ದಲಿತರ ಮನೆಗೆ ಭೇಟಿ ಕೊಟ್ಟಾಗ ಜ್ಞಾನೋದಯ: ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಜು.29: ಪಕ್ಷ ಸಂಘಟಿಸುವ ಉದ್ದೇಶದಿಂದ ದಲಿತರ ಮನೆಗೆ ಭೇಟಿ ಕೊಟ್ಟಾಗ ನಿಜವಾದ ದಲಿತ ಸಮುದಾಯದ ಪರಿಸ್ಥಿತಿಯನ್ನು ಕಂಡು ಜ್ಞಾನೋದಯವಾಯಿತು ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ತಿಳಿಸಿದ್ದಾರೆ.
ಶನಿವಾರ ದಸಂಸ ವತಿಯಿಂದ ನಗರದ ಪುರಭವನದಲ್ಲಿ ಆಯೋಜಿಸಿದ್ದ ಡಾ.ಬಾಬಾ ಸಾಹೇಬ್ ಅಂಬೇಡ್ಕರ್ ಹಾಗೂ ಡಾ.ಬಾಬು ಜಗಜೀವನ ರಾಮ್ ಜನ್ಮ ದಿನೋತ್ಸವ ಅಂಗವಾಗಿ ಆಯೋಜಿಸಿದ್ದ ರಾಜ್ಯಮಟ್ಟದ ದಲಿತ ಜನಜಾಗೃತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ದಲಿತರ ಮನೆಗೆ ಭೇಟಿ ಕೊಟ್ಟ ಸಂದರ್ಭದಲ್ಲಿ ದಲಿತರ ಪರಿಸ್ಥಿತಿಯ ಅರಿವಾಯಿತು. ದಲಿತರ ಮನೆಯ ತಿಂಡಿ ಸೇವಿಸಿದ್ದೇನೆ. ದಲಿತರನ್ನು ಒಟ್ಟುಗೂಡಿಸಿ ಸಮಸ್ಯೆ ಕೇಳಿ, ಚರ್ಚಿಸಿದ್ದೇನೆ. ಆ ಸಂದರ್ಭದಲ್ಲಿ ದಲಿತರು ತೋರಿದ ಪ್ರೀತಿ, ವಿಶ್ವಾಸ ಅವಿಸ್ಮರಣೀಯ. ಹಾಗಾಗಿ ಪ್ರವಾಸದ ಸಂದರ್ಭದಲ್ಲಿ ನನಗೆ ಅನ್ನ ಹಾಕಿದ ದಂಪತಿಗಳನ್ನು ಬೆಂಗಳೂರಿಗೆ ಕರೆಸಿ ಗೌರವಿಸಲಾಗುವುದು ಎಂದು ಅವರು ತಿಳಿಸಿದರು.
ದಲಿತರ ಮನೆಗೆ ಹೋಗುವುದನ್ನೇ ನಿಲ್ಲಿಸಿದ್ದೇನೆ ಎನ್ನುವ ಮಾತು ಸುಳ್ಳು. ಸಂಸತ್ ಕಲಾಪದಲ್ಲಿ ಭಾಗಿಯಾಗಿದ್ದರಿಂದ ದಲಿತರ ಮನೆಗೆ ಹೋಗಲು ಸಾಧ್ಯವಾಗಲಿಲ್ಲ. ಯಾರು ಏನೇ ಹೇಳಿದರೂ ನನ್ನ ದಲಿತರ ಮನೆ ಭೇಟಿಯನ್ನು ಮೊಟಕುಗೊಳಿಸುವುದಿಲ್ಲ. ಇನ್ನು ಮುಂದೆಯೂ ದಲಿತರ ಮನೆಯಲ್ಲೇ ತಿಂಡಿ ತಿಂದು ದಿನನಿತ್ಯದ ಕಾರ್ಯಕ್ರಮಗಳನ್ನು ಪ್ರಾರಂಭಿಸುತ್ತೇನೆ ಎಂದು ಅವರು ಹೇಳಿದರು.
ಸ್ವಾತಂತ್ರ ಬಂದು 70ವರ್ಷ ಕಳೆದಿದ್ದರೂ ಪರಿಶಿಷ್ಟ ಜಾತಿ, ಪಂಗಡ ಹಾಗೂ ಅಲ್ಪಸಂಖ್ಯಾತರ ಬದುಕು ಎಲ್ಲರಂತೆ ಆಗಿಲ್ಲ. ದಲಿತ ಸಮುದಾಯದ ಹಲವು ಕುಟುಂಬಗಳಿಗೆ ಸೂರಿಲ್ಲ. ದುಡಿಯುವ ಕೈಗಳಿಗೆ ಕೆಲಸವಿಲ್ಲ. ದಲಿತ ಸಮುದಾಯದ ಮಕ್ಕಳು ಶಿಕ್ಷಣದಿಂದ ವಂಚಿತರಾಗಿದ್ದಾರೆ. ಇವುಗಳ ಕುರಿತು ಎಲ್ಲ ಪಕ್ಷಗಳು ಗಂಭೀರವಾಗಿ ಚಿಂತಿಸಬೇಕಾಗಿದೆ ಎಂದು ಅವರು ತಿಳಿಸಿದರು.
ಕಾರ್ಯಕ್ರಮದಲ್ಲಿ ದಸಂಸ ಮುಖಂಡ ಎಸ್.ಚಂದ್ರಕಾಂತ್ ಕಾದ್ರೋಳಿ, ಕಾರ್ಯಾಧ್ಯಕ್ಷ ಸಿದ್ಧಾರ್ಥನಗರ ಅಂಜಿ, ಐ.ಆರ್.ನಾರಾಯಣ ಸ್ವಾಮಿ, ಸಂಘಟನಾ ಕಾರ್ಯದರ್ಶಿ ಎಸ್.ಆನಂದ್ ಮತ್ತಿತರರಿದ್ದರು.







