ಅನುದಾನ ರಹಿತ ಶಾಲೆಗಳನ್ನು ಅನುದಾನ ವ್ಯಾಪ್ತಿಗೆ ಒಳಪಡಿಸುವಂತೆ ಆಗ್ರಹ
ಆ.2 ರಂದು ರಾಜ್ಯಾದ್ಯಂತ ಪ್ರತಿಭಟನೆ
ಬೆಂಗಳೂರು, ಜು.28: ರಾಜ್ಯಾದ್ಯಂತ 1995ರ ನಂತರ ಆರಂಭವಾದ ಅನುದಾನ ರಹಿತ ಕನ್ನಡ ಶಾಲೆಗಳನ್ನು ಅನುದಾನದ ವ್ಯಾಪ್ತಿಗೆ ಒಳಪಡಿಸಬೇಕು ಎಂದು ಆಗ್ರಹಿಸಿ ಆ.2 ರಂದು ಎಲ್ಲ ಜಿಲ್ಲಾಧಿಕಾರಿಗಳ ಕಚೇರಿ ಎದುರು ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಅನುದಾನ ರಹಿತ ಶಾಲಾ-ಕಾಲೇಜುಗಳ ಆಡಳಿತ ಮಂಡಳಿ ಮತ್ತು ನೌಕರರ ಒಕ್ಕೂಟ ತಿಳಿಸಿದೆ.
ನಗರದ ಪ್ರೆಸ್‌ಕ್ಲಬ್‌ನಲ್ಲಿ ಆಯೋಜಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ಪ್ರಧಾನ ಕಾರ್ಯದರ್ಶಿ ಜಿ.ಸಿ.ಶಿವಪ್ಪ, 1995ರ ನಂತರ ಆರಂಭವಾದ ಶಾಲಾ-ಕಾಲೇಜುಗಳನ್ನು ಅನುದಾನ ವ್ಯಾಪ್ತಿಗೆ ಒಳಪಡಿಸುವಂತೆ ಕಳೆದ 21 ವರ್ಷಗಳಿಂದ ಹಲವಾರು ಬಾರಿ ಪ್ರತಿಭಟನೆ, ಮನವಿಗಳನ್ನು ನೀಡಿದ್ದರೂ ಇದುವರೆಗೂ ಯಾವ ಸರಕಾರಗಳು ಕ್ರಮ ಕೈಗೊಂಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಬಿಜೆಪಿ ಮತ್ತು ಜೆಡಿಎಸ್ ಸಮ್ಮಿಶ್ರ ಸರಕಾರದ ಸಮಯದಲ್ಲಿ 87 ರಿಂದ 92 ರವರೆಗೆ ಆರಂಭವಾದ ಶಾಲೆಗಳನ್ನು ಅನುದಾನದ ಅಡಿಯಲ್ಲಿ ಅನುದಾನ ನೀಡಲಾಗುತ್ತಿತ್ತು. ಬಿಜೆಪಿ ಸರಕಾರ 93 ರಿಂದ 95 ರವರೆಗೆಗಿನ ಶಾಲೆಗಳಿಗೆ ಅನುದಾನ ನೀಡಿತು. ಅನಂತರ ಬಂದ ಸರಕಾರ ಎಸ್ಸಿ, ಎಸ್ಟಿ ಆಡಳಿತ ಮಂಡಳಿಗೆ ಅನುದಾನ ನೀಡಲಾಗುತ್ತಿತ್ತು. ಆದರೆ, ಈಗ ಯಾವುದೇ ಶಾಲೆಗಳಿಗೆ ಅನುದಾನ ನೀಡದೇ ಎಲ್ಲವನ್ನೂ ಕಡಿತ ಮಾಡಲಾಗಿದೆ ಎಂದು ದೂರಿದರು.
ರಾಜ್ಯಾದ್ಯಂತ 85 ಪದವಿ ಪೂರ್ವ ಕಾಲೇಜುಗಳು, 80 ಪ್ರೌಢಶಾಲೆಗಳು, 50 ಕ್ಕೂ ಅಧಿಕ ಪ್ರಾಥಮಿಕ ಶಾಲೆಗಳು 1995 ರ ನಂತರ ಆರಂಭವಾಗಿದ್ದು, 50 ಸಾವಿರಕ್ಕೂ ಅಧಿಕ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಈಗ ಸರಕಾರ ಅನುದಾನ ಕಡಿತ ಮಾಡಿರುವುದರಿಂದ 2 ಸಾವಿರ ಶಿಕ್ಷಕ-ಉಪನ್ಯಾಸಕರಿಗೆ ವೇತನವಿಲ್ಲದೆ ಕಾಲ ಕಳೆಯುವಂತಾಗಿದೆ. ಅಲ್ಲದೆ, ಈಗ ಈ ಶಾಲಾ-ಕಾಲೇಜುಗಳು ಮುಚ್ಚುವ ಹಂತಕ್ಕೆ ಬಂದಿದೆ ಎಂದು ಅವರು ಹೇಳಿದರು.
ಹೀಗಾಗಿ, ರಾಜ್ಯ ಸರಕಾರ ಆ.15 ರೊಳಗೆ 1995 ರಿಂದ ಆರಂಭವಾದ ಅನುದಾನ ರಹಿತ ಶಾಲಾ-ಕಾಲೇಜುಗಳನ್ನು ಅನುದಾನ ವ್ಯಾಪ್ತಿಗೆ ಒಳಪಡಿಸಬೇಕು. ಇಲ್ಲದಿದ್ದರೆ ಆ.17 ರಿಂದ ‘ಕನ್ನಡ ಶಾಲೆ ಉಳಿಸಿ’ ಎಂದು ಶಾಲಾ-ಕಾಲೇಜುಗಳನ್ನು ಮುಚ್ಚಿ ನಗರದ ಸ್ವಾತಂತ್ರ ಉದ್ಯಾನವನದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ಹಮ್ಮಿಕೊಳ್ಳಲಾಗುತ್ತದೆ ಎಂದು ಎಚ್ಚರಿಕೆ ನೀಡಿದರು.
ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ಅಧ್ಯಕ್ಷ ಜಯದೇವ್ ಗಾಂಧಿ, ಉಪಾಧ್ಯಕ್ಷ ಮಂಜೇಗೌಡ, ಪದಾಧಿಕಾರಿಗಳಾದ ಮಳ್ಳೇಗೌಡ, ಶಿಲ್ಪ ಉಪಸ್ಥಿತರಿದ್ದರು.







