ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ: ಸರ್ವಪಕ್ಷಗಳ ಬೆಂಬಲಕ್ಕೆ ಬಿಜೆಪಿ ಮನವಿ
ರಾಜ್ಯಮಟ್ಟದ ವಿಚಾರ ಸಂಕಿರಣ

ಬೆಂಗಳೂರು, ಜು. 29: ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನದ ವಿಧೇಯಕ ತಿದ್ದುಪಡಿಗೆ ಸರ್ವ ಪಕ್ಷಗಳು ಸಹಮತದಿಂದ ಬೆಂಬಲ ಸೂಚಿಸಬೇಕು ಎಂದು ಕೇಂದ್ರದ ಸಾಮಾಜಿಕ ಹಾಗೂ ಸಬಲೀಕರಣ ಸಚಿವ ತಾವರ್‌ಚಂದ್ ಗೆಲ್ಹೋಟ್ ಮನವಿ ಮಾಡಿದ್ದಾರೆ.
ಶನಿವಾರ ನಗರದ ಜ್ಞಾನಜ್ಯೋತಿ ಸಭಾಂಗಣದಲ್ಲಿ ರಾಜ್ಯ ಬಿಜೆಪಿಯ ಹಿಂದುಳಿದ ವರ್ಗಗಳ ಮೋರ್ಚಾ ಆಯೋಜಿಸಿದ್ದ ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಕುರಿತ ರಾಜ್ಯಮಟ್ಟದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಅವರು ಮಾತನಾಡಿದರು.
ರಾಷ್ಟ್ರೀಯ ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ಪರಿಶಿಷ್ಟ ಜಾತಿ ಮತ್ತು ವರ್ಗಗಳ ಆಯೋಗದಂತೆ ಪ್ರಭಾವಶಾಲಿಯಾಗಿ ಕಾರ್ಯನಿರ್ವಹಿಸಲಿದೆ. ಹಿಂದುಳಿದ ವರ್ಗಗಳ ಕಲ್ಯಾಣದ ಜೊತೆಗೆ, ಆಯೋಗದ ಅಧ್ಯಕ್ಷರಿಗೆ ನ್ಯಾಯಾಧೀಶರಂತೆ ವಿಚಾರಣೆ ನಡೆಸುವ, ಶಿಕ್ಷೆ ವಿಧಿಸುವ ಅಧಿಕಾರವೂ ಇರಲಿದೆ ಎಂದು ತಿಳಿಸಿದರು.
1993ರಲ್ಲಿ ಸಿದ್ಧಗೊಂಡಿದ್ದ ಆಯೋಗದ ತಿದ್ದುಪಡಿ ವಿಧೇಯಕವನ್ನು ಇದುವರೆಗೂ ಯಾವುದೇ ಸರಕಾರ ಜಾರಿಗೆ ತರಲು ಮುಂದೆ ಬಂದಿಲ್ಲ. ಪ್ರಧಾನಿ ಮೋದಿ ಈ ಕುರಿತು ಹೆಚ್ಚು ಆಸಕ್ತಿ ತೋರಿಸಿ ಎ.5ರಂದು ಲೋಕಸಭೆಯಲ್ಲಿ ಮಂಡಿಸಿದ್ದಾರೆ. ರಾಜ್ಯಸಭೆಯಲ್ಲಿ ಆಯೋಗದ ತಿದ್ದುಪಡಿ ವಿಧೇಯಕಕ್ಕೆ ಬಹುಮತದೊಂದಿಗೆ ಅನುಮೋದನೆ ಇನ್ನೂ ಸಿಗಬೇಕಿದೆ. ಇದಕ್ಕೆ ಕಾಂಗ್ರೆಸ್ ಪಕ್ಷ ಸೇರಿದಂತೆ ಇತರೆ ಪಕ್ಷಗಳು ಸಹಮತದೊಂದಿಗೆ ಬೆಂಬಲ ಸೂಚಿಸಿ, ಹಿಂದುಳಿದ ಜಾತಿಗಳ ಬಹುವರ್ಷಗಳ ಕನಸನ್ನು ನನಸು ಮಾಡಲು ಸಹಕರಿಸಬೇಕು ಎಂದರು.
ಬಿಜೆಪಿಯ ರಾಜ್ಯ ಉಸ್ತುವಾರಿ ಮುರಳೀಧರ್ ರಾವ್ ಮಾತನಾಡಿ, ಹಿಂದುಳಿದ ವರ್ಗಗಳ ಆಯೋಗಕ್ಕೆ ಸಾಂವಿಧಾನಿಕ ಸ್ಥಾನಮಾನ ನೀಡಲು ಕಾಂಗ್ರೆಸ್ ಅಡ್ಡಗಾಲಾಗಿದೆ. ಹಿಂದುಳಿದ ವರ್ಗಗಳು ಗಣಿ ಪರವಾನಿಗೆ, ಉಕ್ಕಿನ ಸೇತುವೆ, ಗಡಿಯಾರದಲ್ಲಿ ಕಮಿಷನ್ ಕೇಳುತ್ತಿಲ್ಲ. ಹಿಂದುಳಿದ ಜಾತಿಗಳ ರಕ್ಷಣೆಗಾಗಿ ಆಯೋಗದ ವಿಧೇಯಕ ತಿದ್ದುಪಡಿಗೆ ಬೆಂಬಲ ಸೂಚಿಸಲು ಕಾಂಗ್ರೆಸ್ ಹೈಕಮಾಂಡ್ ಮೇಲೆ ಮುಖ್ಯಮಂತ್ರಿ ಸಿದ್ದರಾಮಯ್ಯ ಒತ್ತಡ ತರಬೇಕು ಎಂದು ಒತ್ತಾಯಿಸಿದರು.
