ದೇಶಾದ್ಯಂತ ಕಾಂಕ್ರಿಟ್ ರಸ್ತೆಗಳ ನಿರ್ಮಾಣ: ಗಡ್ಕರಿ

ಥಾಣೆ.ಜು.29: ಸ್ಥಿರತೆ ಮತ್ತು ಬಾಳಿಕೆಗಾಗಿ ದೇಶದಲ್ಲಿಯ ಎಲ್ಲ ರಸ್ತೆಗಳನ್ನು ಸಿಮೆಂಟ್ ಕಾಂಕ್ರಿಟ್ ರಸ್ತೆಗಳನ್ನಾಗಿ ಪರಿವರ್ತಿಸಲಾಗುವುದು ಎಂದು ಕೇಂದ್ರ ಸಾರಿಗೆ ಸಚಿವ ನಿತಿನ್ ಗಡ್ಕರಿ ಅವರು ಹೇಳಿದ್ದಾರೆ.
ಶುಕ್ರವಾರ ರಾತ್ರಿ ನವಿ ಮುಂಬೈನ ವಾಶಿಯಲ್ಲಿ ‘ಪ್ರವಾಸ್ 2017’ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡುತ್ತಿದ್ದ ಅವರು, ಮುಂಬೈಯಲ್ಲಿ 20 ವರ್ಷಗಳ ಹಿಂದೆ ನಿರ್ಮಿಸ ಲಾದ ಸಿಮೆಂಟ್-ಕಾಂಕ್ರಿಟ್ ರಸ್ತೆಗಳು ಇಂದಿಗೂ ಉತ್ತಮವಾಗಿವೆ. ಆದರೆ ಮುಂಬೈನಲ್ಲಿ ಇಂತಹ ರಸ್ತೆಗಳು ನಿರ್ಮಾಣವಾಗಬಾರದು ಮತ್ತು ಆಗಾಗ್ಗೆ ದುರಸ್ತಿ ಅಗತ್ಯವಾಗುವ ಡಾಮರು ರಸ್ತೆಗಳು ನಿರ್ಮಾಣಗೊಳ್ಳಬೇಕು ಎಂದು ಕೆಲವು ರಾಜಕೀಯ ನಾಯಕರು, ಅಧಿಕಾರಿಗಳು ಮತ್ತು ಗುತ್ತಿಗೆದಾರರು ಬಯಸುತ್ತಿದ್ದಾರೆ ಎಂದರು.
ದೇಶದಲ್ಲಿಯ ಎಲ್ಲ ರಸ್ತೆಗಳನ್ನು ಸಿಮೆಂಟ್ ಕಾಂಕ್ರಿಟ್ ರಸ್ತೆಗಳನ್ನಾಗಿ ಪರಿವರ್ತಿಸ ಲಾಗುವುದು ಮತ್ತು ಇವು 200 ವರ್ಷ ಬಾಳಿಕೆ ಬರುತ್ತವೆ ಎಂದು ತಾನು ಖಾತರಿ ನೀಡುತ್ತೇನೆ ಎಂದು ಗಡ್ಕರಿ ಹೇಳಿದರು.
ಮುಂಬೈ ಮಹಾನಗರದಲ್ಲಿ ರಸ್ತೆಗಳ ದುರವಸ್ಥೆಯ ಬಗ್ಗೆ ಜನರ ಆಕ್ರೋಶದ ಹಿನ್ನೆಲೆ ಯಲ್ಲಿ ರಾಜ್ಯದ ಮಾಜಿ ಪಿಡಬ್ಲುಡಿ ಸಚಿವರಾಗಿರುವ ಗಡ್ಕರಿಯವರ ಈ ಹೇಳಿಕೆ ಹೊರಬಿದ್ದಿದೆ.
ಮೋಟಾರು ವಾಹನಗಳ(ತಿದ್ದುಪಡಿ) ಮಸೂದೆ,2017 ಸಂಸತ್ತಿನಲ್ಲಿ ಅಂಗೀಕಾರ ಗೊಳ್ಳುವ ವಿಶ್ವಾಸವನ್ನು ಗಡ್ಕರಿ ವ್ಯಕ್ತಪಡಿಸಿದರು. ಲೋಕಸಭೆಯು ಕಳೆದ ವರ್ಷವೇ ಈ ಮಸೂದೆಯನ್ನು ಅಂಗೀಕರಿಸಿದೆಯಾದರೂ ರಾಜ್ಯಸಭೆಯಲ್ಲಿ ಅದಿನ್ನೂ ಅಂಗೀಕಾರಗೊಳ್ಳ ಬೇಕಿದೆ.







