ಮಂಗಳೂರು ಹಾಗೂ ಡಾ.ರವಿಶಂಕರ್ ಬೆಳ್ಳಂಪಳ್ಳಿ ಅವರನ್ನು ಸನ್ಮಾನಿಸಲಾಯಿತು. ಉಡುಪಿ ಆರ್‌ವಿಎಸ್ ಸಂಘದ ಅಧ್ಯಕ್ಷ ವಾಸುದೇವ ಆಚಾರ್ಯ ಉಪಸ್ಥಿತರಿದ್ದರು.
ಟ್ರಸ್ಟ್‌ನ ಸ್ಥಾಪಕ ಸದಾಶಿವ ಆಚಾರ್ಯರ ಸಂಸ್ಮರಣೆಯನ್ನು ಮಹಾಬಲೇಶ್ವರ ಆಚಾರ್ಯ ಸಾಲಿಗ್ರಾಮ ನಡೆಸಿಕೊಟ್ಟರು. ಬಿ.ಎ.ಆಚಾರ್ಯ ಮಣಿಪಾಲ ಸ್ವಾಗತಿಸಿದರು. ಚಂದ್ರಾಯ ಆಚಾರ್ಯ ಹೆರ್ಗ ಪ್ರಾಸ್ತಾವಿಕವಾಗಿ ಮಾತನಾಡಿದರು. ಉಷಾ ಆಚಾರ್ಯ ವಂದಿಸಿದರು. ಡಾ.ಪ್ರತಿಮಾ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.







