ಪತಿಯನ್ನು ಆಯುಧ ರಹಿತ ಯೋಧನೆಂದು ಪರಿಗಣಿಸದಿರಿ:ಮದ್ರಾಸ್ ಹೈಕೋರ್ಟ್

ಚೆನ್ನೈ, ಜು. 28 ಪತಿಯನ್ನು ಆಯುಧ ರಹಿತ ಯೋಧನೆಂದು ಪರಿಗಣಿಸದಿರಿ ಹಾಗೂ ಪತ್ನಿಗೆ ಜೀವನಾಂಶ ನೀಡಲು ಯಾಂತ್ರಿಕ ರೀತಿಯಲ್ಲಿ ಆದೇಶಿಸಬೇಡಿ ಎಂದು ಮದ್ರಾಸ್ ಉಚ್ಚ ನ್ಯಾಯಾಲಯ ಕುಟುಂಬ ನ್ಯಾಯಾಲಯಕ್ಕೆ ಗುರುವಾರ ಹೇಳಿದೆ.
ಓರ್ವ ಪುರುಷನಿಗೆ ಹೆತ್ತವರು ಇರುತ್ತಾರೆ. ವೃದ್ಧಾಪ್ಯದಲ್ಲಿರುವ ಅವರನ್ನು ನೋಡಿಕೊಳ್ಳುವ ಬಾಧ್ಯತೆ ಆತನಿಗಿರುತ್ತದೆ ಎಂದು ಹೇಳಿರುವ ಉಚ್ಚ ನ್ಯಾಯಾಲಯ, ಕುಟುಂಬ ನ್ಯಾಯಾಲಯ ಈ ಅಂಶವನ್ನು ಹಗುರವಾಗಿ ಬದಿಗೆ ಸರಿಸಬಾರದು ಎಂದಿದೆ.ವಿಚ್ಛೇಧಿತ ಪತ್ನಿಗೆ ಪತಿ ತನ್ನ ಆದಾಯದ ಮೂರನೇ ಒಂದು ಭಾಗ ಜೀವನಾಂಶ ನೀಡಬೇಕು ಎಂಬ ವಾದಕ್ಕೆ ಪ್ರತಿಯಾಗಿ ಉಚ್ಚ ನ್ಯಾಯಾಲಯ ಈ ಅಭಿಪ್ರಾಯ ವ್ಯಕ್ತವಪಡಿಸಿದೆ.
ವ್ಯಕ್ತಿಯೋರ್ವ ಪ್ರತಿ ತಿಂಗಳು 10,500 ರೂಪಾಯಿ ವೇತನ ಪಡೆಯುತ್ತಿದ್ದು, ಅದರಲ್ಲಿ 7,000 ರೂಪಾಯಿಯನ್ನು ಪತ್ನಿ ಹಾಗೂ ಮಗುವಿಗೆ ನೀಡಬೇಕು ಎಂದು ಕುಟುಂಬ ನ್ಯಾಯಾಲಯ ತೀರ್ಪು ನೀಡಿದೆ. ಇದರಿಂದ ಆತನಿಗೆ ಉಳಿಯುವುದು ಕೇವಲ 3,500. ಇದರಲ್ಲಿ ಆತ ತನ್ನ ಖರ್ಚು ಹಾಗೂ ತಂದೆ ತಾಯಿಯ ಖರ್ಚನ್ನು ನಿಭಾಯಿಸಬೇಕು. ಪತ್ನಿ ಮತ್ತು ಮಕ್ಕಳ ಪರವಾಗಿ ಜೀವನಾಂಶದ ತೀರ್ಪು ನೀಡುವಾಗ ನ್ಯಾಯಾಲಯ ಪತ್ನಿ ಮತ್ತು ಮಗು ಮಾತ್ರವಲ್ಲ ಆತನ ಹೆತ್ತವರನ್ನು ನೋಡಿಕೊಳ್ಳುವ ಬಾಧ್ಯತೆ ಕೂಡ ಪತಿಗೆ ಇದೆ ಎಂಬುದನ್ನು ಅರಿತುಕೊಳ್ಳಬೇಕು ಎಂದು ಉಚ್ಚ ನ್ಯಾಯಾಲಯ ಹೇಳಿದೆ.
ಕುಟುಂಬ ನ್ಯಾಯಾಲಯದ ತೀರ್ಪಿನ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿರುವ ಉಚ್ಚ ನ್ಯಾಯಾಲಯ, ಇಂತಹ ತೀರ್ಪನ್ನು ತಿರಸ್ಕರಿಸಬೇಕಾಗಿದೆ. ವಿಚಾರಣಾಧೀನ ನ್ಯಾಯಾಲಯ ಪೂರ್ಣ ಸನ್ನಿವೇಶವನ್ನು ತೂಗಿ ನೋಡಬೇಕಾಗಿದೆ ಹಾಗೂ ಪತಿಯ ಹೆಗಲ ಮೇಲೆ ಬೀಳುವ ಆರ್ಥಿಕ ಹೊರೆ ಅಂದಾಜಿಸಬೇಕಾಗಿದೆ ಎಂದರು.







