ಗೊಲ್ಲರಹಟ್ಟಿಗಳಿಗೆ ಮೂಲಸೌಕರ್ಯಕ್ಕೆ ಕಾಡುಗೊಲ್ಲರ ಯುವಸೇನೆ ಒತ್ತಾಯ

ತುಮಕೂರು.ಜು.28: ಕಾಡುಗೊಲ್ಲರ ಹಟ್ಟಿಗಳಿಗೆ ಮೂಲಭೂತ ಸೌಕರ್ಯ ಒದಗಿಸಬೇಕು, ರಾಜಕೀಯವಾಗಿ ಸ್ಥಳೀಯ ಯುವಕರಿಗೆ ಅವಕಾಶ ನೀಡಬೇಕು, ಕಾಡುಗೊಲ್ಲರ ಕುಲಶಾಸ್ತ್ರ ಅಧ್ಯಯನಕ್ಕೆ ಅವಕಾಶ ಕಲ್ಪಿಸಬೇಕು ಎಂದು ಕಾಡುಗೊಲ್ಲರ ಯುವಸೇನೆ ರಾಜ್ಯ ಸರಕಾರವನ್ನು ಒತ್ತಾಯಿಸಿದೆ.
ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ರಾಜ್ಯ ಕಾಡುಗೊಲ್ಲರ ಯುವಸೇನೆ ರಾಜ್ಯಾಧ್ಯಕ್ಷ ಒಕ್ಕೋಡಿ ರಮೇಶ್, ಸಂಶೋಧಕ ಜಯರಾಂ, ಉಪಾಧ್ಯಕ್ಷ ನಾಗರಾಜು, ರಾಜ್ಯ ಕಾರ್ಯಾಧ್ಯಕ್ಷ ಹನುಮಂತರಾಜು, ರಾಜ್ಯ ಸಂಘಟನಾ ಕಾರ್ಯದರ್ಶಿ ಮಹಾಲಿಂಗಯ್ಯ ಮತ್ತಿತರರು, ಇಂದಿಗೂ ಬಡುಕಟ್ಟು ಸ್ವರೂಪ ಹೊಂದಿರುವ ಕಾಡುಗೊಲ್ಲರನ್ನು,ಯಾದವ ಸಮುದಾಯದ ಇತರೆಯವರು ಕಾಡುಗೋಲ್ಲ-ಊರುಗೊಲ್ಲ-ಯಾದವ ಒಂದೇ ಎಂಬ ಹೇಳಿಕೆ ನೀಡುವ ಮೂಲಕ ಸರಕಾರವನ್ನು ದಾರಿ ತಪ್ಪಿಸುವ ಕೆಲಸ ಮಾಡುತ್ತಿದ್ದು, ಈ ಮೂರು ಪಂಗಡಗಳ ಆಚಾರ-ವಿಚಾರ, ಸಂಪ್ರದಾಯಗಳ ಪಾಲನೆಯಲ್ಲಿ ಸಾಕಷ್ಟು ಬಿನ್ನತೆಯಿದ್ದು, ಹಲವಾರು ಸಂಶೋಧನೆಗಳು ಇದನ್ನು ದೃಢಪಡಿಸಿವೆ ಎಂದರು.
