ತುಳಿತಕ್ಕೆ ಒಳಗಾದವರ ಮೇಲೆತ್ತುವ ಕೆಲಸ ಆಗಬೇಕಿದೆ: ಡಾ.ಎಂ.ಆರ್.ಶ್ರೀನಿವಾಸನ್

ತುಮಕೂರು, ಜು.29: ಸಮಾಜದಲ್ಲಿ ತುಳಿತಕ್ಕೆ ಒಳಗಾಗಿರುವ ವರ್ಗಗಳನ್ನು ಮೇಲೆತ್ತುವ ಕೆಲಸವಾಗಬೇಕಿದೆ. ಈ ಕೆಲಸವಾಗ ಬೇಕಾದರೆ ಮೀಸಲಾತಿ ಮುಂದುವರೆಯುವುದು ಅತ್ಯಗತ್ಯವಾಗಿದೆ ಎಂದು ಅಣುಶಕ್ತಿ ಆಯೋಗದ ಮಾಜಿ ಅಧ್ಯಕ್ಷ ಡಾ.ಎಂ.ಆರ್.ಶ್ರೀನಿವಾಸ್ ಪ್ರತಿಪಾದಿಸಿದ್ದಾರೆ.
ನಗರದ ಸಿದ್ಧಗಂಗಾ ಇಂಜಿನೀಯರಿಂಗ್ ಕಾಲೇಜಿನಲ್ಲಿ ಆಯೋಜಿಸಿದ್ದ 8ನೇ ಪದವಿ ಪ್ರಧಾನ ಸಮಾರಂಭದಲ್ಲಿ ಪ್ರಧಾನ ಭಾಷಣ ಮಾಡುತ್ತಿದ್ದ ಅವರು, ಅಭಿವೃದ್ದಿಯ ಫಲ ಎಲ್ಲರಿಗೂ ಲಭ್ಯವಾದಾಗ ಮಾತ್ರ ದೇಶದ ಪ್ರಗತಿ ಸಾಧ್ಯವೆಂದರು.
ರಾಷ್ಟ್ರದಲ್ಲಿ ಹೆಚ್ಚಿರುವ ಬಡತನ ನಿರ್ಮೂಲನೆ ದೇಶದ ಮತ್ತೊಂದು ದೊಡ್ಡ ಸವಾಲಾಗಿದೆ. ಬಡತನದಿಂದಾಗಿಯೇ ದೇಶ ಅಭಿವೃದಿಯಲ್ಲಿ ಹಿಂದುಳಿಯುವಂತಾಗಿದ್ದು, ಬಡವರಿಗೆ ನೀರು, ಆಹಾರ, ವಸತಿ ಸಮಸ್ಯೆಗಳು ಹೆಚ್ಚಾಗುತ್ತಿದ್ದು, ಆರೋಗ್ಯ ಸಮಸ್ಯೆ ಹೆಚ್ಚಾಗಿದೆ. ಈ ಹಿನ್ನೆಲೆಯಲ್ಲಿ ರಾಷ್ಟ್ರದಲ್ಲಿ ಮೂಲಭೂತ ಸಮೆಸ್ಯೆಗಳ ಪರಿಹಾರದ ಬಗ್ಗೆ ಕಾಳಜಿ ವಹಿಸುವ ಅಗತ್ಯವಿದೆ ಎಂದು ಡಾ.ಎಂ.ಆರ್.ಶ್ರೀನಿವಾಸನ್ ನುಡಿದರು.
ಪರಿಸರದ ಹೆಸರಿನಲ್ಲಿ ರಾಷ್ಟ್ರದಲ್ಲಿನ ಅಭಿವೃದ್ದಿ ಕೆಲಸಗಳಿಗೆ ಅಡ್ಡಿ ಉಂಟು ಮಾಡಬಾರದು. ಪ್ರತಿಯೊಂದೂ ಅಭಿವೃದಿ ಕೆಲಸಕ್ಕೂ ಪರಿಸರವನ್ನು ಅಡ್ಡ ತರುವ ಕೆಲಸಗಳು ಹೆಚ್ಚಾಗುತ್ತಿದ್ದು, ಇದು ಸರಿಯಲ್ಲ. ಬೆಂಗಳೂರಿನ ಸಂಚಾರದ ದಟ್ಟನೆಯನ್ನು ಕಡಿಮೆ ಮಾಡಲು ಮೇಲ್ಸೇತುವೆ, ಉಕ್ಕಿನ ಸೇತುವೆ ನಿರ್ಮಾಣ ಅಗತ್ಯವಾಗಿದ್ದವು. ಪರಿಸರದ ಹೆಸರಿನಲ್ಲಿ ಇಂತಹ ಸೇತುವೆಗಳ ನಿರ್ಮಾಣಕ್ಕೆ ಅಡ್ಡಿ ಉಂಟುಮಾಡುವುದು ಸರಿಯಲ್ಲ. ಸಾರ್ವಜನಿಕ ಅಗತ್ಯಕ್ಕಾಗಿ ಮರಗಳನ್ನು ಕಡಿದರೆ, ಅಂತಹದ್ದೇ ಮತ್ತಷ್ಟು ಮರಗಳನ್ನು ಬೇರೆ ಕಡೆ ಬೆಳೆಸಿ ಪರಿಸರ ಸಮತೋಲನ ಕಾಪಾಡಿಕೊಳ್ಳಬಹುದಾಗಿದೆ. ಪರಿಸರವಾದಿಗಳಿಗೆ ಹೆದರಿಯೇ ಉತ್ತರ ಭಾರತದ ಕೈಗಾರಿಕೋದ್ಯಮಿಗಳು ಬೆಂಗಳೂರಿನಲ್ಲಿ ಕೈಗಾರಿಕೆಗಳನ್ನು ಸ್ಥಾಪಿಸಲು ಹಿಂಜರಿಯುತ್ತಿದ್ದಾರೆ ಎಂದರು.
