ಲಂಕಾದ ಮೇಲೆ ಕೊಹ್ಲಿ ಪಡೆಯ ಸವಾರಿ

ಗಾಲೆ, ಜು.28: ನೂರಾರು ನಿಮಿಷಗಳ ಆಟ ಮಳೆಯಿಂದ ಕೊಚ್ಚಿ ಹೋಗಿದ್ದರೂ ಇಲ್ಲಿ ನಡೆಯುತ್ತಿರುವ ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನಲ್ಲಿ ಭಾರತ ಮೇಲುಗೈ ಸಾಧಿಸಿದೆ.
ಗಾಲೆ ಇಂಟರ್‌ನ್ಯಾಶನಲ್ ಸ್ಟೇಡಿಯಂನಲ್ಲಿ ಟೆಸ್ಟ್ ನ ಮೂರನೆ ದಿನವಾಗಿರುವ ಶುಕ್ರವಾರ ಭಾರತ ಎರಡನೆ ಇನಿಂಗ್ಸ್‌ನಲ್ಲಿ ದಿನದ ಆಟ ಕೊನೆಗೊಂಡಾಗ 46.3 ಓವರ್‌ಗಳಲ್ಲಿ 3 ವಿಕೆಟ್ ನಷ್ಟದಲ್ಲಿ 189 ರನ್ ಗಳಿಸುವ ಮೂಲಕ ಸ್ಪಷ್ಟ ಮೇಲುಗೈ ಸಾಧಿಸಿದೆ.
ನಾಯಕ ವಿರಾಟ್ ಕೊಹ್ಲಿ ಔಟಾಗದೆ 76 ರನ್ ಗಳಿಸಿ ಬ್ಯಾಟಿಂಗ್‌ನ್ನು ನಾಲ್ಕನೆ ದಿನಕ್ಕೆ ಕಾಯ್ದಿರಿಸಿದ್ದಾರೆ. ಮೊದಲ ಇನಿಂಗ್ಸ್‌ನಲ್ಲಿ 309 ರನ್‌ಗಳ ಮುನ್ನಡೆ ಪಡೆದಿದ್ದ ಭಾರತ ದಿನಾದಾಟದಂತ್ಯಕ್ಕೆ ಮುನ್ನಡೆಯನ್ನು 498ಕ್ಕೆ ಏರಿಸಿದೆ.
ಶ್ರೀಲಂಕಾದ ಮೊದಲ ಇನಿಂಗ್ಸ್‌ನ್ನು 291 ರನ್‌ಗಳಿಗೆ ನಿಯಂತ್ರಿಸಿದ ಭಾರತ ಫಾಲೋ ಆನ್ ವಿಧಿಸಲಿಲ್ಲ. ಎರಡನೆ ಇನಿಂಗ್ಸ್ ಆರಂಭಿಸಿದ ಭಾರತ ತಂಡ ಎರಡನೆ ಇನಿಂಗ್ಸ್‌ನಲ್ಲೂ ದೊಡ್ಡ ಮೊತ್ತದ ಸವಾಲನ್ನು ಕಲೆ ಹಾಕುವ ನಿಟ್ಟಿನಲ್ಲಿ ಹೆಜ್ಜೆ ಇರಿಸಿದೆ.
ಎರಡನೆ ಇನಿಂಗ್ಸ್ ಆರಂಭಿಸಿದ ಭಾರತ ಪರ ಶಿಖರ್ ಧವನ್ ಮತ್ತು ಅಭಿನವ್ ಮುಕುಂದ್ ಮೊದಲ ವಿಕೆಟ್‌ಗೆ 19 ರನ್ ದಾಖಲಿಸಿದರು. ಮೊದಲ ಇನಿಂಗ್ಸ್‌ನಲ್ಲಿ 190 ರನ್ ದಾಖಲಿಸಿ ದ್ವಿಶತಕ ವಂಚಿತಗೊಂಡಿದ್ದ ಧವನ್ 14 ರನ್(14, ಎ, 3ಬೌ) ಗಳಿಸಿ ದಿಲ್ರುವಾನ್ ಪೆರೆರಾ ಎಸೆತದಲ್ಲಿ ಡಿ’ಸಿಲ್ವಾಗೆ ಕ್ಯಾಚ್ ನೀಡಿದರು.