ಕಾಡುಗೊಲ್ಲ ಸಮುದಾಯದ ಶೇ70ರಷ್ಟು ಜನರು ಇಂದಿಗೂ ಕುರಿ, ಮೇಕೆ ಸಾಕಿಕೊಂಡು ಊರೂರು ಅಲೆಯುತ್ತಲೇ ಬದುಕುತ್ತಿದ್ದಾರೆ. ಆದರೆ ಗೊಲ್ಲರ ಹೆಸರಿನಲ್ಲಿ ಈಗಾಗಲೇ ರಾಜಕೀಯವಾಗಿ, ಆರ್ಥಿಕವಾಗಿ ಬಲಿತ ಕೆಲ ಊರುಗೊಲ್ಲರು, ಕಾಡುಗೊಲ್ಲರು ನಮ್ಮಿಂದ ದೂರವಾದರೆ ಎಲ್ಲಿ ನಮಗೆ ಸಿಗುತ್ತಿರುವ ಮೀಸಲಾತಿಯ ಸೌಲಭ್ಯ ಕೈತಪ್ಪುತ್ತದೆ ಎಂಬ ಭಯದಲ್ಲಿ ಕಾಡುಗೊಲ್ಲ-ಊರುಗೊಲ್ಲ ಒಂದೇ ಎಂಬ ವಾದ ಮಂಡಿಸುತ್ತಿದ್ದಾರೆ. 40 ವರ್ಷಗಳಿಂದ ರಾಜಕೀಯ ಅಧಿಕಾರ ಅನುಭವಿಸಿ ಇತ್ತೀಚಗೆ ನಿಧನರಾದ ವ್ಯಕ್ತಿಯೊಬ್ಬರು, ಅವರ ರಾಜಕೀಯ ಜೀವನದ ಒಂದು ದಿನವೂ ಒಂದು ಗೊಲ್ಲರ ಹಟ್ಟಿಗಳಿಗೆ ಭೇಟಿ ನೀಡಿ ಅವರ ಕಷ್ಟ, ಸುಖ ವಿಚಾರಿಸಲಿಲ್ಲ. ಇಂದಿಗೂ ಗೊಲ್ಲರಹಟ್ಟಿಗಳಲ್ಲಿ ವಿದ್ಯುತ್ ಇಲ್ಲ, ರಸ್ತೆ ಇಲ್ಲ, ಶೌಚಾಲಯಗಳಿಲ್ಲದೆ ಶೋಚನೀಯವಾಗಿ ಬದುಕುತ್ತಿದ್ದಾರೆ. ಇದು ಯಾವುದೇ ರಾಜಕಾರಣಿಗಳ ಕಣ್ಣಿಗೂ ಕಂಡಿಲ್ಲವೆಂದು ತೀವ್ರ ಅಸಮಾಧಾನ ವ್ಯಕ್ತಪಡಿಸಿದರು.
ರಾಜ್ಯದಲ್ಲಿರುವ ಸರಕಾರ ನಮ್ಮ ಸಮುದಾಯಕ್ಕೆ ಸೇರಿದ ಜಯಮ್ಮ ಬಾಲರಾಜು ಅವರನ್ನು ಗುರುತಿಸಿ ವಿಧಾನಪರಿಷತ್ ಸದಸ್ಯರನ್ನಾಗಿ ಮಾಡಿದ್ದಾರೆ.ಇದುವರೆಗೂ ಅವರು ರಾಜ್ಯದಾದ್ಯಂತ ಗೊಲ್ಲರಹಟ್ಟಿಗಳಿಗೆ ಪ್ರವಾಸ ಮಾಡಿ ಸಂಘಟಿಸುವ ಕೆಲಸ ಮಾಡಿಲ್ಲ. ಅಲ್ಲದೆ ಚುನಾವಣೆ ಹತ್ತಿರವಾಗುತ್ತಿರುವ ಈ ಸಂದರ್ಭದಲ್ಲಿ ಗುಬ್ಬಿ, ಚಿಕ್ಕನಾಯಕನಹಳ್ಳಿ, ಶಿರಾ ವಿಧಾನಸಭಾ ಕ್ಷೇತ್ರಗಳಲ್ಲಿ ಬೆಂಗಳೂರಿನ ಕೆಲ ಬಲಿತ ಗೊಲ್ಲರು, ನಿವೃತ್ತ ಅಧಿಕಾರಿಗಳು, ಸಮುದಾಯದ ಹೆಸರಿನಲ್ಲಿ ಸ್ಪರ್ಧೆಗೆ ಇಳಿಯಲು ವೇದಿಕೆ ಸಿದ್ದಗೊಳಿಸುತ್ತಿದ್ದಾರೆ. ಹಣ ಇಲ್ಲದ ಸ್ಥಳೀಯ ಗೊಲ್ಲರು ಇವರ ಮುಂದೆ ಕೈಕಟ್ಟಿ ನಿಲ್ಲಬೇಕಾಗಿದೆ. ಆದ್ದರಿಂದ ಈ ಬಾರಿ ಎಲ್ಲೆಲ್ಲಿ ಜನಾಂಗದ ಮತಗಳು ಹೆಚ್ಚಾಗಿವೆಯೋ ಆ ಕ್ಷೇತ್ರಗಳಲ್ಲಿ ಕಾಡುಗೊಲ್ಲರ ಯುವಸೇನೆ ತನ್ನ ಅಭ್ಯರ್ಥಿಗಳನ್ನೇ ಕಣಕ್ಕೆ ಇಳಿಸಲಿದೆ ಎಂದು ಮುಖಂಡರು ಸ್ಪಷ್ಟಪಡಿಸಿದರು.
