ಪೊಲೀಸ್ ಠಾಣೆಗಳಲ್ಲಿ ಜನಸಾಮಾನ್ಯರಿಗೆ ನ್ಯಾಯ ಸಿಗುತ್ತಿಲ್ಲ: ಶಾಸಕ ಬಿ.ಬಿ.ನಿಂಗಯ್ಯ
ಮೂಡಿಗೆರೆ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆ

ಮೂಡಿಗೆರೆ, ಜು.29: ಎಂಎಲ್‌ಎ, ಎಂಎಲ್‌ಸಿ, ಜಿ.ಪಂ. ಹಾಗೂ ತಾ.ಪಂ.ಗೆ ಬಂದ ಯಾವುದೇ ಅನುದಾನವಾದರೂ ಸರಿ. ನನ್ನ ಕ್ಷೇತ್ರಕ್ಕೆ ಬಂದ ಹಣದಲ್ಲಿ ಒಂದು ರೂಪಾಯಿ ಕೂಡ ದುರುಪಯೋಗವಾಗಬಾರದು. ಅದನ್ನು ಸಮರ್ಪಕವಾಗಿ ಬಳಸಿಕೊಂಡು ಜನರಿಗೆ ಅನುಕೂಲವಾಗುವಂತೆ ಕೆಲಸ ಮಾಡಬೇಕೆಂದು ಶಾಸಕ ಬಿ.ಬಿ.ನಿಂಗಯ್ಯ ಅಧಿಕಾರಿಗಳಿಗೆ ತರಾಟೆಗೆ ತೆಗೆದುಕೊಂಡರು.
ಅವರು ಶನಿವಾರ ತಾಪಂ ಸಭಾಂಗಣದಲ್ಲಿ ತ್ರೈಮಾಸಿಕ ಕೆಡಿಪಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಾರ್ವಜನಿಕರ ಹಣವನ್ನು ದುಂದುವೆಚ್ಚ ಮಾಡಿದರೆ ತಾನು ಸುಮ್ಮನೆ ಇರೋದಿಲ್ಲ. ಕೆಆರ್‌ಐಡಿಎಲ್ ನಿಗಮದ ಕೆಲಸಗಳು ಯಾವುದೇ ಗುಣಮಟ್ಟದ್ದಾಗಿರುವುದಿಲ್ಲವೆಂದು ಅನೇಕ ದೂರುಗಳು ಕೇಳಿ ಬರುತ್ತಿದೆ. ತಾಲೂಕಿನಲ್ಲಿ ನಡೆದಿರುವ ಶುದ್ಧಗಂಗಾ ಘಟಕದ ಕಾಮಗಾರಿಗಳಿಗೆ ಸಂಪೂರ್ಣವಾಗಿ ಕಳಪೆಯಾಗಿದೆ. ಶುದ್ಧಗಂಗಾ ಮಾತ್ರವಲ್ಲ, ರಸ್ತೆಗಳು ಕೂಡ ಕಳಪೆಯಾಗಿವೆ. ಈ ನಿಗಮದ ಬಗ್ಗೆ ಸಾರ್ವಜನಿಕರಲ್ಲಿ ಒಳ್ಳೆಯ ಅಭಿಪ್ರಾಯವೇ ಇಲ್ಲವಂತಾಗಿದೆ. ಕೆಆರ್‌ಐಡಿಎಲ್ ನಿಗಮದಿಂದ ಮಾಡಿರುವ ಶುದ್ಧಗಂಗಾ ಘಟಕದ ಕಾಮಗಾರಿ ಬಗ್ಗೆ ಸಂಪೂರ್ಣ ವರದಿಯನ್ನು ನೀಡುವಂತೆ ಜಿ.ಪಂ. ಎಇಇ ಚಂದ್ರಶೇಖರ್ ಅವರಿಗೆ ಸೂಚಿಸಿದರು.
