ನಗರಕ್ಕೆ ಕಾವೇರಿ ನೀರು: 15 ಗಂಟೆಯಲ್ಲಿ ಯಶಸ್ವಿ ಕೊಳವೆ ಜೋಡಣೆ
ಬೆಂಗಳೂರು, ಜು.29: ಶಿವ ಅಣೆಕಟ್ಟಿನಿಂದ ಎನ್.ಬಿ.ಆರ್‌ಗೆ ಬರುವ ಹಾಲಿ ಕೊಳವೆಗೆ ಹೆಚ್ಚುವರಿಯಾಗಿ ನೀರನ್ನು ಪಡೆಯಲು ಜೋಡಣೆ ಕಾಮಗಾರಿ ಯಶಸ್ವಿಯಾಗಿದೆ ಎಂದು ಪ್ರಧಾನ ಮುಖ್ಯ ಅಭಿಯಂತರರಾದ ಕೆಂಪರಾಮಯ್ಯ ತಿಳಿಸಿದರು
ಸುದ್ದಿಗೋಷ್ಠಿಯಲ್ಲಿ ಅವರು ಮಾತನಾಡಿ, ನಗರಕ್ಕೆ ಕಾವೇರಿ ನೀರನ್ನು ಶಿವ ಅಣೆಕಟ್ಟೆಯಿಂದ ಎನ್‌ಬಿಆರ್‌ಗೆ ಕಾಲುವೆಯಿಂದ ನೀರನ್ನು ಹರಿಸಿ ತದನಂತರ ಎನ್‌ಬಿಆರ್ ನಿಂದ ತೊರೆಕಾಡನಹಳ್ಳಿಗೆ ಕೊಳವೆ ಮುಖಾಂತರ ತೆಗೆದುಕೊಳ್ಳಲಾಗುತ್ತಿತ್ತು. ಹೀಗಾಗಿ ತೆರೆದ ಕಾಲುವೆಯಿಂದ ನೀರನ್ನು ಹರಿಸಿದಾಗ ನೀರಿನ ಗುಣಮಟ್ಟದಲ್ಲಿ ಕ್ಷೀಣತೆ ಹಾಗೂ ಆವಿಯಾಗುತ್ತಿತ್ತು. ಇದರಿಂದ ಹಾಲಿ ಕಾವೇರಿಯ 1, 2 ಮತ್ತು 3ನೇ ಹಂತಗಳಿಗೆ ನೀರಿನ ಸಂಪರ್ಕ ಕಲ್ಪಿಸಲು ಜೋಡಣಾ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲಾಯಿತು.
ಜೋಡಣಾ ಕಾರ್ಯ ಕೈಗೆತ್ತಿಕೊಂಡ ಕೇವಲ 15 ಗಂಟೆಯಲ್ಲಿ ಯಶಸ್ವಿಯಾಗಿ ಪೂರೈಸಲಾಗಿದೆ ಎಂದು ಹೇಳಿದರು. ಈ ಯೋಜನೆ ಸುಮಾರು 68ಕೋಟಿ ರೂ ವೆಚ್ಚದಲ್ಲಿ ಪೂರ್ಣಗೊಳಿಸಲಾಗಿದೆ. ಇದರಿಂದ ಆವಿಯಾಗುವ ನೀರಿನ ಪ್ರಮಾಣ ಸಂಪೂರ್ಣವಾಗಿ ಸ್ಥಗಿತಗೊಳ್ಳುತ್ತದೆ. ಹಾಗೂ ನೀರು ಇಂಗುವಿಕೆಯಿಂದ ಆಗುತ್ತಿರುವ ನಷ್ಟ ತಡೆಯಲಾಗುವುದು ಎಂದು ತಿಳಿಸಿದರು.