ಮೊದಲ ಇನಿಂಗ್ಸ್‌ನಲ್ಲಿ ಆಕರ್ಷಕ 153 ರನ್ ಕೊಡುಗೆ ನೀಡಿದ್ದ ಚೇತೇಶ್ವರ ಪೂಜಾರ 15 ರನ್ ಗಳಿಸಿ ಔಟಾದರು.
56ಕ್ಕೆ 2 ವಿಕೆಟ್ ಕಳೆದುಕೊಂಡಿದ್ದ ಬೆನ್ನಲ್ಲೇ ಮಳೆ ಆಗಮನವಾಯಿತು. ಇದರಿಂದಾಗಿ ಆಟ ಸ್ಥಗಿತಗೊಂಡಿತು.
ಮಳೆ ನಿಂತಾಗ ಭಾರತದ ಬ್ಯಾಟಿಂಗ್‌ನ್ನು ಮುನ್ನಡೆಸಿದ ಆರಂಭಿಕ ದಾಂಡಿಗ ಮುಕುಂದ್ ಮತ್ತು ನಾಯಕ ವಿರಾಟ್ ಕೊಹ್ಲಿ ಲಂಕಾದ ದಾಳಿಯನ್ನು ಪುಡಿ ಪುಡಿ ಮಾಡಿದರು. ಮೂರನೆ ವಿಕೆಟ್‌ಗೆ 133 ರನ್‌ಗಳ ಜೊತೆಯಾಟ ನಡೆಸಿದ್ದಾರೆ.
ಕೊಹ್ಲಿ 15ನೆ ಅರ್ಧಶತಕ ಮತ್ತು ಮುಕುಂದ್ ಎರಡನೆ ಅರ್ಧಶತಕ ದಾಖಲಿಸಿದರು. ಕೊಹ್ಲಿ ಕಳೆದ ಫೆಬ್ರವರಿಯಲ್ಲಿ ಹೈದರಾಬಾದ್‌ನಲ್ಲಿ ಬಾಂಗ್ಲಾದೇಶ ವಿರುದ್ಧ ಟೆಸ್ಟ್‌ನಲ್ಲಿ 204 ಮತ್ತು 38 ರನ್ ಗಳಿಸಿದ ಬಳಿಕ ಮೊದಲ ಬಾರಿ 40ಕ್ಕಿಂತ ಹೆಚ್ಚು ರನ್ ದಾಖಲಿಸಿದ್ದಾರೆ. ಆಸ್ಟ್ರೇಲಿಯ ವಿರುದ್ಧದ ಕಳೆದ ಟೆಸ್ಟ್ ಸರಣಿಯ ಮೂರು ಪಂದ್ಯಗಳ ಟೆಸ್ಟ್ ಸರಣಿಯ ಐದು ಇನಿಂಗ್ಸ್‌ಗಳಲ್ಲಿ 15ಕ್ಕಿಂತ ಹೆಚ್ಚು ಸ್ಕೋರ್ ದಾಖಲಿಸಿರಲಿಲ್ಲ. ಪ್ರಸ್ತುತ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 3 ರನ್ ಗಳಿಸಿದ್ದ ಕೊಹ್ಲಿ ಮತ್ತೆ ಫಾರ್ಮ್‌ಗೆ ಮರಳಿದ್ದಾರೆ. ಕೊಹ್ಲಿ 114 ಎಸೆತಗಳಲ್ಲಿ 5 ಬೌಂಡರಿಗಳ ನೆರವಿನಲ್ಲಿ 76 ರನ್ ಗಳಿಸಿ ಶತಕ ದಾಖಲಿಸುವ ಕಡೆಗೆ ಹೆಜ್ಜೆ ಇರಿಸಿದ್ದಾರೆ. ಆದರೆ ಅಭಿನವ್ ಮುಕುಂದ್ ಆಟ ದ ಕೊನೆಯಲ್ಲಿ 81 ರನ್(116ಎ, 8ಬೌ) ಗಳಿಸಿ ಔಟಾದರು. ಲಂಕಾದ ದಿಲ್ರುವಾನ್ ಪೆರೆರಾ, ಲಹಿರು ಕುಮಾರ ಮತ್ತು ಧನುಷ್ಕ ಗುಣತಿಲಕ ತಲಾ 1 ವಿಕೆಟ್ ಹಂಚಿಕೊಂಡರು.
