ಪ್ರೊಕಬಡ್ಡಿ: ಪಾಟ್ನಾ ಪೆರಟ್ಸ್ ಗೆ ಪರ್ದಿಪ್ ನಾಯಕ

ಹೊಸದಿಲ್ಲಿ, ಜು.28: ಪ್ರೊ ಕಬಡ್ಡಿಯ ಹಾಲಿ ಚಾಂಪಿಯನ್ ಪಾಟ್ನಾ ಪೈರಟ್ಸ್ ತಂಡದ ನಾಯಕನಾಗಿ ಪರ್ದಿಪ್ ನರ್ವಾಲ್ ಆಯ್ಕೆಯಾಗಿದ್ದಾರೆ.
ನಾಲ್ಕನೆ ಆವೃತ್ತಿಯ ಕಬಡ್ಡಿ ಲೀಗ್‌ನಲ್ಲಿ ಪಾಟ್ನಾ ತಂಡ ಅತ್ಯುತ್ತಮ ಪ್ರದರ್ಶನ ನೀಡಲು ನರ್ವಾಲ್ ಮಹತ್ವದ ಪಾತ್ರವಹಿಸಿದ್ದರು.
38 ಪಂದ್ಯಗಳಲ್ಲಿ 190 ಯಶಸ್ವಿ ರೈಡ್ ನಡೆಸಿರುವ ಪರ್ದೀಪ್ 263 ಅಂಕಗಳನ್ನು ಗಳಿಸಿದ್ದರು. ಪಾಟ್ನಾ 3 ಹಾಗೂ 4ನೆ ಆವೃತ್ತಿಯ ಲೀಗ್‌ನಲ್ಲಿ ನರ್ವಾಲ್‌ರ ಅನುಭವವನ್ನು ಹೆಚ್ಚು ನೆಚ್ಚಿಕೊಂಡಿತ್ತು. ಜು.29 ರಂದು ಹೈದರಾಬಾದ್‌ನಲ್ಲಿ ತೆಲುಗು ಟೈಟಾನ್ಸ್ ತಂಡವನ್ನು ಎದುರಿಸುವ ಮೂಲಕ ಈ ವರ್ಷದ ಲೀಗ್‌ನಲ್ಲಿ ತನ್ನ ಅಭಿಯಾನ ಆರಂಭಿಸಲಿದೆ.
57 ಪಂದ್ಯಗಳನ್ನಾಡಿರುವ ಇನ್ನೋರ್ವ ಕಬಡ್ಡಿ ಸ್ಟಾರ್ ವಿಶಾಲ್ ಮಾನೆ ತಂಡದ ಉಪ ನಾಯಕನಾಗಿ ಆಯ್ಕೆಯಾಗಿದ್ದಾರೆ. ಪಾಟ್ನಾ ತಂಡದಲ್ಲಿ ಭಾರತದ 16 ಹಾಗೂ ವಿದೇಶದ ಇಬ್ಬರು ಆಟಗಾರರಿದ್ದಾರೆ. ಪರ್ದಿಪ್ ಸಿಂಗ್, ವಿಶಾಲ್ ಮಾನೆ, ವಿಜಯ್, ಪರ್ವೀಣ್ ಬಿರ್ವಾಲ್, ಅರವಿಂದ್ ಕುಮಾರ್ ಸಚಿನ್ ಶಿಂಗ್ಡಾ, ಮೋನು, ಜೈದೀಪ್, ಮನೀಶ್, ಸತೀಶ್, ಸಂದೀಪ್, ವಿರೇಂದರ್ ಸಿಂಗ್, ವಿಶಾಸ್, ವಿಷ್ಣು, ವಿನೋದ್ ಕುಮಾರ್ ಪ್ರಮುಖ ಆಟಗಾರರಾಗಿದ್ದಾರೆ. ಭಾರತದ ಖ್ಯಾತ ಹಾಗೂ ಹಿರಿಯ ಕೋಚ್ ಶ್ರೀರಾಮ್ ಮೆಹರ್ ಸಿಂಗ್ ತಂಡಕ್ಕೆ ಮಾರ್ಗದರ್ಶನ ನೀಡಲಿದ್ದಾರೆ.







