ನಿತೀಶ್ ಸಂಪುಟಕ್ಕೆ 26 ನೂತನ ಸಚಿವರ ಸೇರ್ಪಡೆ

ಪಾಟ್ನಾ,ಜು.29: ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಶನಿವಾರ ತನ್ನ ಸಂಪುಟಕ್ಕೆ 26 ನೂತನ ಸಚಿವರನ್ನು ಸೇರ್ಪಡೆ ಮಾಡಿಕೊಂಡರು. ಈ ಪೈಕಿ 14 ಸಚಿವರು ಜಿಡಿಯುಗೆ, 11 ಬಿಜೆಪಿಗೆ ಮತ್ತು ಓರ್ವ ಎನ್‌ಡಿಎ ಮಿತ್ರಪಕ್ಷ ಎಲ್‌ಜೆಪಿಗೆ ಸೇರಿದವರಾಗಿದ್ದಾರೆ. ಜೆಡಿಯು ಜೊತೆಗಿನ ಸಮ್ಮಿಶ್ರ ಸರಕಾರಗಳ ಇತಿಹಾಸದಲ್ಲಿ ಇದೇ ಮೊದಲ ಬಾರಿಗೆ ಬಿಜೆಪಿ ಅತ್ಯಂತ ಹೆಚ್ಚಿನ ಸಚಿವ ಸ್ಥಾನಗಳನ್ನು ಗಿಟ್ಟಿಸಿಕೊಂಡಿದೆ. ಇನ್ನೋರ್ವ ಬಿಜೆಪಿ ಶಾಸಕರೂ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸುವ ನಿರೀಕ್ಷೆಯಿದೆ.
ಈ ಹಿಂದೆ 2010ರಲ್ಲಿ ರಾಜ್ಯದಲ್ಲಿ ಜೆಡಿಯು-ಬಿಜೆಪಿ ಸಮ್ಮಿಶ್ರ ಸರಕಾರವಿದ್ದು, ಬಿಜೆಪಿ 11 ಸಚಿವರನ್ನು ಹೊಂದಿತ್ತು. ಈಗಿನ 53 ಶಾಸಕ ಬಲಕ್ಕೆ ಹೋಲಿಸಿದರೆ ಆಗ ಸದನದಲ್ಲಿ ಬಿಜೆಪಿಯ 91 ಸದಸ್ಯರಿದ್ದರು.
ರಾತ್ರಿಯವರೆಗೂ ಸಚಿವರಿಗೆ ಖಾತೆಗಳನ್ನು ಪ್ರಕಟಿಸಲಾಗಿರಲಿಲ್ಲ.
ಈ ಬಾರಿಯ ಸಂಪುಟದಲ್ಲಿ ಖುರ್ಷಿದ್ ಆಲಂ ಅವರು ಏಕೈಕ ಮುಸ್ಲಿಂ ಮತ್ತು ಮಂಜು ವರ್ಮಾ ಅವರು ಏಕೈಕ ಮಹಿಳಾ ಸಚಿವರಾಗಿದ್ದಾರೆ.
ಹಿಂದಿನ ಸಂಪುಟದಲ್ಲಿದ್ದ ಜೆಡಿಯುನ ಬಿಜೇಂದ್ರ ಯಾದವ, ಶ್ರವಣ ಕುಮಾರ್ ಮತ್ತು ರಾಜೀವ ರಂಜನ ಸಿಂಗ್ ಲಲ್ಲನ್ ನೂತನ ಸಂಪುಟದಲ್ಲಿ ಸಚಿವರಾಗಿ ಮುಂದುವರಿದಿದ್ದಾರೆ.
ಉಪ ಮುಖ್ಯಮಂತ್ರಿ ಸುಶೀಲ ಕುಮಾರ್ ಮೋದಿ ಜೊತೆಗೆ ನಂದಕಿಶೋರ ಯಾದವ ಮತ್ತು ಪ್ರೇಮ ಕುಮಾರ್ ಅವರು ಮಾತ್ರ ಉಭಯ ಸರಕಾರ(2010 ಮತ್ತು 2017)ಗಳಲ್ಲಿನ ಬಿಜೆಪಿ ನಾಯಕರಾಗಿದ್ದಾರೆ.