►ಶ್ರೀಲಂಕಾ 291 : ಶ್ರೀಲಂಕಾ ಮೊದಲ ಇನಿಂಗ್ಸ್ ನಲ್ಲಿ ಎರಡನೆ ದಿನದಾಟದಂತ್ಯಕ್ಕೆ 44 ಓವರ್‌ಗಳಲ್ಲಿ 5 ವಿಕೆಟ್ ನಷ್ಟದಲ್ಲಿ 154 ರನ್ ಗಳಿಸಿತ್ತು. ಈ ಮೊತ್ತಕ್ಕೆ 137 ರನ್ ಸೇರಿಸಿತು.
78.3 ಓವರ್‌ಗಳಲ್ಲಿ 291 ರನ್ ಕಲೆ ಹಾಕುವ ಹೊತ್ತಿಗೆ 9 ವಿಕೆಟ್ ಕಳೆದುಕೊಂಡಿತು. ಮೊದಲ ದಿನ ಆಟದ ವೇಳೆ ಗಾಯಗೊಂಡು ಪೆವಿಲಿಯನ್ ಸೇರಿದ್ದ ಅಸೆಲಾ ಗುಣರತ್ನೆ ಬ್ಯಾಟಿಂಗ್ ನಡೆಸಲಿಲ್ಲ. ಹೀಗಾಗಿ 9 ವಿಕೆಟ್ ಉರುಳುವಷ್ಟರಲ್ಲಿ ತನ್ನ ಮೊದಲ ಇನಿಂಗ್ಸ್ ನ್ನು ಮುಕ್ತಾಯಗೊಳಿಸಿತು. ದಿಲ್ರುವಾನ್ ಪೆರೆರಾ 92 ರನ್(132ಎ, 10ಬೌ, 4ಸಿ) ಗಳಿಸಿ ಔಟಾಗದೆ ಉಳಿದರು.
35ರ ಹರೆಯದ ಆಲ್‌ರೌಂಡರ್ ಪೆರೆರಾ 18ನೆ ಟೆಸ್ಟ್‌ನಲ್ಲಿ ಚೊಚ್ಚಲ ಶತಕ ಗಳಿಸುವ ಅವಕಾಶ ವಂಚಿತಗೊಂಡರು. 2014, ಜನವರಿ 16ರಂದು ಪಾಕಿಸ್ತಾನದ ವಿರುದ್ಧ ತನ್ನ ಚೊಚ್ಚಲ ಟೆಸ್ಟ್ ನಲ್ಲಿ 95 ರನ್ ಗಳಿಸಿದ್ದ ಅವರು ಮೊದಲ ಶತಕ ವಂಚಿತಗೊಂಡಿದ್ದರು.
ಎರಡನೆ ದಿನದಾಟದಂತ್ಯಕ್ಕೆ 54 ರನ್ ಗಳಿಸಿದ್ದ ಮಾಜಿ ನಾಯಕ ಆ್ಯಂಜೆಲೊ ಮ್ಯಾಥ್ಯೂಸ್ ಮತ್ತು 6 ರನ್ ಗಳಿಸಿದ್ದ ದಿಲ್‌ರುವಾನ್ ಪೆರೆರಾ ಇಂದು ಬ್ಯಾಟಿಂಗ್ ಮುಂದುವರಿಸಿ 6ನೆ ವಿಕೆಟ್‌ಜೊತೆಯಾಟದಲ್ಲಿ 62 ರನ್ ಸೇರಿಸಿದರು. ತಂಡದ ಸ್ಕೋರ್‌ನ್ನು 205ಕ್ಕೆ ಏರಿಸಿದರು. ಪೆರೆರಾ 64 ಎಸೆತಗಳಲ್ಲಿ 4 ಬೌಂಡರಿ ಮತ್ತು 3 ಸಿಕ್ಸರ್ ನೆರವಿನಲ್ಲಿ ಐದನೆ ಅರ್ಧಶತಕ ದಾಖಲಿಸಿದರು.