ಚಾಲಕರಿಲ್ಲದ ಕಾರು; ಚಾಲಕರಿಲ್ಲದ ಕಾರುಗಳು ಭಾರತ ದೇಶಕ್ಕೆ ಸರಿಹೊಂದುವುದಿಲ್ಲ ಎಂದ ರಾಷ್ಟ್ರದ ರಸ್ತೆ ಸಾರಿಗೆ ಸಚಿವ ಗಡ್ಕರಿ ಅವರ ಅಭಿಪ್ರಾಯವನ್ನು ಬೆಂಬಲಿಸಿದ ಅವರು, ಇದರಿಂದ ರಾಷ್ಟ್ರದ ಮೂರು ಮಿಲಿಯನ್ನು ಚಾಲಕರು ನಿರುದ್ಯೋಗಿಗಳಾಗುತ್ತಾರೆ. ನಿರುದ್ಯೋಗ ಸಮಸ್ಯೆಯನ್ನು ಪರಿಹರಿಸುವ ಸಲುವಾಗಿ ಉತ್ಪಾದನಾ ವಲಯವನ್ನು ಮತ್ತಷ್ಟು ಸದೃಡಗೊಳಿಸಬೇಕು, ಉತ್ಪಾಧನಾ ವಲಯ ಸದೃಢವಾದಷ್ಟು ಉದ್ಯೋಗಳ ಸೃಷ್ಠಿಯಾ
ಗಿ, ಮಾನವ ಸಂಪನ್ಮೂಲದ ಸದ್ಬಳಕೆ ಸಾಧ್ಯವಾಗುತ್ತದೆ ಎಂದರು. ಶಿಕ್ಷಣ ಕ್ಷೇತ್ರದಲ್ಲಿ ಸಿದ್ಧಗಂಗಾ ಮಠದ ಹಾಗೂ ಡಾ.ಶ್ರೀಶಿವಕುಮಾರ ಸ್ವಾಮೀಜಿ ಅವರ ಸೇವೆಯ ಬಗ್ಗೆ ಅಪಾರ ಮೆಚ್ಚುಗೆ ವ್ಯಕ್ತಪಡಿಸಿದ ಶ್ರೀನಿವಾಸನ್, ತಮಕೂರು ಜಿಲ್ಲೆಯ ಮಧುಗಿರಿಯಲ್ಲಿನ ತಮ್ಮ ಬಾಲ್ಯದ ದಿನಗಳನ್ನು ನೆನೆಪಿಸಿಕೊಂಡರು.
ಸಿದ್ಧಗಂಗಾ ಮಠದ ಕಿರಿಯ ಶ್ರೀಗಳಾದ ಶ್ರೀಸಿದ್ಧಲಿಂಗಸ್ವಾಮಿಗಳು ದಿವ್ಯ ಸಾನಿಧ್ಯ ವಹಿಸಿದ್ದರು. ಸಿದ್ಧಗಂಗಾ ಇಂಜಿನೀಯರಿಂಗ್ ಕಾಲೇಜಿನ ಆಡಳಿತ ಮಂಡಳಿ ಛೇರ್ಮನ್ ಡಾ.ಕೆ.ಸಿದ್ದಪ್ಪ ಅಧ್ಯಕ್ಷತೆ ವಹಿಸಿದ್ದರು.ವಿವಿಧ ವಿಭಾಗಗಳ 1115 ವಿದ್ಯಾರ್ಥಿಗಳಿಗೆ ಪದವಿ ಪ್ರಧಾನ ಮಾಡಲಾಯಿತು.