ಕೇಂದ್ರದ ಸಂಸದೀಯ ಹಾಗೂ ರಾಸಾಯನಿಕ ಹಾಗೂ ಗೊಬ್ಬರ ಸಚಿವ ಅನಂತ್ ಕುಮಾರ್ ಮಾತನಾಡಿ, ರಾಷ್ಟ್ರೀಯ ಹಿಂದುಳಿದ ವರ್ಗಗಳ ಸಾಂವಿಧಾನಿಕ ಸ್ಥಾನಮಾನ ನೀಡುವ ತಿದ್ದುಪಡಿ ವಿಧೇಯಕಕ್ಕೆ ಅಡ್ಡಗಾಲಾಗಿರುವ ಕಾಂಗ್ರೆಸ್ ಪಕ್ಷದ ವರಿಷ್ಠರಿಗೆ ಬುದ್ಧಿ ಹೇಳದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಕುರ್ಚಿಗೆ ಅಂಟಿಕೊಂಡಿದ್ದಾರೆ ಎಂದು ಟೀಕಿಸಿದರು.
ಹಿಂದುಳಿದ ವರ್ಗಗಳ ನಾಯಕ ಎಂದು ಪ್ರದರ್ಶನ ನೀಡುವ ಬದಲು ಈ ವಿಧೇಯಕಕ್ಕೆ ಒಪ್ಪಿಗೆ ನೀಡುವ ಬಗ್ಗೆ ಕಾಂಗ್ರೆಸ್‌ವರಿಷ್ಠರೊಂದಿಗೆ ಮಾತುಕತೆ ನಡೆಸಬೇಕು. ಆದರೆ ಈ ಕುರಿತು ಇದುವರೆಗೂ ಚಕಾರ ಎತ್ತದ ಮುಖ್ಯಮಂತ್ರಿ ಸಿದ್ದರಾಮಯ್ಯ, ಹಿಂದುಳಿದ ವರ್ಗಗಳ ನಾಯಕ ಹೇಗೆ ಆಗುತ್ತಾರೆ ಎಂದು ಪ್ರಶ್ನೆ ಮಾಡಿದರು.
ಸೋಮವಾರ ರಾಜ್ಯಸಭೆಯಲ್ಲಿ ತಿದ್ದುಪಡಿ ವಿಧೇಯಕ ಅಂಗೀಕಾರಕ್ಕೆ ಅಭಿಪ್ರಾಯ ಸಂಗ್ರಹಿಸಲಾಗುವುದು. ಕಾಂಗ್ರೆಸ್ ಪಕ್ಷ ಸಹಕಾರ ನೀಡಲಿ ಬಿಡಲಿ ಈ ವಿಧೇಯಕಕ್ಕೆ ಒಪ್ಪಿಗೆ ಪಡೆಯುವ ಪ್ರಯತ್ನವನ್ನು ನಡೆಸುತ್ತೇವೆ. ಪ್ರಧಾನಿ ನರೇಂದ್ರಮೋದಿ ಅವರ ಸೂಚನೆಯಂತೆ ಈಗಾಗಲೇ ಎಲ್ಲ ಪಕ್ಷಗಳೊಂದಿಗೂ ಚರ್ಚೆ ನಡೆಸುವುದಾಗಿ ಅವರು ಹೇಳಿದರು.
ತಿದ್ದುಪಡಿ ವಿಧೇಯಕದಿಂದ ಹಿಂದುಳಿದ ವರ್ಗಗಳಿಗೆ ಸಾಕಷ್ಟು ಲಾಭವಿದೆ. ಒಂದು ವೇಳೆ ಸೋಮವಾರ ರಾಜ್ಯಸಭೆಯಲ್ಲಿ ಈ ವಿಧೇಯಕಕ್ಕೆ ಒಪ್ಪಿಗೆ ಸಿಗದಿದ್ದರೆ ಬಿಜೆಪಿ ದೇಶಾದ್ಯಂತ ಕಾಂಗ್ರೆಸ್ ವಿರುದ್ಧ ಹೋರಾಟ ನಡೆಸಲಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ, ವಿಧಾನ ಪರಿಷತ್‌ನ ವಿರೋಧ ಪಕ್ಷದ ನಾಯಕ ಕೆ.ಎಸ್.ಈಶ್ವರಪ್ಪ, ಮಾಜಿ ಉಪಮುಖ್ಯಮಂತ್ರಿ ಆರ್.ಅಶೋಕ್, ಅರವಿಂದ ಲಿಂಬಾವಳಿ, ಎನ್.ರವಿಕುಮಾರ್, ಬಿ.ಜೆ.ಪುಟ್ಟಸ್ವಾಮಿ ಸೇರಿದಂತೆ ಇತರರು ಇದ್ದರು.







