ಮೈಷುಗರ್ ಮತ್ತೆ ಆರಂಭ: ಆತಂಕಗೊಳ್ಳದಿರಲು ಅಧಿಕಾರಿ ಮನವಿ

ಮಂಡ್ಯ, ಜು.29: ನಗರದ ಮೈಷುಗರ್ ಕಾರ್ಖಾನೆಯಲ್ಲಿನ ಸಹ ವಿದ್ಯುತ್ ಘಟಕದಲ್ಲಿನ ಟ್ಯೂಬ್‌ಗಳು ಪಂಚರ್ ಆಗಿದ್ದರಿಂದ ಕಳೆದ ಐದು ದಿನಗಳಿಂದ ಸ್ಥಗಿತಗೊಂಡಿದ್ದ ಕಬ್ಬು ಅರೆಯುವಿಕೆ ಶನಿವಾರ ಮತ್ತೆ ಪುನರಾರಂಭಗೊಂಡಿದೆ ಎಂದು ಪ್ರಧಾನ ವ್ಯವಸ್ಥಾಪಕ ಬೋರೇಗೌಡ ತಿಳಿಸಿದ್ದಾರೆ.
ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಹ ವಿದ್ಯುತ್ ಘಟಕದಲ್ಲಿನ ಟ್ಯೂಬ್‌ಗಳು ಒಡೆದು ಹೋಗಿದ್ದವು. ಅಲ್ಲದೆ, ಕಳೆದ ಎರಡೂವರೆ ವರ್ಷಗಳಿಂದ ನಿಂತಿದ್ದ ಕಾರ್ಖಾನೆಗೆ ಯಂತ್ರಗಳು ಹೊಂದಿಕೊಳ್ಳುತ್ತಿರುವುದರಿಂದ ಸಣ್ಣಪುಟ್ಟ ತಾಂತ್ರಿಕ ದೋಷಗಳು ಕಂಡು ಬರುತ್ತವೆ. ಅವುಗಳನ್ನೆಲ್ಲವನ್ನು ಸರಿಪಡಿಸಿಕೊಂಡು ಕಬ್ಬು ಅರೆಯುವಿಕೆಯನ್ನು ಮುಂದುವರಿಸಲಾಗಿದೆ ಎಂದರು.
ಯಾವುದೇ ಕಾರಣಕ್ಕೂ ಕಾರ್ಖಾನೆಯನ್ನು ಸ್ಥಗಿತಗೊಳಿಸುವುದಿಲ್ಲ. ಇದರ ಬಗ್ಗೆ ರೈತರಲ್ಲಿ ಆತಂಕ ಬೇಡ. ಕಾರ್ಖಾನೆಯಲ್ಲಿ ಸಣ್ಣಪುಟ್ಟ ದೋಷಗಳು ಕಂಡು ಬರುತ್ತವೆ. ಅದನ್ನೇ ದೊಡ್ಡದು ಮಾಡುವ ಅಗತ್ಯವಿಲ್ಲ. ಏನೇ ಸಮಸ್ಯೆಗಳು ಬಂದರೂ ಬಗೆಹರಿಸಿಕೊಂಡು ಕಬ್ಬು ಅರೆಯಲಾಗುವುದು. ಈ ವರ್ಷ 3 ಲಕ್ಷ ಟನ್ ಕಬ್ಬು ಅರೆಯುವ ಗುರಿ ಹೊಂದಲಾಗಿದೆ. ಇಲ್ಲಿಯವರೆಗೆ ಒಂದು ಲಕ್ಷ ಟನ್ ಕಬ್ಬು ಅರೆದಿದ್ದು, ರೈತರು ಸರಬರಾಜು ಮಾಡುವ ಎಲ್ಲ ಕಬ್ಬನ್ನು ಅರೆಯುವ ಗುರಿ ಹೊಂದಲಾಗಿದೆ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ರೈತ ಸಂಘದ(ಮೂಲ ಸಂಘಟನೆ) ಕಾರ್ಯಕರ್ತರು ಕಾರ್ಖಾನೆಗೆ ಭೇಟಿ ನೀಡಿ, ಯಾವುದೇ ಕಾರಣಕ್ಕೂ ಕಬ್ಬು ಅರೆಯುವಿಕೆಯನ್ನು ನಿಲ್ಲಿಸಬಾರದು ಎಂದರಲ್ಲದೆ, ಸಹ ವಿದ್ಯುತ್ ಘಟಕ ದುರಸ್ತಿಯನ್ನು ಖಾಸಗಿ ಕಂಪನಿಗೆ ವಹಿಸಿರುವುದು ಸರಿಯಲ್ಲ ಎಂದು ಕಿಡಿಕಾರಿದರು.
ಚರ್ಮ ರೋಗ ತಜ್ಞ ಹಾಗೂ ಜಿಪಂ ಮಾಜಿ ಸದಸ್ಯ ಎಚ್.ಸಿ.ಶಂಕರೇಗೌಡ, ರೈತ ಮುಖಂಡರಾದ ಸಂಘದ ಜಿಲ್ಲಾಧ್ಯಕ್ಷ ಚಂದ್ರಶೇಖರ್, ಹೆಮ್ಮಿಗೆ ಚಂದ್ರಶೇಖರ್, ಇಂಡುವಾಳು ಚಂದ್ರಶೇಖರ್, ಸುಧೀರ್‌ಕುಮಾರ್, ಇಂಡುವಾಳು ಬಸವರಾಜು, ತಮ್ಮಯ್ಯ, ಜಿಪಂ ಮಾಜಿ ಸದಸ್ಯ ಡಾ.ಶಂಕರೇಗೌಡ, ಇತರರು ಹಾಜರಿದ್ದರು.







