ಕಡೂರು: ಬಸ್ ನಿಲ್ದಾಣದಲ್ಲಿ ಮನಸೂರೆಗೊಂಡ ಮಕ್ಕಳ ಕಲರವ

ಕಡೂರು, ಜು. 29: ಸದಾ ಜನಜಂಗುಳಿಯಿಂದ ಕೂಡಿದ್ದ ಪಟ್ಟಣದ ಸಾರಿಗೆ ಬಸ್ ನಿಲ್ದಾಣದಲ್ಲಿ ಶನಿವಾರ ಪ್ರಜ್ಞಾ ಶಾಲೆಯ ಮಕ್ಕಳ ಕಲರವ. ನಿಲ್ದಾಣದ ಆವರಣದೊಳಗೆ ಸಾಮಾಜಿಕ ಕಳಕಳಿಯ ರೂಪಕಗಳನ್ನು ಅಭಿನಯಿಸಿ ಜನರ ಮನಸೂರೆಗೊಂಡರು.
ಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳು ಪ್ರಸ್ತುತ ಪಡಿಸಿದ ಈ ಮೈಮ್ ವಿಧಾನದ ರೂಪಕದಲ್ಲಿ ಪರಿಸರದ ಬಗ್ಗೆ ಜಾಗೃತಿ, ಮಹಿಳೆಯರ ಶೋಷಣೆ, ಕುಡಿಯುವ ನೀರಿನ ಮಿತ ಬಳಕೆ ಮತ್ತು ವಾಹನಗಳನ್ನು ಚಲಾಯಿಸುವಾಗ ಮೊಬೈಲ್ ಬಳಕೆ ಕುರಿತಂತೆ ಜಾಗೃತಿ ಮೂಡಿಸಲಾಯಿತು.
ರೈಲೊಂದು ಚಲಿಸುತ್ತಾ ನಿಲ್ದಾಣಕ್ಕೆ ಬರುತ್ತದೆ. ಪ್ರಯಾಣಿಕನೋರ್ವ ನೀರು ಕುಡಿಯಲು ಇಳಿಯುತ್ತಾನೆ. ಅಷ್ಟರಲ್ಲಿ ರೈಲು ಹೊರಡುತ್ತದೆ. ರೈಲಿಗೆ ಹತ್ತುವ ಭರದಲ್ಲಿ ಪ್ರಯಾಣಿಕ ನೀರಿನ ನಲ್ಲಿ ನಿಲ್ಲಿಸುವುದನ್ನು ಮರೆತು ಹೋಗುತ್ತಾನೆ. ನೀರು ಪೋಲಾಗುತ್ತಾ ಹೋಗುವ ಈ ಸರಳ ಸನ್ನಿವೇಶವನ್ನು ವಿದ್ಯಾರ್ಥಿಗಳು ಮಾತೇ ಇಲ್ಲದೆ ಕೇವಲ ಅಭಿನಯದ ಮೂಲಕ ಪ್ರಸ್ತುತ ಪಡಿಸಿದ್ದು, ನಿಲ್ದಾಣದಲ್ಲಿದ್ದ ಬಹುತೇಕ ಪ್ರಯಾಣಿಕರಿಗೆ ಮಾರ್ಮಿಕವಾಗಿ ತಟ್ಟಿತು.
ನಂತರ ಪರಿಸರ ಜಾಗೃತಿಯ ಬಗ್ಗೆ ರೂಪಕ ಪ್ರಸ್ತುತ ಪಡಿಸಿದ ವಿದ್ಯಾರ್ಥಿಗಳು ಕಾಡಿನಲ್ಲಿ ಮರವೊಂದರ ಪಕ್ಕ ವ್ಯಕ್ತಿಯೋರ್ವ ನಾಲ್ಕು ಸಸಿಗಳನ್ನು ನೆಟ್ಟು ಪೋಷಿಸುತ್ತಿರುತ್ತಾನೆ. ಆದರೆ ಮರಗಳ್ಳರು ಆ ಮರವನ್ನು ಕಡಿಯುತ್ತಾರೆ. ಇದರಿಂದ ಆಗುವ ಅನಾಹುತಗಳನ್ನು ರೂಪಕದಲ್ಲಿ ಎಳೆ-ಎಳೆಯಾಗಿ ಬಿಡಿಸಿಟ್ಟರು.
