ಸಿಎ ಶಿಕ್ಷಣದ ಹೊಸ ಯೋಜನೆಯ ಕೋರ್ಸ್ ಪ್ರಾರಂಭ
ಬಳ್ಳಾರಿ, ಜು.29: ಲೆಕ್ಕ ಪರಿಶೋಧಕರ(ಸಿಎ) ಕೋರ್ಸ್‌ನ ಶಿಕ್ಷಣ ಮತ್ತು ತರಬೇತಿಗೆ ಹೊಸ ಯೋಜನೆಯು ಜುಲೈ 1 ರಿಂದ ಜಾರಿಗೆ ಬಂದಿದೆ. ಪ್ರಸ್ತುತ ಇರುವ ಸಿಪಿಟಿ ಕೋರ್ಸ್ ಬದಲಿಗೆ ಹೊಸ ಕೋರ್ಸ್ ಫೌಂಡೇಷನ್ ಜಾರಿಗೆ ತರಲಾಗಿದೆ.
ಸಿಎಗಳ ಸಂಘದ ದಕ್ಷಿಣ ಭಾರತೀಯ ಅಧ್ಯಕ್ಷರಾದ ಕೋತಾ ಎಸ್.ಶ್ರೀನಿವಾಸ್, ಕಾರ್ಯದರ್ಶಿ ಡುಂಗರ್ ಚಂದ್ ಜೈನ್ ಹಾಗೂ ಖಜಾಂಚಿಗಳಾದ ಬಳ್ಳಾರಿಯ ಸಿಎ ಸಿರಿಗೇರಿ ಪನ್ನಾರಾಜ್ ಮತ್ತಿತರರು ಬಳ್ಳಾರಿಯ ಪತ್ರಿಕಾ ಭವನದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿ, ಸಿಎ ವಿದ್ಯಾರ್ಥಿಗಳಿಗೆ ಜಾಗತಿಕ ಮಟ್ಟದ ಅರ್ಹತೆ ನೀಡುವ ಸವಾಲುಗಳನ್ನೆದುರಿಸಲು, ಶೈಕ್ಷಣಿಕ ಮತ್ತು ಎಲ್ಲಾ ಅಡೆತಡೆಗಳನ್ನು ಮೀರಿ ಈ ವಿದ್ಯಾರ್ಥಿಗಳಿಗೆ ಗೋಬಲ್ ಸಿಎ ಎಂದು ಅರ್ಹತೆ ನೀಡುವ ದಿಸೆಯಲ್ಲಿ ವ್ಯಾಪಕವಾದ ಬದಲಾವಣೆಗಳನ್ನು ಮಾಡಲಾಗಿದೆ ಎಂದರು.
ಈ ಹಿಂದೆ ಹತ್ತನೆ ತರಗತಿ ಪಾಸಾದವರಿಗೆ ಸಿಪಿಟಿ ಮಾಡಲು ಅವಕಾಶವಿತ್ತು. ಅದರ ಬದಲಿಗೆ ಈಗ ಕನಿಷ್ಠ ಪಿಯುಸಿ (12ನೇ ತರಗತಿ) ಪಾಸಾದವರಿಗೆ ಮಾತ್ರವೇ ಫೌಂಡೇಷನ್ ಕೋರ್ಸ್‌ಗೆ ಪ್ರವೇಶ ಲಭ್ಯವಿರುತ್ತದೆ. ಇಲ್ಲಿ ನಾಲ್ಕು ತಿಂಗಳಲ್ಲಿ ಪರೀಕ್ಷೆ ಬರೆಯಲು ಅವಕಾಶವಿದ್ದು ಆನಂತರ ಇಂಟರ್ ಮೀಡಿಯೆಟ್ ಪರೀಕ್ಷೆ ಬರೆಯಲು ಹಿರಿಯ ಸಿಎ ಒಬ್ಬರ ಬಳಿ 3 ವರ್ಷಗಳ ಕಾಲ ತರಬೇತಿ ಪಡೆಯಬೇಕು. ಈ ಅವಧಿಯಲ್ಲಿಯೂ ಉತ್ತೀರ್ಣರಾದ ನಂತರ 4 ತಿಂಗಳಲ್ಲಿ ಫೈನಲ್ ಪರೀಕ್ಷೆ ಬರೆಯಬಹುದಾಗಿದೆ. ಹೊಸ ಪದ್ಧತಿಯ ಪ್ರಕಾರ ವಿದ್ಯಾರ್ಥಿಗಳು ಮೂರುವರೆ ವರ್ಷಗಳಿಂದ ನಾಲ್ಕುವರೆ ವರ್ಷಗಳ ಅವಧಿಯಲ್ಲಿ ಸಿಎ ಕೋರ್ಸ್ ಪಾಸು ಮಾಡಬಹುದಾಗಿದೆ ಎಂದು ವಿವರಿಸಿದರು.
ಇಂಟರ್ ಮೀಡಿಯೆಟ್ ಹಂತದಲ್ಲಿ ಸಿಎ ವಿದ್ಯಾರ್ಥಿಗಳಿಗೆ ಹಣಕಾಸು ಅರ್ಥಶಾಸ್ತ್ರ ವಿಷಯವನ್ನು ಪರಿಚಯಿಸಲಾಗಿದೆ. ಈ ಹಿಂದೆ ಇಂಟರ್ ಮೀಡಿಯೆಟ್ ಕೋರ್ಸ್ ನಲ್ಲಿ ಏಳು ವಿಷಯಗಳಿದ್ದರೆ, ಈಗ 8 ವಿಷಯಗಳಾಗಿವೆ. ಅಂತೆಯೇ ಅಂತಿಮ ಹಂತದಲ್ಲಿ ಈ ಹಿಂದಿನಂತೆಯೇ 8 ವಿಷಯಗಳನ್ನು ಅಭ್ಯಸಿಸಬೇಕಾಗುತ್ತದೆ. ಇಂಟರ್ ಮೀಡಿಯೆಟ್‌ಗೆ ಪ್ರವೇಶ ಗಿಟ್ಟಿಸುವ ವಿದ್ಯಾರ್ಥಿಗಳಿಗೆ ತುಲನಾತ್ಮಕವಾಗಿ ಹೆಚ್ಚು ಕಠಿಣಗೊಳಿಸಲಾಗಿದೆ ಎಂದು ಕೋತಾ ಶ್ರೀನಿವಾಸ್, ಡುಂಗರ್ ಚಂದ್ ಹಾಗೂ ಪನ್ನಾರಾಜ್ ತಿಳಿಸಿದರು.