ಮ್ಯಾಥ್ಯೂಸ್ 83 ರನ್(130ಎ, 11ಬೌ,1ಸಿ) ಗಳಿಸಿ ಜಡೇಜಗೆ ವಿಕೆಟ್ ಒಪ್ಪಿಸಿದರು. ಅನಂತರ ಜಡೇಜ ನಾಯಕ ರಂಗನ ಹೆರಾತ್ (9) ಮತ್ತು ಲಹಿರು ಕುಮಾರ್(2) ಅವರನ್ನು ಪೆವಿಲಿಯನ್‌ಗಟ್ಟಿ ಲಂಕಾದ ಇನಿಂಗ್ಸ್ ಮುಗಿಸಿದರು. 10 ರನ್ ಗಳಿಸಿದ ನುವಾನ್ ಪ್ರದೀಪ್ ಅವರನ್ನು ಬೌಲ್ಡ್ ಮಾಡಿದ ಹಾರ್ದಿಕ್ ಪಾಂಡ್ಯ ಟೆಸ್ಟ್ ಕ್ರಿಕೆಟ್‌ನಲ್ಲಿ ಚೊಚ್ಚಲ ವಿಕೆಟ್ ಪಡೆದರು.
ಭಾರತದ ರವೀಂದ್ರ ಜಡೇಜ 67ಕ್ಕೆ 3, ಮುಹಮ್ಮದ್ ಶಮಿ 45ಕ್ಕೆ 2ವಿಕೆಟ್, ಉಮೇಶ್ ಯಾದವ್, ರವಿಚಂದ್ರನ್ ಅಶ್ವಿನ್ ಮತ್ತು ಹಾರ್ದಿಕ್ ಪಾಂಡ್ಯ ತಲಾ 1 ವಿಕೆಟ್ ಪಡೆದರು.
ಶತಕ ವಂಚಿತ ಮುಕುಂದ್
ಟೀಮ್ ಇಂಡಿಯಾದ ಆರಂಭಿಕ ದಾಂಡಿಗ ಅಭಿನವ್ ಮುಕುಂದ್ ಅವರು ಶ್ರೀಲಂಕಾ ವಿರುದ್ಧದ ಮೊದಲ ಕ್ರಿಕೆಟ್ ಟೆಸ್ಟ್‌ನ ಎರಡನೆ ಇನಿಂಗ್ಸ್ ನಲ್ಲಿ ಮೂರನೆ ದಿನದಾಟದಂತ್ಯಕ್ಕೆ ಔಟಾಗುವುದರೊಂದಿಗೆ ಶತಕ ವಂಚಿತಗೊಂಡಿದ್ದಾರೆ.
7ನೆ ಟೆಸ್ಟ್‌ನಲ್ಲಿ ಆಡುವ ಅವಕಾಶ ಪಡೆದಿದ್ದ ತಮಿಳುನಾಡಿನ ಮುಕುಂದ್ ಅವರು ಚೊಚ್ಚಲ ಶತಕ ದಾಖಲಿಸುವ ಹಾದಿಯಲ್ಲಿ ಹೆಜ್ಜೆ ಇರಿಸಿದ್ದರು. ಆದರೆ ಅವರು 81 ರನ್ ಗಳಿಸಿ ಗುಣತಿಲಕ ಎಸೆದಲ್ಲಿ ಎಲ್‌ಬಿಡಬ್ಲು ಬಲೆಗೆ ಬಿದ್ದರು.