ಎಸ್.ಟಿ.ಗೆ ಸೇರಿಸಲು ಊರುಗೊಲ್ಲರ ವಿರೋಧ: ಕಾಡುಗೊಲ್ಲರನ್ನು ಬುಡಕಟ್ಟು ಆಧಾರದಲ್ಲಿ ಅವರನ್ನು ಪರಿಶಿಷ್ಟ ಪಂಗಡಕ್ಕೆ ಸೇರಿಸಬೇಕೆಂಬ ಹಲವಾರು ಹೋರಾಟಗಳನ್ನು ಹಿಂದಿನಿಂದಲೂ ಮಾಡಿಕೊಂಡು ಬರಲಾಗುತ್ತಿದೆ. ಈ ಬಗ್ಗೆ ಸರಕಾರ ಕೂಡ ಕೇಂದ್ರಕ್ಕೆ ವರದಿ ಸಲ್ಲಿಸಿದೆ. ಆದರೆ ಕೆಲ ಬೆಂಗಳೂರಿನ ಅರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ರಾಜಕೀಯವಾಗಿ ಸದೃಢರಾಗಿರುವ ಗೊಲ್ಲರು, ಕಾಡುಗೊಲ್ಲರನ್ನು ಎಸ್.ಟಿ. ಜಾತಿ ಪಟ್ಟಿಗೆ ಸೇರದಂತೆ ತರಕಾರು ಅರ್ಜಿ ಹಾಕಿದ್ದಾರೆ. ಇದರಿಂದ ಬುಡಕಟ್ಟು ಸ್ವರೂಪದಲ್ಲಿಯೇ ಸಾವಿರಾರು ವರ್ಷಗಳಿಂದ ಬದುಕುತ್ತಿರುವ ಸಮುದಾಯಕ್ಕೆ ಬಹಳ ದೊಡ್ಡ ನಷ್ಟವಾಗಿದೆ. ಕುಲಶಾಸ್ತ್ರ ಅಧ್ಯಯನಕ್ಕೆ ಅವಕಾಶ ನೀಡದೆ ವಂಚಿಸಲಾಗಿದೆ. ಕೂಡಲೇ ಸರಕಾರ ಕುಲಶಾಸ್ತ್ರ ಅಧ್ಯಯನಕ್ಕೆ ಅವಕಾಶ ನೀಡಬೇಕು. ಗೊಲ್ಲರಹಟ್ಟಿಗಳಿಗೆ ಮೂಲಭೂತ ಸೌಕರ್ಯ ಒದಗಿಸುವುದರ ಜೊತೆಗೆ, ಕಂದಾಯ ಗ್ರಾಮಗಳಾಗಿ ಘೋಷಿಸಬೇಕು, ರಾಜಕೀಯವಾಗಿ ವಲಸೆಯನ್ನು ತಡೆಯುವ ಪ್ರಯತ್ನ ಮಾಡಬೇಕೆಂದು ಮುಖಂಡರು ಒತ್ತಾಯಿಸಿದರು.