ಜೆಡಿಯು-ಎನ್‌ಡಿಎ ಸಮ್ಮಿಶ್ರ ಸರಕಾರದ ನಡುವಿನ ಒಡಂಬಡಿಕೆಯಂತೆ ಜೆಡಿಯು ಒಟ್ಟು 19, ಬಿಜೆಪಿ 13 ಹಾಗೂ ಎನ್‌ಡಿಎ ಮಿತ್ರಪಕ್ಷಗಳಾದ ಎಲ್‌ಜೆಪಿ, ಎಚ್‌ಎಎಂ ಹಾಗೂ ಆರ್‌ಎಲ್‌ಎಸ್‌ಪಿ ತಲಾ ಓರ್ವ ಸಚಿವರನ್ನು ಹೊಂದಿರಲಿವೆ.
ಕೇಂದ್ರಸಚಿವ ಉಪೇಂದ್ರ ಕುಮಾರ್ ಕುಶವಾಹ್ ನೇತೃತ್ವದ ಆರ್‌ಎಲ್‌ಎಸ್‌ಪಿ ಸಚಿವ ಸ್ಥಾನಕ್ಕೆ ತನ್ನ ಪ್ರತಿನಿಧಿಯನ್ನು ಇನ್ನಷ್ಟೇ ಸೂಚಿಸಬೇಕಾಗಿದೆ. ಎಲ್‌ಜೆಪಿಯಿಂದ ಕೇಂದ್ರ ಸಚಿವ ರಾಮ ವಿಲಾಸ್ ಪಾಸ್ವಾನ್ ಅವರ ಸೋದರ ಪಶುಪತಿ ಪಾರಸ್ ಅವರು ಸಂಪುಟಕ್ಕೆ ಸೇರ್ಪಡೆಗೊಂಡಿದ್ದಾರೆ, ಸದ್ಯಕ್ಕೆ ಅವರು ವಿಧಾನ ಮಂಡಲದ ಯಾವುದೇ ಸದನದ ಸದಸ್ಯರಾಗಿಲ್ಲ.
ತನ್ನ ಎಚ್‌ಎಎಂ ಪಕ್ಷದ ಏಕೈಕ ಶಾಸಕರಾಗಿರುವ ಜಿತನ್ ರಾಮ ಮಂಝಿ ಸಚಿವ ಹುದ್ದೆಯ ಕೊಡುಗೆಯನ್ನು ತಳ್ಳಿ ಹಾಕಿದ್ದು, ಸದನದಿಂದ ಹೊರತಾಗಿರುವ ಪಕ್ಷದ ಸದಸ್ಯನ ಹೆಸರನ್ನು ಸೂಚಿಸಿದ್ದಾರೆ. ಆದರೆ ಈ ಬಗ್ಗೆ ಇನ್ನಷ್ಟೇ ನಿರ್ಧಾರ ಅಂತಿಮಗೊಳ್ಳಬೇಕಿದೆ.
ಮಾಜಿ ಬಿಹಾರ ಬಿಜೆಪಿ ಅಧ್ಯಕ್ಷ ಹಾಗು ಚುನಾವಣೆ ಸನ್ನಿಹಿತವಾಗಿರುವ ಹಿಮಾಚಲ ಪ್ರದೇಶದಲ್ಲಿ ಪಕ್ಷದ ಸಂಘಟನೆಯ ಉಸ್ತುವಾರಿ ಹೊಂದಿರುವ ಮಂಗಲ್ ಪಾಂಡೆ ಅವರು ವಿಮಾನಯಾನದಲ್ಲಿ ವಿಳಂವದಿಂದಾಗಿ ಪ್ರಮಾಣ ವಚನ ಸ್ವೀಕರಿಸಲು ಸಾಧ್ಯವಾಗಲಿಲ್ಲ.







