ಶಾಶ್ವತ ನೀರಾವರಿ ಯೋಜನೆ ವರದಿಯನ್ನು ಮಂಡಿಸಲು ಸಿಎಂ ಸಿದ್ದರಾಮಯ್ಯ ಸೂಚನೆ: ದತ್ತ
ಕಡೂರು, ಜು. 29: ತಾಲೂಕಿನ ಕೆರೆಗಳನ್ನು ತುಂಬಿಸುವ ಶಾಶ್ವತ ನೀರಾವರಿ ಯೋಜನೆಯ ವಿಸೃತ ವರದಿಯನ್ನು ನೀರಾವರಿ ನಿಗಮ ಮಂಡಳಿಯ ಸಭೆಯಲ್ಲಿ ಮಂಡಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚಿಸಿದ್ದಾರೆ ಎಂದು ಶಾಸಕ ವೈ.ಎಸ್.ವಿ. ದತ್ತ ತಿಳಿಸಿದರು.
ಅವರು ಶನಿವಾರ ಪಟ್ಟಣದ ಜೆಡಿಎಸ್ ಪಕ್ಷದ ಕಛೇರಿಯಲ್ಲಿ ಕರೆದಿದ್ದ ಪತ್ರಿಕಾಗೋಷ್ಟಿಯಲ್ಲಿ ಮಾತನಾಡುತ್ತಾ ತಾಲೂಕಿನ ಮದಗದಕೆರೆ, ವಿಷ್ಣು ಸಮುದ್ರಕೆರೆ ಸೇರಿದಂತೆ ಇತರೆ ಕೆರೆಗಳನ್ನು ತುಂಬಿಸಲು ತುಂಗಾನದಿಯ ಶಿವಮೊಗ್ಗ ವಲಯ ವಿಭಾಗದ ಮುಖ್ಯ ಅಭಿಯಂತರರ ಆಡಳಿತಾತ್ಮಕ ಅನುಮೋದನೆಗೆ ಶಿಫಾರಸ್ಸು ಪತ್ರವನ್ನು ಸರ್ಕಾರಕ್ಕೆ ನೀಡಲಾಗಿದೆ. ಈ ಯೋಜನೆಯ ಅನುಮೋದನೆಗಾಗಿ ತಾವು ಕಳೆದ ಹಲವು ದಿನಗಳಿಂದ ಹೋರಾಟ ಮಾಡುತ್ತಿದ್ದೇನೆ. ನೀರಾವರಿ ನಿಗಮ ಮಂಡಳಿ ಸಭೆಯಲ್ಲಿ ಚರ್ಚೆಗೆ ತರಲು ಮುಖ್ಯಮಂತ್ರಿಗಳು ವ್ಯವಸ್ಥಾಪಕ ನಿರ್ದೇಶಕರಿಗೆ ಸೂಚಿಸಿದ್ದಾರೆ ಎಂದರು.
ಕರ್ನಾಟಕ ನೀರಾವರಿ ನಿಗಮದ ವತಿಯಿಂದ ಭದ್ರಾ ಮೇಲ್ದಂಡೆ ಯೋಜನೆಗೆ 32 ಕೆರೆ ತುಂಬಿಸಲು ರೂ. 175 ಕೋಟಿ ಅನುದಾನ ತರುವಲ್ಲಿ ಕೂಡ ತಮ್ಮ ಪ್ರಯತ್ನವೇ ಹೊರತು ಬೇರೆ ಯಾರ ಪ್ರಯತ್ನವೂ ಇಲ್ಲ. ಮಾಮೂಲಿ ಅನುದಾನವಾದರೆ ಕೇವಲ ಮೂರು ಕೆರೆ ತುಂಬಿಸಲು ರೂ. 2 ಕೋಟಿ ಅನುದಾನ ಬರುತ್ತಿತ್ತು ಎಂದ ಅವರು, ಕೌಟುಂಬಿಕ ಕಾರಣಗಳಿಂದ ಮೊಟಕಾಗಿದ್ದ ತಮ್ಮ ಪಾದಯಾತ್ರೆ ಕಾರ್ಯಕ್ರಮ ಬರುವ ಆ.4ರಿಂದ ಪ್ರಾರಂಭವಾಗಲಿದ್ದು. ಆ.12ರಂದು ಪಾದಯಾತ್ರೆ ಮುಕ್ತಾಯ ಸಮಾರಂಭದಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಹಾಗೂ ಸ್ವಾತಂತ್ರ್ಯ ಹೋರಾಟಗಾರ ದೊರೆಸ್ವಾಮಿ ಅಯ್ಯಂಗಾರ್ ಭಾಗವಹಿಸಲಿದ್ದಾರೆ ಎಂದರು.
ಗೋಷ್ಟಿಯಲ್ಲಿ ಪಕ್ಷದ ಮುಖಂಡರಾದ ಕೋಡಿಹಳ್ಳಿಮಹೇಶ್, ಭಂಡಾರಿಶ್ರೀನಿವಾಸ್, ಕೆ.ಎಸ್. ರಮೇಶ್, ಸೀಗೆಹಡ್ಲು ಹರೀಶ್, ಎಂ. ರಾಜಪ್ಪ, ಪಾತೇನಹಳ್ಳಿ ಚೌಡಪ್ಪ, ಎನ್.ಪಿ. ಮಂಜುನಾಥಪ್ರಸನ್ನ, ಶೂದ್ರ ಶ್ರೀನಿವಾಸ್ ಉಪಸ್ಥಿತರಿದ್ದರು.
ಅಂತರರಾಜ್ಯ ನೀರು ಹಂಚಿಕೆ ನ್ಯಾಯ ಮಂಡಳಿಯಿಂದ ಕಡೂರು ತಾಲೂಕಿಗೆ 1.538 ಟಿ.ಎಂ.ಸಿ ನೀರಿನ ಹಕ್ಕನ್ನು ಕೃಷ್ಣ ಟ್ರಿಬುನಲ್ ಮುಂದೆ ತರುವಲ್ಲಿ ಅಂದಿನ ನೀರಾವರಿ ಸಚಿವ ಎಸ್.ಆರ್. ಬೊಮ್ಮಾಯಿ ಅವರ ಪಾತ್ರ ಬಹು ಮುಖ್ಯವಾಗಿದೆ. ಈ ನೀರು ಹಂಚಿಕೆ ಫಲಶೃತಿಗೆ ಹೆಬ್ಬೆ ತಿರುವು ಯೋಜನೆ ಚರ್ಚೆಯೇ ಕಾರಣ. ನಮಗೆ ಲಭಿಸುವ ನೀರಿನ ಹಕ್ಕು ಆಂಧ್ರಪ್ರದೇಶದ ಬಲ್ಲಾವರಂ, ಗೋದಾವರಿ ತಿರುವು ಯೋಜನೆಯಿಂದ ನಮಗೆ ಈ 1.538 ಟಿಎಂಸಿ ನೀರು ಲಭಿಸಲಿದೆ ಎಂದು ದತ್ತ ಹೇಳಿದರು.