ಬಸ್ ನಿಲ್ದಾಣಕ್ಕೆ ವಿದ್ಯಾರ್ಥಿಯೊಬ್ಬಳು ಶಾಲೆಗೆ ಹೋಗಲು ಬರುತ್ತಾಳೆ. ಅಲ್ಲಿ ಇಬ್ಬರು ವಿದ್ಯಾರ್ಥಿಗಳು ಅವಳನ್ನು ಕೆಣಕುತ್ತಾರೆ. ಮರುದಿನ ಕೆಣಕುವ ವಿದ್ಯಾರ್ಥಿಗಳ ಸಂಖ್ಯೆ ಹೆಚ್ಚಾಗುತ್ತದೆ. ಅಂತಿಮವಾಗಿ ರೋಸಿ ಹೋದ ವಿದ್ಯಾರ್ಥಿನಿ ತನ್ನ ಇತರೆ ಸಹಪಾಠಿಗಳೊಂದಿಗೆ ಕೆಣಕುತ್ತಿದ್ದ ವಿದ್ಯಾರ್ಥಿಗಳ ಮೇಲೆ ಮುಗಿಬಿದ್ದು ಪಾಠ ಕಲಿಸುವ ರೂಪಕ ಕೂಡ ನೋಡುಗರ ಗಮನ ಸೆಳೆಯಿತು.
ಹೀಗೆ ಕೇವಲ 1 ಗಂಟೆ ಸಮಯದಲ್ಲಿ ಪ್ರಜ್ಞಾ ಶಾಲೆಯ ವಿದ್ಯಾರ್ಥಿಗಳು ನಾಲ್ಕು ವಿಭಿನ್ನ ಬಗೆಯ ರೂಪಕಗಳನ್ನು ಅಭಿನಯಿಸಿದ್ದು ಸಾರಿಗೆ ಬಸ್ ನಿಲ್ದಾಣದಲ್ಲಿದ್ದ ಪ್ರಯಾಣಿಕರಿಗೆ ಮತ್ತು ಇತರೆ ನಾಗರೀಕರಿಗೆ ಸಂತೋಷ ತಂದುಕೊಟ್ಟಿತ್ತು. ಕಳೆದ ವರ್ಷ ಈ ಶಾಲೆಯ ವಿದ್ಯಾರ್ಥಿಗಳು ತಾಲೂಕಿನ ಜಿ. ತಿಮ್ಮಾಪುರ ಗ್ರಾಮದಲ್ಲಿ ಕೃಷಿ ಚಟುವಟಿಕೆ ಬಗ್ಗೆ ಅರಿವು ಪಡೆದುಕೊಳ್ಳುವ ಮತ್ತು ಸ್ವತಃ ಕೃಷಿ ಚಟುವಟಿಕೆಗಳಲ್ಲಿ ಪಾಲ್ಗೊಂಡು ರೈತಾಪಿ ಜನರ ಕಷ್ಟಗಳನ್ನು ಕಣ್ಣಾರೆ ಕಂಡಿದ್ದರು.
ಒಟ್ಟಾರೆ ಈ ಬಾರಿ ಶಾಲೆಯ ವಿದ್ಯಾರ್ಥಿಗಳ ರೂಪಕಗಳ ಅಭಿನಯದ ಈ ಮೊದಲ ಪ್ರಯತ್ನ ಯಶಸ್ವಿಯಾಗಿದೆ. ಮುಂದಿನ ದಿನಗಳಲ್ಲಿ ಇನ್ನಷ್ಟು ಕ್ರಿಯಾಶೀಲತೆಯ ಪ್ರಯೋಗಗಳು ಹೊರಹೊಮ್ಮಲಿ ಎನ್ನುವುದು ಪೋಷಕರು ಮತ್ತು ನಾಗರೀಕರ ಅಭಿಪ್ರಾಯ.
ಈ ಸಮಯದಲ್ಲಿ ಶಾಲೆಯ ಆಡಳಿತ ಮಂಡಳಿ ಕಾರ್ಯದರ್ಶಿ ಎನ್.ಪಿ. ಮಂಜುನಾಥಪ್ರಸನ್ನ ಮತ್ತಿತರರಿದ್ದರು.







