ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಿಗೆ ತುರ್ತಾಗಿ ಸ್ಪಂದಿಸಿ : ಎಸ್‌ಪಿ ಸೂಚನೆ
ಚಾಮರಾಜನಗರ, ಜು. 29 : ಪರಿಶಿಷ್ಟ ಜಾತಿ, ಪರಿಶಿಷ್ಟ ವರ್ಗಗಳ ಮೇಲಿನ ದೌರ್ಜನ್ಯ ಕುರಿತು ದೂರುಗಳು ಬಂದಲ್ಲಿ ತಕ್ಷಣವೇ ಪ್ರಕರಣ ದಾಖಲು ಮಾಡಿಕೊಂಡು ಮುಂದಿನ ಕ್ರಮ ಕೈಗೊಳ್ಳಬೇಕೆಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಧರ್ಮೇಂದ್ರ ಕುಮಾರ್ ಮೀನಾ ಪೋಲೀಸ್ ಅಧಿಕಾರಿಗಳಿಗೆ ಸೂಚನೆ ನೀಡಿದರು.
ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಸಭಾಂಗಣದಲ್ಲಿ ಇಂದು ನಡೆದ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಗಳಿಗೆ ಸಂಬಂಧಿಸಿದ ಮಾಸಿಕ ಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಪರಿಶಿಷ್ಟರ ಮೇಲೆ ನಡೆಯುವ ದೌರ್ಜನ್ಯ ಪ್ರಕರಣಗಳ ಬಗ್ಗೆ ತುರ್ತಾಗಿ ಸ್ಪಂದಿಸಬೇಕು. ಅಸ್ಪಶ್ಯತಾ ದೌರ್ಜನ್ಯ ತಡೆ ಕಾಯಿದೆ ಪ್ರಕಾರ ಪರಿಶಿಷ್ಟರಿಗೆ ರಕ್ಷಣೆ ಒದಗಿಸುವುದು ಪೊಲೀಸರ ಮುಖ್ಯ ಹೊಣೆಗಾರಿಕೆಯಾಗಿದೆ. ಪರಿಶಿಷ್ಟರ ಮೇಲೆ ಯಾವುದೇ ಭಾಗದಲ್ಲಿ ದೌರ್ಜನ್ಯ, ದಬ್ಬಾಳಿಕೆ ನಡೆದ ಕುರಿತು ದೂರುಗಳು ಬಂದರೆ ವಿಳಂಬ ಮಾಡದೆ ಪ್ರಕರಣ ದಾಖಲಿಸಿಕೊಂಡು ಅಗತ್ಯ ಪ್ರಕ್ರಿಯೆಗೆ ಮುಂದಾಗಬೇಕೆಂದು ತಿಳಿಸಿದರು. ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳ ಜನರ ಮೇಲೆ ಉಂಟಾಗುವ ಪ್ರಕರಣಗಳ ಬಗ್ಗೆ ಯಾವುದೇ ಪೊಲೀಸ್ ಠಾಣೆಯಲ್ಲಿ ದೂರು ಸ್ವೀಕರಿಸಲು ನಿರಾಕರಿಸಿದರೆ ಅಥವಾ ಅನಗತ್ಯವಾಗಿ ತೊಂದರೆ ನೀಡುವುದು ಕಂಡುಬಂದರೆ ನೇರವಾಗಿ ತಮಗೆ ದೂರು ನೀಡಬಹುದು. ದೂರವಾಣಿ ಮೂಲಕವೂ ಸಂಪರ್ಕಿಸಬಹುದು. ಪರಿಶಿಷ್ಟರಿಗೆ ರಕ್ಷಣೆ ನೀಡುವ ವಿಷಯದಲ್ಲಿ ಪೊಲೀಸರು ಕಟ್ಟುನಿಟ್ಟಾಗಿ ಕರ್ತವ್ಯ ನಿರ್ವಹಿಸಲು ಸೂಚನೆ ನೀಡಿರುವುದಾಗಿ ಧಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಸಭೆಯಲ್ಲಿ ಮುಖಂಡರು ಪ್ರಸ್ತಾಪಿಸಿರುವ ವಿಷಯಗಳ ಬಗ್ಗೆ ಗಮನ ಹರಿಸಲಾಗುವುದು. ಸಭೆಯಲ್ಲಿ ಕೇಳಿಬಂದಿರುವ ದೂರುಗಳ ಕುರಿತು ಸಂಬಂಧಪಟ್ಟ ಪೊಲೀಸ್ ಠಾಣೆ ಅಧಿಕಾರಿಗಳಿಂದ ಸ್ಪಷ್ಟ ಮಾಹಿತಿ ಪಡೆದು ಮುಂದಿನ ಕ್ರಮ ವಹಿಸಲು ಸೂಚನೆ ನೀಡಲಾಗುವುದು. ಯಾವುದೇ ಪ್ರಕರಣಕ್ಕೆ ಸಂಬಂಧಿಸಿದಂತೆ ನಿರ್ಧಿಷ್ಟ ಅಂಶಗಳನ್ನು ಒಳಗೊಂಡ ಲಿಖಿತ ಪತ್ರವನ್ನು ನೀಡಿದಲ್ಲಿ ವಹಿಸಬೇಕಿರುವ ಮುಂದಿನ ಹಂತದ ಕ್ರಮಕ್ಕೆ ತಕ್ಷಣವೇ ಸ್ಪಂದಿಸಲು ನಿರ್ದೇಶನ ನೀಡಲಾಗುವುದು ಎಂದು ಧರ್ಮೇಂದ್ರ ಕುಮಾರ್ ಮೀನಾ ತಿಳಿಸಿದರು.
