ಎಸ್‌ಐ ಭಾರತಿ ಮೇಲೆ ಹಲ್ಲೆ ಯತ್ನ ಪ್ರಕರಣ: ಆರೋಪಿ ದೋಷಮುಕ್ತ
ಮಂಗಳೂರು, ಜು. 28: ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಭಾರತಿ ಮೇಲೆ ಹಲ್ಲೆಗೆ ಯತ್ನಿಸಿದ ಹಾಗೂ ಕರ್ತವ್ಯಕ್ಕೆ ಅಡ್ಡಿಪಡಿಸಿದ ಪ್ರಕರಣದ ಆರೋಪಿಯನ್ನು ಮಂಗಳೂರಿನ ಮೂರನೆ ಹೆಚ್ಚುವರಿ ಸೆಷನ್ ನ್ಯಾಯಾಲಯವು ಆರೋಪ ಮುಕ್ತಗೊಳಿಸಿ ಆದೇಶಿಸಿದೆ.
ಜೋಕಟ್ಟೆಯ ನಿವಾಸಿ ಅಬ್ದುಸ್ಸಲಾಂ ಯಾನೆ ಪಟೋಡಿ ಸಲಾಂ ಖುಲಾಸೆಗೊಂಡಿರುವ ಆರೋಪಿ.
ಮೂಡಬಿದ್ರೆಯಲ್ಲಿ ಕೊಲೆ ಯತ್ನ ಪ್ರಕರಣದಲ್ಲಿ ಆರೋಪಿಯಾಗಿದ್ದ ಸಲಾಂನನ್ನು ಬಂಧಿಸಲು ಪಣಂಬೂರಿನಲ್ಲಿ ಎಸ್‌ಐ ಆಗಿದ್ದ ಭಾರತಿ ಅವರು 2014ರಲ್ಲಿ ಜೋಕಟ್ಟೆಗೆ ತೆರಳಿದ್ದರು. ಈ ಸಂದರ್ಭದಲ್ಲಿ ಸಲಾಂ ಎಸ್‌ಐ ಭಾರತಿ ಅವರ ಮೇಲೆ ಹಲ್ಲೆಗೆ ಯತ್ನಿಸಿದ್ದ ಹಾಗೂ ಅವರ ಕರ್ತವ್ಯಕ್ಕೆ ಅಡ್ಡಿಪಡಿಸಿದ್ದಲ್ಲದೆ, ಅವರೊಂದಿಗಿದ್ದ ಇತರ ಸಿಬ್ಬಂದಿ ಮೇಲೂ ಹಲ್ಲೆಗೆ ಯತ್ನಿಸಿದ್ದ ಎಂದು ಆರೋಪಿಸಲಾಗಿತ್ತು.
ಈ ಬಗ್ಗೆ ಪಣಂಬೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಶುಕ್ರವಾರ ಪ್ರಕರಣದ ವಿಚಾರಣೆಯನ್ನು ಕೈಗೆತ್ತಿಕೊಂಡ ನ್ಯಾಯಾಲಯವು ಆರೋಪಿ ಸಲಾಂಗೆ ಆರೋಪ ಮುಕ್ತಗೊಳಿಸಿದ್ದಾರೆ. ಆರೋಪಿಯ ಪರವಾಗಿ ನ್ಯಾಯವಾದಿ ನಾರಾಯಣ ಬಿ. ಹಾಗೂ ಹಫೀಝ್ ವಾದಿಸಿದ್ದರು.