ಲೋಕೇಶ್ ರಾಹುಲ್ ಅನುಪಸ್ಥಿತಿಯಲ್ಲಿ ತಂಡದಲ್ಲಿ ಅವಕಾಶ ಪಡೆದಿದ್ದ 27ರ ಹರೆಯದ ಅಗ್ರಸರದಿಯ ದಾಂಡಿಗ ಮುಕುಂದ್ ಅವರು ನಾಯಕ ವಿರಾಟ್ ಕೊಹ್ಲಿ ಜೊತೆ ಮೂರನೆ ವಿಕೆಟ್‌ಗೆ 133 ರನ್‌ಗಳ ಜೊತೆಯಾಟ ನೀಡಿದರು. 2011, ಜೂನ್ 20ರಂದು ವಿಂಡೀಸ್ ಪ್ರವಾಸ ಸರಣಿಯಲ್ಲಿ ಮೊದಲ ಟೆಸ್ಟ್ ಆಡಿದ್ದ ಮುಕುಂದ್‌ಗೆ ಅವಕಾಶ ಸಿಕ್ಕಿದ್ದು ಕಡಿಮೆ. ವಿಂಡೀಸ್ ವಿರುದ್ಧ ಜೂನ್ 28ರಂದು ತನ್ನ ಎರಡನೆ ಟೆಸ್ಟ್‌ನ ಮೊದಲ ಇನಿಂಗ್ಸ್‌ನಲ್ಲಿ 2 ರನ್‌ನಿಂದ ಅರ್ಧ ಶತಕ ವಂಚಿತಗೊಂಡಿದ್ದರು.
2011ಜುಲೈ 6ರಂದು ರೊಸೌವ್‌ನಲ್ಲಿ ವಿಂಡೀಸ್ ವಿರುದ್ಧ ಮೂರನೆ ಟೆಸ್ಟ್‌ನಲ್ಲಿ 62 ರನ್ ಗಳಿಸುವ ಮೂಲಕ ಚೊಚ್ಚಲ ಅರ್ಧಶತಕ ಗಳಿಸಿದರು. ಆ ಬಳಿಕ ಜುಲೈ 21ರಂದು ಇಂಗ್ಲೆಂಡ್ ಪ್ರವಾಸದಲ್ಲಿ ಕ್ರಿಕೆಟ್ ಕಾಶಿ ಲಾರ್ಡ್ಸ್‌ನಲ್ಲಿ 1ರನ್‌ನಿಂದ ಅರ್ಧಶತಕ ವಂಚಿತಗೊಂಡಿದ್ದರು. ಇಂಗ್ಲೆಂಡ್ ವಿರುದ್ಧ ಜುಲೈ 29ರಂದು ಎರಡನೆ ಟೆಸ್ಟ್‌ನಲ್ಲಿ 3 ರನ್ ಗಳಿಸಿ ಔಟಾಗಿದ್ದ ಮುಕುಂದ್ ಬಳಿಕ ತಂಡಕ್ಕೆ ಆರು ವರ್ಷಗಳ ಬಳಿಕ ಮರಳಿದ್ದರು.
2016, ಮಾರ್ಚ್ 4ರಂದು ಬೆಂಗಳೂರಿನಲ್ಲಿ ಆಸ್ಟ್ರೇಲಿಯ ವಿರುದ್ಧದ ಟೆಸ್ಟ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡಿದ್ದರೂ ಮೊದಲ ಇನಿಂಗ್ಸ್ ನಲ್ಲಿ ಸೊನ್ನೆ ಸುತ್ತಿದ್ದರು. ಎರಡನೆ ಇನಿಂಗ್ಸ್ ನಲ್ಲಿ 16ರನ್ ಗಳಿಸಿದ್ದರು. ನಾಲ್ಕು ತಿಂಗಳ ಬಳಿಕ ಶ್ರೀಲಂಕಾ ವಿರುದ್ಧ ಮೊದಲ ಟೆಸ್ಟ್‌ನಲ್ಲಿ ಅವಕಾಶ ಗಿಟ್ಟಿಸಿಕೊಂಡ ಮುಕುಂದ್ ಮೊದಲ ಇನಿಂಗ್ಸ್ ನಲ್ಲಿ 12 ರನ್ ಗಳಿಸಿ ಔಟಾಗಿದ್ದರು. ಎರಡನೆ ಇನಿಂಗ್ಸ್‌ನಲ್ಲಿ ಶತಕದ ಹಾದಿಯಲ್ಲಿ ಎಡವಿದ್ದಾರೆ.