ಜಿಲ್ಲಾಧಿಕಾರಿ ಡಾ. ಕೆ. ಹರೀಶ್ ಕುಮಾರ್ ಅವರು ಮಾತನಾಡಿ, ಪರಿಶಿಷ್ಟರ ಮೇಲಿನ ದೌರ್ಜನ್ಯ ಪ್ರಕರಣಗಳಲ್ಲಿ ಅಧಿಕಾರಿಗಳು ಸರಿಯಾದ ಕ್ರಮವನ್ನು ವಹಿಸುತ್ತಿಲ್ಲವೆಂಬ ಬಗ್ಗೆ ಪರಿಶೀಲಿಸಲಾಗುವುದು. ಅನ್ಯಾಯಕ್ಕೆ ಒಳಗಾದವರಿಗೆ ನ್ಯಾಯ ಒದಗಿಸಲು ಯಾವುದೇ ವಿಳಂಬ ಧೋರಣೆ ಅನುಸರಿಸದೆ ತ್ವರಿತವಾಗಿ ಪರಿಹಾರ ಇತ್ಯರ್ಥಕ್ಕೆ ಕ್ರಮ ತೆಗೆದುಕೊಳ್ಳಲಾಗುವುದು ಎಂದರು.
ಪರಿಶಿಷ್ಟರು ಇತರೆ ವರ್ಗದವರ ಗಂಭೀರ ಸಮಸ್ಯೆಗಳಿಗೆ ಸಂಬಂಧಿಸಿದಂತೆ ಇನ್ನು ಮುಂದೆ ಆಯಾ ಭಾಗದಲ್ಲೇ ಸಭೆಗಳನ್ನು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಗಳೊಂದಿಗೆ ತಾವು ನಡೆಸಲು ಚಿಂತನೆ ಮಾಡಲಾಗಿದೆ. ವಿಶೇಷವಾಗಿ ನಾಗರಿಕರು ಜಿಲ್ಲಾ ಕೇಂದ್ರಕ್ಕೆ ಬಂದು ಸಮಸ್ಯೆ ನಿವೇದಿಸಿಕೊಳ್ಳಲು ಸಾಧ್ಯವಾಗದ ಸ್ಥಳಗಳಲ್ಲಿ ಸಭೆ ಆಯೋಜಿಸುವುದರಿಂದ ಜನರಿಗೂ ಅನುಕೂಲವಾಗುತ್ತದೆ. ಹಿರಿಯ ಅಧಿಕಾರಿಗಳಿಗೂ ಸಮಸ್ಯೆಯ ಸಂಪೂರ್ಣ ಚಿತ್ರಣ ಲಭಿಸಲಿದ್ದು ಪರಿಹಾರ ಕ್ರಮಗಳಿಗೆ ಸಾಧ್ಯವಾಗಲಿದೆ ಎಂದು ಹರೀಶ್ ಕುಮಾರ್ ತಿಳಿಸಿದರು.
ಇನ್ನಿತರ ಸಮಸ್ಯೆಗಳ ಬಗ್ಗೆಯೂ ಸಭೆಯಲ್ಲಿ ಸುದೀರ್ಘವಾಗಿ ಚರ್ಚಿಸಲಾಯಿತು. ಮುಖಂಡರಾದ ವೆಂಕಟರಮಣ ಪಾಪು, ಪಿ. ಸಂಘಸೇನ, ಆಲೂರು ನಾಗೇಂದ್ರ, ಕಂದಹಳ್ಳಿ ನಾರಾಯಣ, ದೊಡ್ಡಿಂದುವಾಡಿ ಸಿದ್ಧರಾಜು, ರಾಮಸಮುದ್ರ ಸುರೇಶ್, ಮೂಡ್ನಾಕೂಡು ಪ್ರಕಾಶ್, ಶಿವಣ್ಣ, ನಾಗೇಶ್, ಅಂಬರೀಶ್, ಬ್ಯಾಡಮೂಡ್ಲು ಬಸವಣ್ಣ, ರವಿಕುಮಾರ್, ಮಾಂಬಳ್ಳಿ ರಾಮು, ಹೊನ್ನೇಗೌಡನಹಳ್ಳಿ ರವಿಕುಮಾರ್, ಬದನಗುಪ್ಪೆ ಸುರೇಶ್, ಮಹೇಶ್, ಇನ್ನಿತರರು ಪರಿಶಿಷ್ಟ ಸಮಸ್ಯೆಗಳ ಬಗ್ಗೆ ಗಮನ ಸೆಳೆದರು.
ಜಿಲ್ಲಾ ಪಂಚಾಯತ್ ಉಪಕಾರ್ಯದರ್ಶಿ ಮುನಿರಾಜಪ್ಪ, ಡಿವೈಎಸ್‌ಪಿ ಗಂಗಾಧರಸ್ವಾಮಿ, ಪುಟ್ಟಮಾದಯ್ಯ, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕರಾದ ಸತೀಶ್, ಅಬಕಾರಿ ಅಧಿಕಾರಿಗಳು ಸಭೆಯಲ್ಲಿ ಹಾಜರಿದ್ದರು.







