ಶಿವಪುರ: ಹೊಸ ಮದ್ಯದಂಗಡಿಗೆ ಗ್ರಾಮಸ್ಥರ ವಿರೋಧ, ಪ್ರತಿಭಟನೆ

ಹೆಬ್ರಿ, ಜು.29: ಶಿವಪುರ ಗ್ರಾಮದಲ್ಲಿ ಹೊಸ ಮದ್ಯದಂಗಡಿ ತೆರೆಯಲು ಪರವಾನಿಗೆಯನ್ನು ನೀಡದಂತೆ ಒತ್ತಾಯಿಸಿ ಶಿವಪುರದ ಗ್ರಾಮಸ್ಥರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ನೇತೃತ್ವದಲ್ಲಿ ಶಂಕರದೇವ ದೇವಸ್ಥಾನದ ಸಭಾಂಗಣದಲ್ಲಿ ಪ್ರತಿಭಟನೆ ನಡೆಸಿದರು.
ಶಿವಪುರ ಗ್ರಾಮಕ್ಕೆ ಇದುವರೆಗೆ ಮದ್ಯದಂಗಡಿ ಕಾಲಿಟ್ಟಿಲ್ಲ. ಈಗ ಜಿಲ್ಲೆ ಯಾದ್ಯಂತ ಹೆದ್ದಾರಿ ಕಾನೂನಿನ ತೊಡಕಿನಿಂದ ಬಂದ್ ಆಗಿರುವ ಮದ್ಯದಂಗಡಿಯ ಪರವಾನಿಗೆ ಪಡೆದು ಶಿವಪುರದಲ್ಲಿ ಹೊಸ ಮದ್ಯದಂಗಡಿ ತೆರೆಯಲು ಪ್ರಯತ್ನ ನಡೆಯುತ್ತಿದ್ದು, ಮಾಹಿತಿ ಪಡೆದ ಗ್ರಾಮಸ್ಥರು ಇದನ್ನು ತೀವ್ರವಾಗಿ ವಿರೋಧಿಸಿದ್ದಾರೆ.
ಪ್ರತಿಭಟನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜನಜಾಗೃತಿ ಸಮಿತಿ ಅಧ್ಯಕ್ಷ ನೀರೆ ಕೃಷ್ಣ ಶೆಟ್ಟಿ, ಶಿವಪುರದಲ್ಲಿ ಮದ್ಯದಂಗಡಿ ತೆರೆಯದಂತೆ ನಾವೆಲ್ಲರೂ ಒಂದು ಧೀಕ್ಷೆ ತೆಗೆದುಕೊಳ್ಳಬೇಕು. ನಮ್ಮೂರಿಗೆ ಬಂದ ಮಹಾಮಾರಿಯನ್ನು ಓಡಿಸಬೇಕು. ಶಿವಪುರದಲ್ಲಿ ಚಂದದ ವಾತಾವರಣ ನಿರ್ಮಾಣವಾಗಬೇಕು ಎಂದರು.
ಶಿವಪುರ ಗ್ರಾಪಂ ಸದಸ್ಯರಾದ ಬಿಜೆಪಿ ಶಕ್ತಿ ಕೇಂದ್ರದ ಅಧ್ಯಕ್ಷ ಹುಣ್ಸೆದಡಿ ಸುರೇಶ್ ಶೆಟ್ಟಿ ಮಾತನಾಡಿ ಶಿವಪುರ ಗ್ರಾಮದಲ್ಲಿ ಮದ್ಯದಂಗಡಿ ತೆರಯಲು ತೆರೆಮರೆಯ ಯತ್ನ ನಡೆಯುತ್ತಿದ್ದು, ಇದರ ವಿರುದ್ಧ ಧರ್ಮಸ್ಥಳ ಯೋಜನೆ ನೇತೃತ್ವದಲ್ಲಿ ನಡೆಯುವ ಹೋರಾಟಕ್ಕೆ ಶಿವಪುರ ಗ್ರಾಪಂ ಸಂಪೂರ್ಣ ಬೆಂಬಲ ನೀಡುತ್ತದೆ ಎಂದರು.
ಪ್ರತಿಟಭಾ ಸಭೆಯ ಬಳಿಕ ಮೆರವಣಿಗೆಯಲ್ಲಿ ಶಿವಪುರ ಗ್ರಾಪಂಗೆ ಬಂದು ಪಂಚಾಯತ್ ಅಭಿವೃದ್ಧಿ ಅಧಿಕಾರಿ ಶೋಭಾವತಿ ಶೆಟ್ಟಿ ಅವರಿಗೆ ಮನವಿ ಸಲ್ಲಿಸಲಾಯಿತು. ಮನವಿ ಸ್ವೀಕರಿಸಿದ ಪಿಡಿಒ ಮದ್ಯದಂಗಡಿ ತೆರಯಲು ಗ್ರಾಪಂ ಪರವಾನಗೆ ನೀಡುವುದಿಲ್ಲ ಎಂದರು.
ಪ್ರತಿಭಟನೆಯಲ್ಲಿ ತಾಪಂ ಸದಸ್ಯ ರಮೇಶ್ ಕುಮಾರ್, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರ್ಕಳ ತಾಲೂಕು ಯೋಜನಾಧಿಕಾರಿ ಕೃಷ್ಣ ಟಿ, ಶಿವಪುರ ಶಂಕರದೇವ ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಬಿಲ್ಲುಬೈಲು ಸುರೇಶ ಶೆಟ್ಟಿ, ಶಿವಪುರ ಗ್ರಾಪಂ ಅಧ್ಯಕ್ಷೆ ಸುಗಂಧಿ ನಾಯ್ಕಾ, ಜನಜಾಗೃತಿ ಸಮಿತಿ ಸದಸ್ಯರಾದ ಜಗನ್ನಾಥ ಕುಲಾಲ್, ಯೋಜನೆಯ ವಲಯಾಧ್ಯಕ್ಷ ಸುಧಾಕರ ಶೆಟ್ಟಿ, ನವಜೀವನ ಸಮಿತಿಯ ಅಧ್ಯಕ್ಷ ಬಡಿಯ, ಮೇಲ್ವಿಚಾರಕರಾದ ಹರೀಶ್ ಆಚಾರ್ಯ, ಗಿರೀಶ್ ಕುಮಾರ್, ನಾರತ್ನಾ, ಶಶಿಕಲಾ ಉಪಸ್ಥಿತರಿದ್ದರು.