ಸ್ಕೋರ್ ಪಟ್ಟಿ
►ಭಾರತ ಮೊದಲ ಇನಿಂಗ್ಸ್ 600
ಶ್ರೀಲಂಕಾ ಮೊದಲ ಇನಿಂಗ್ಸ್ 78.3 ಓವರ್‌ಗಳಲ್ಲಿ 291/9
ಡಿ.ಕರುಣ ರತ್ನೆ ಎಲ್‌ಬಿಡಬ್ಲು ಬಿ ಉಮೇಶ್02
ಉಪುಲ್ ತರಂಗ ರನೌಟ್ (ಮುಕುಂದ್/ಸಹಾ) 64
ಡಿ.ಗುಣತಿಲಕ ಸಿ ಧವನ್ ಬಿ ಶಮಿ16
ಕುಶಾಲ್ ಮೆಂಡಿಸ್ ಸಿ ಧವನ್ ಬಿ ಶಮಿ00
ಎ.ಮ್ಯಾಥ್ಯೂಸ್ ಸಿ ಕೊಹ್ಲಿ ಬಿ ಜಡೇಜ83
ಡಿಕ್ವೆಲ್ಲಾ ಸಿ ಮುಕುಂದ್ ಬಿ ಅಶ್ವಿನ್08
ದಿಲ್ರುವಾನ್ ಪೆರೆರಾ ಔಟಾಗದೆ 92
ರಂಗನ ಹೆರಾತ್ ಸಿ ರಹಾನೆ ಬಿ ಜಡೇಜ09
ನುವಾನ್ ಪ್ರದೀಪ್ ಬಿ ಪಾಂಡ್ಯ10
ಲಹಿರು ಕುಮಾರ ಬಿ ಜಡೇಜ02
ಅಸೆಲಾ ಗುಣರತ್ನೆ ಗಾಯಗೊಂಡು ನಿವೃತ್ತಿ-
ಇತರೆ05
►ವಿಕೆಟ್ ಪತನ: 1-7, 2-68, 3-68, 4-125, 5-143, 6-205, 7-241, 8-280, 9-291
►ಬೌಲಿಂಗ್ ವಿವರ
ಮುಹಮ್ಮದ್ ಶಮಿ12.0-2-45-2
ಉಮೇಶ್ ಯಾದವ್ 14.0-1-78-1
ಆರ್.ಅಶ್ವಿನ್27.0-5-84-1
ಆರ್.ಜಡೇಜ22.3-3-67-3
ಹಾರ್ದಿಕ್ ಪಾಂಡ್ಯ03.0-0-13-1
►ಭಾರತ ಎರಡನೆ ಇನಿಂಗ್ಸ್ 46.3 ಓವರ್‌ಗಳಲ್ಲಿ 189/3
ಶಿಖರ್ ಧವನ್ ಸಿ ಡಿ ಸಿಲ್ವ ಬಿ ಪೆರೆರಾ 14
ಅಭಿನವ್ ಮುಕುಂದ್ ಎಲ್‌ಬಿಡಬ್ಲು ಬಿ ಗುಣತಿಲಕ 81
ಚೇತೇಶ್ವರ ಪೂಜಾರ ಸಿ ಮೆಂಡಿಸ್ ಬಿ ಕುಮಾರ 15
ವಿರಾಟ್ ಕೊಹ್ಲಿ ಔಟಾಗದೆ76
ಇತರೆ3
►ವಿಕೆಟ್ ಪತನ: 1-19, 2-56, 3-189
►ಬೌಲಿಂಗ್ ವಿವರ
ನುವಾನ್ ಪ್ರದೀಪ್10.0-2-44-0
ದಿಲ್ರುವಾನ್ ಪೆರೆರಾ12.0-0-42-1
ಲಹಿರು ಕುಮಾರ್11.0-1-53-1
ರಂಗನ ಹೆರಾತ್09.0-0-34-0
ಧನುಷ್ಕ ಗುಣತಿಲಕ04.3-0-15-1







