ತರಬೇತಿಯಿಂದ ಪರಿಣಿತಿ ಸಾಧ್ಯ: ಎಸ್.ಎಸ್.ಹೆಗಡೆ

ಮಣಿಪಾಲ, ಜು.29: ಇಂದು ಪ್ರತಿಯೊಂದು ಉದ್ಯೋಗ ಹಾಗೂ ಕ್ಷೇತ್ರದಲ್ಲಿ ತ್ವರಿತಗತಿಯ ಬದಲಾವಣೆಗಳಾಗುತ್ತಿವೆ. ಹೊಸ ಬದಲಾವಣೆಗಳನ್ನು ಸ್ಥಾಯೀಕರಿಸಿಕೊಂಡು ಮುನ್ನಡೆಯಬೇಕಾದಲ್ಲಿ ನಮ್ಮ ಜ್ಞಾನವನ್ನು ಅಪ್- ಡೇಟ್ ಮಾಡುವುದು ಅನಿವಾರ್ಯ. ಹೊಸ ವಿಚಾರಗಳನ್ನು ಅರಿಯಲು ಸ್ವ ಅಧ್ಯಯನ, ತರಬೇತಿಯಿಂದ ಮಾತ್ರ ಸಾಧ್ಯ ಎಂದು ಸಿಂಡಿಕೇಟ್ ಬ್ಯಾಂಕಿನ ಉಡುಪಿ ಪ್ರಾದೇಶಿಕ ಕಚೇರಿಯ ಉಪ ಮಹಾಪ್ರಬಂಧಕ ಎಸ್.ಎಸ್.ಹೆಗಡೆ ಅಭಿಪ್ರಾಯ ಪಟ್ಟಿದ್ದಾರೆ.
ಶಿವಳ್ಳಿಯ ಭಾರತೀಯ ವಿಕಾಸ ಟ್ರಸ್ಟ್, ಸಿಂಡಿಕೇಟ್ ಬ್ಯಾಂಕಿನ ಪ್ರಾಯೋಜಕತ್ವದಲ್ಲಿ ಬಿವಿಟಿಯಲ್ಲಿ ಆಯೋಜಿಸಿದ 21 ದಿನಗಳ ವಸ್ತ್ರ ವಿನ್ಯಾಸ ತರಬೇತಿಯ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳಿಗೆ ಪ್ರಮಾಣ ಪತ್ರವನ್ನು ವಿತರಿಸಿ ಮಾತನಾಡುತ್ತಿದ್ದರು.
ಇಲ್ಲಿ ಭಾಗವಹಿಸಿದ ಶಿಬಿರಾರ್ಥಿಗಳು ವಸ್ತ್ರ ವಿನ್ಯಾಸ ತರಬೇತಿಯ ಮೂಲಕ ವೃತ್ತಿಪರ ಮನೋಭಾವವನ್ನು ಬೆಳೆಸಿಕೊಳ್ಳಬೇಕು. ಶಿಬಿರಾರ್ಥಿಗಳಿಗೆ ಸ್ವ ಉದ್ಯೋಗ ಪ್ರಾರಂಭಿಸಲು ಆರ್ಥಿಕ ಸಹಾಯವನ್ನು ಸಿಂಡಿಕೇಟ್ ಬ್ಯಾಂಕ್ ನೀಡಲು ಸಿದ್ದವಿದೆ ಎಂದವರು ತಿಳಿಸಿದರು.
ಭಾರತೀಯ ವಿಕಾಸ ಟ್ರಸ್ಟಿನ ಆಡಳಿತ ಟ್ರಸ್ಟಿ ಕೆ.ಎಂ. ಉಡುಪ ಮಾತನಾಡಿ, ಮಹಿಳೆಯರು ಹೊಲಿಗೆ, ವಸ್ತ್ರವಿನ್ಯಾಸವನ್ನು ಸ್ವ ಉದ್ಯೋಗವಾಗಿ ಕೈಗೊಳ್ಳುವುದು ಸುಲಭ ಮತ್ತು ಅತೀ ಸೂಕ್ತ ಎಂದರು. ಇದೇ ಸಂದರ್ದಲ್ಲಿ ಶಿಬಿರಾರ್ಥಿಗಳು ತಾವೇ ಹೊಲಿದು ಸಿದ್ದ ಪಡಿಸಿದ 100ಕ್ಕೂ ಹೆಚ್ಚು ಸಿದ್ಧ ಉಡುಪುಗಳ ಪ್ರದರ್ಶನವೂ ನಡೆಯಿತು.
ಬಿವಿಟಿಯ ಮುಖ್ಯ ಕಾರ್ಯಕ್ರಮ ಸಂಯೋಜಕಿ ಲಕ್ಷ್ಮೀಬಾಯಿ ಸ್ವಾಗತಿಸಿ ಕೊನೆಯಲ್ಲಿ ವಂದಿಸಿದರು. ಸಂಪನ್ಮೂಲ ವ್ಯಕ್ತಿ ಮುಕ್ತಾ ಶ್ರೀನಿವಾಸ ಭಟ್, ಬಿವಿಟಿಯ ಮುಖ್ಯಕಾರ್ಯನಿರ್ವಹಣಾಧಿಕಾರಿ ಮನೋಹರ ಕಟ್ಗೇರಿ ಉಪಸ್ಥಿತರಿದ್ದರು. ಉಡುಪಿ. ದ.ಕ. ಜಿಲ್ಲೆಯ 35ಕ್ಕೂ ಅಧಿಕ ಮಹಿಳೆಯರು ತರಬೇತಿಯಲ್ಲಿ ಭಾಗವಹಿಸಿದ್ದರು.