ದಿಮ್ಮಿ ನೋಡಿ ಸೌದೆ ಹೊಡೆಯಿರಿ ಎಂಬುದು ಪೊಲೀಸ್ ಇಲಾಖೆಯಲ್ಲಿ ನಡೆಯುತ್ತಿದೆ. ಇದು ಎಸ್‌ಪಿ ಅವರಿಗೂ ಗಮನಕ್ಕೆ ಬಂದಿದೆ. ಪೊಲೀಸ್ ಠಾಣೆಯಲ್ಲಿ ಜನಸಾಮಾನ್ಯರ ಅಭಿಪ್ರಾಯವನ್ನೇ ಕೇಳುವುದಿಲ್ಲ. ಇದು ಬಣಕಲ್ ಮತ್ತು ಗೋಣಿಬೀಡು ಠಾಣೆಯಲ್ಲಿ ಹೆಚ್ಚಾಗಿ ನಡೆಯುತ್ತಿದೆ. ಪೊಲೀಸರೆಂದರೆ ಸಾಮಾನ್ಯ ಜನರಿಗೆ ಮಾತ್ರ ಭಯ ಮೂಡಿಸಲಾಗುತ್ತಿದೆ. ಇಂತಹ ಭಯ ಪ್ರಭಾವಿಗಳ ಮೇಲೆಯೂ ಮೂಡುವಂತಾಗಬೇಕು.
ಜಮೀನು ವಿಚಾರಗಳಲ್ಲಿ ಪ್ರಭಾವಿಗಳ ಪರ ವಹಿಸುತ್ತಿರುವುದರಿಂದ ಜನಸಾಮಾನ್ಯರಿಗೆ ನ್ಯಾಯ ಸಿಗದಂತಾಗಿದೆ. ಅಪರಾಧಿಗಳ ಜೊತೆಗೆ ಕೈ ಜೋಡಿಸುವುದನ್ನು ಮೊದಲು ಬಿಡಬೇಕು. ನ್ಯಾಯಯುತವಾಗಿ ಕೆಲಸ ಮಾಡಬೇಕು. ಪೊಲೀಸರ ಜೀವನ ಕಲ್ಲಪ್ಪ ಹಂಡಿಬಾಗ್ ಪ್ರಕರಣವಾದಂತೆ ಆಗಬಾರದು ಎಂದ ಅವರು, ಪೊಲೀಸ್ ಇಲಾಖೆ ತುಂಬಾ ವೀಕ್ ಆಗಿದ್ದು, ಪೊಲೀಸರ ಮೇಲೆ ವಿಶ್ವಾಸವೇ ಜನಸಾಮಾನ್ಯರಿಗೆ ಇಲ್ಲದಂತಾಗಿದೆ. ಇದನ್ನು ಮೊದಲು ಸರಿಪಡಿಸಿಕೊಳ್ಳಬೇಕೆಂದು ಸಿಪಿಐ ಜಗದೀಶ್‌ಗೆ ಸೂಚಿಸಿದರು.
ತಾಪಂ ಅಧ್ಯಕ್ಷ ಕೆ.ಸಿ.ರತನ್ ಮಾತನಾಡಿ, ಎಂಜಿನಿಯರ್‌ಗಳು ಗುತ್ತಿಗೆದಾರರು ಹೇಳಿದಂತೆ ಕೆಲಸ ಮಾಡಲು ಸರಕಾರ ನಿಯೋಜನೆ ಮಾಡಿಲ್ಲ. ಕ್ರಿಯಾ ಯೋಜನೆಯ ರೀತಿಯಲ್ಲಿಯೇ ಕಾರ್ಯ ನಿರ್ವಹಿಸಬೇಕು. ನಾಲ್ಕು ವರ್ಷದ ಹಿಂದೆ ಆಗಬೇಕಿದ್ದ ಕಾಮಗಾರಿಗಳು ಈ ಸಭೆಯಲ್ಲಿ ಚರ್ಚೆ ನಡೆಯುತ್ತದೆ ಎಂದರೆ ದುರಂತ. ಜನರಿಗೆ ಉತ್ತರ ಕೊಟ್ಟು ಕೊಟ್ಟು ಸಾಕಾಗಿ ಹೋಗಿದೆ. ಹಳೆ ಕೆಲಸಗಳನ್ನು ಶೀಘ್ರವಾಗಿ ಮುಗಿಸಬೇಕೆಂದು ಸಂಬಂಧಿಸಿದ ಇಲಾಖೆ ಅಧಿಕಾರಿಗಳಿಗೆ ತಿಳಿಸಿದರು.







